ಹನೂರು: ತಾಲ್ಲೂಕಿನ ಒಡೆಯರಪಾಳ್ಯ ಸಮೀಪ ವಿ.ಎಸ್.ದೊಡ್ಡಿ ಭಾಗ್ಯ ಎಂಬುವರ ಮನೆಯಲ್ಲಿ ನಿಧಿ ಆಸೆಗಾಗಿ ಗುಂಡಿ ತೆಗೆದಿರುವ ಪ್ರಕರಣ ಭಾನುವಾರ ರಾತ್ರಿ ಪೊಲೀಸರಿಂದ ಬೆಳಕಿಗೆ ಬಂದಿದ್ದು, ಅಸಾಮಿಗಳು ಪರಾರಿಯಾಗಿದ್ದಾರೆ.
ನಾಲ್ಕೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ಎಂದು ತಿಳಿದು ಭಾಗ್ಯ ಮನೆ ತೊರೆದು, ಬೆಂಗಳೂರಿನಲ್ಲಿ ತಳ್ಳು ಗಾಡಿಯಲ್ಲಿ ಮಜ್ಜಿಗೆ, ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಸಂಬಂಧಿ ಪರಶಿವ ಎಂಬುವರು ಭಾಗ್ಯ ಅವರನ್ನು ಸ್ಥಳೀಯ ಜ್ಯೋತಿಷ್ಯ ಬಳಿ ಕರೆದೊಯ್ದು ಭವಿಷ್ಯ ಕೇಳಿಸಿದ್ದರು. ಈ ವೇಳೆ ಜೋತಿಷಿ ಮನೆಯಲ್ಲಿ ನಿಧಿ ಇದೆ ಎಂದು ತಿಳಿಸಿದಾಗ ಇದನ್ನು ಅರಿಯದ ಭಾಗ್ಯ ಶೋಧನೆಗಾಗಿ ಅನುಮತಿ ನೀಡಿದ್ದರು ಎನ್ನಲಾಗಿದೆ.
ಜ್ಯೋತಿಷಿ ತನ್ನ ಜತೆಗಾರನೊಂದಿಗೆ ಕಳೆದ ವಾರ ಗ್ರಾಮಕ್ಕೆ ಆಗಮಿಸಿ ಭಾಗ್ಯ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆ ನೆರವೇರಿಸಿದ. ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯಲು ಆರಂಭಿಸಿದ್ದರು. 3 ಅಡಿ ಅಗಲ ಹಾಗೂ 20 ಅಡಿ ಆಳ ತೆಗೆದಿದ್ದು, ಶೋಧ ಕಾರ್ಯ ಮುಂದುವರಿದಿತ್ತು. ಈ ಬಗ್ಗೆ ಸ್ಥಳೀಯರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದರು. ಈ ಬಗ್ಗೆ ತಿಳಿದ ಅಸಾಮಿಗಳು ಮನೆಯಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಒಡೆಯರಪಾಳ್ಯ ಉಪ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಭಾಗ್ಯ ಅವರಿಗೆ ಇಂತಹ ಕಾರ್ಯ ನಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.
ಈ ಸಂಬಂಧ ಇನ್ಸ್ ಪೆಕ್ಟರ್ ಶಶಿಕುಮಾರ್ ಮಾತನಾಡಿ, ‘ನಿಧಿ ಇದೆ ಎಂದು ತಿಳಿದು ಅವರ ಮನೆಯಲ್ಲೇ ಗುಂಡಿ ತೆಗೆಸಿರುವುದು ನಿಜಕ್ಕೂ ವಿಪರ್ಯಾಸ. ಈ ಸಂಬಂಧ ಸ್ಥಳಕ್ಕೆ ಸಿಬ್ಬಂದಿ ಕಳುಹಿಸಿದ್ದು, ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.