ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

250 ಹಾಸಿಗೆಗಳ ಕೋವಿಡ್‌ ಕೇರ್ ಕೇಂದ್ರ ಸಜ್ಜು

ಎಂಜಿನಿಯರಿಂಗ್‌ ಕಾಲೇಜಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ, ಪರಿಶೀಲನೆ
Last Updated 19 ಜುಲೈ 2020, 16:42 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಹೊರವಲಯದ ಬೇಡರಪುರದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 250 ಹಾಸಿಗೆ ಸಾಮರ್ಥ್ಯಗಳ ಕೋವಿಡ್‌ ಕೇರ್‌ ಕೇಂದ್ರವನ್ನು ಜಿಲ್ಲಾಡಳಿತ ಸಜ್ಜುಗೊಳಿಸಿದೆ.

ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾದಲ್ಲಿ ಮೊದಲು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಬಳಿಕ ಆರೋಗ್ಯ ಸುಧಾರಣೆಯಾಗಿರುವ ಹಾಗೂ ರೋಗಲಕ್ಷಣಗಳಿಲ್ಲದವರನ್ನು ಕೋವಿಡ್ ಕೇರ್ ಕೇಂದ್ರಗಳಲ್ಲಿ ಇರಿಸಿ ಆರೈಕೆ ಮಾಡಲಾಗುತ್ತದೆದೆ.

ಎಂಜಿನಿಯರಿಂಗ್ ಕಾಲೇಜಿನಮೆಕ್ಯಾನಿಕ್ ಬ್ಲಾಕ್‌ನಲ್ಲಿ 150 ಹಾಸಿಗೆಗಳು ಹಾಗೂ ಸಿವಿಲ್ ಬ್ಲಾಕ್‌ನಲ್ಲಿ 100 ಹಾಸಿಗೆಗಳನ್ನು ಹಾಕಲಾಗಿದೆ. ಪ್ರತ್ಯೇಕ ಶೌಚಾಲಯಗಳು ಮತ್ತು ಸ್ನಾನದ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಬಿಸಿನೀರಿನ ವ್ಯವಸ್ಥೆಗಾಗಿ ಗೀಸರ್‌ಗಳನ್ನು ಅಳವಡಿಸಲಾಗುತ್ತಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶನಿವಾರ ಕಾಲೇಜಿಗೆ ಭೇಟಿ ನೀಡಿ ಕೋವಿಡ್ ಕೇರ್ ಕೇಂದ್ರದಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.

‘ಕೇಂದ್ರಕ್ಕೆ ದಾಖಲಾಗುವವರಿಗೆ ದಿನಬಳಕೆಯ ಸಾಬೂನು, ಹಲ್ಲುಜ್ಜುವ ‌ಬ್ರಷ್, ಪೇಸ್ಟ್, ಇನ್ನಿತರೆ ವಸ್ತುಗಳನ್ನೊಳಗೊಂಡ ಕಿಟ್‌ಗಳನ್ನು ನೀಡಬೇಕು. ಕೇಂದ್ರಗಳಲ್ಲಿ ಮನೆಯ ವಾತಾವರಣದಂತೆಯೇ ಭಾಸವಾಗುವ ಆಹ್ಲಾದಕರ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಿಯೂ ಆಸ್ಪತ್ರೆ ಎಂಬ ಭಾವಿಸದಂತೆ ಉತ್ತಮ ಪರಿಸರ ನಿರ್ಮಾಣ ಮಾಡಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಮನರಂಜನೆಗಾಗಿ ದೊಡ್ಡ ಟಿವಿಗಳನ್ನು ಅಳವಡಿಸಿ. ಮಕ್ಕಳಿಗೆ ಬೇಸರವಾಗದಂತೆ ಕಾಲಕಳೆಯಲು ಆಟಿಕೆಗಳನ್ನು ನೀಡಿ. ದಿನಪತ್ರಿಕೆ, ನಿಯತಕಾಲಿಕೆಗಳನ್ನು ಇಡುವ ವ್ಯವಸ್ಥೆ ಮಾಡಿ ಎಂದೂ ಹೇಳಿದರು.

ಸೋಂಕಿತರಿಗೆಬಿಸಿ ಹಾಗೂ ಶುಚಿಯಾದ ಆಹಾರ ಪೂರೈಕೆ ಮಾಡಬೇಕು. ಸರ್ಕಾರ ನಿಗದಿಪಡಿಸಿದ ಮೆನು ಪ್ರಕಾರವೇ ಊಟ, ಉಪಾಹಾರ ವಿತರಿಸಬೇಕು. ಊಟ ತಿಂಡಿಯ ನಡುವೆ ಬಿಸ್ಕತ್ತು, ಹಣ್ಣುಗಳು, ಸೇರಿದಂತೆ ಇತರೆ ತಿನಿಸುಗಳನ್ನು ನೀಡಬೇಕು. ಆಹಾರದಲ್ಲಿ ಗುಣಮಟ್ಟ ಮತ್ತು ಪೌಷ್ಟಿಕಾಂಶಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕೋವಿಡ್ ಕೇರ್ ಕೇಂದ್ರಕ್ಕಾಗಿಯೇ ಪ್ರತ್ಯೇಕ ಆಂಬುಲೆನ್ಸ್ ನಿಯೋಜಿಸಬೇಕು. ದಿನದ 24 ಗಂಟೆಗಳ ಕಾಲವೂ ವೈದ್ಯರು, ಸ್ಟಾಫ್‌ ನರ್ಸ್, ಡಿ. ಗ್ರೂಪ್ ನೌಕರರು, ಪೊಲೀಸ್ ಸಿಬ್ಬಂದಿ ಲಭ್ಯರಿರಬೇಕು. ಇವರ ವಾಸ್ತವ್ಯಕ್ಕೆ ಕೇಂದ್ರದಲ್ಲಿಯೇ ವಸತಿಗೃಹಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಡಾ. ರವಿ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಎಂ. ನಾಗರಾಜು, ಕೋವಿಡ್ ಕೇರ್ ಕೇಂದ್ರದ ಉಸ್ತುವಾರಿ ಹಾಗೂ ವೈದ್ಯಕೀಯ ಕಾಲೇಜಿನ ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥ ಡಾ. ಕೆ. ಶ್ರೀನಿವಾಸ್, ಇತರರು ಇದ್ದರು.

ನೈರ್ಮಲ್ಯ ಕಾಪಾಡಲು ಸೂಚನೆ

ಕೋವಿಡ್ ಕೇರ್ ಕೇಂದ್ರದಲ್ಲಿ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಬೇಕು. ವೈದ್ಯಕೀಯ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕು. ಬಟ್ಟೆಗಳು, ಹಾಸಿಗೆ, ಹೊದಿಕೆಗಳ ಸ್ವಚ್ಚಗೊಳಿಸುವಿಕೆಯು ಅಚ್ಚುಕಟ್ಟಾಗಿ ನಡೆಯಬೇಕು ಎಂದು ಡಾ.ಎಂ.ಆರ್‌.ರವಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಕೋವಿಡ್ ತಡೆಗಾಗಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರೆ ಇಲಾಖೆಗಳ ಸಿಬ್ಬಂದಿ ಸೋಂಕಿತರಾದಲ್ಲಿ ಅವರಿಗಾಗಿಯೇ ಕಾಲೇಜಿನ ಕೋವಿಡ್ ಕೇರ್ ಕೇಂದ್ರದಲ್ಲಿ ಹಲವು ನಿರ್ದಿಷ್ಟ ಸಂಖ್ಯೆಯ ಹಾಸಿಗೆಗಳನ್ನು ಮೀಸಲಿಡಬೇಕು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT