ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಾಗದಲ್ಲಿ ಗೋರಿ ನಿರ್ಮಿಸಿಲ್ಲ: ಜೋಸ್ವಾ ಪ್ರಸನ್ನ ಕುಮಾರ್

20 ಗುಂಟೆ ಜಾಗ ಸರ್ಕಾರವೇ ಮಂಜೂರು ಮಾಡಿದೆ: ಜೋಸ್ವಾ ಪ್ರಸನ್ನ ಕುಮಾರ್
Published 17 ಏಪ್ರಿಲ್ 2024, 13:26 IST
Last Updated 17 ಏಪ್ರಿಲ್ 2024, 13:26 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸರ್ಕಾರಿ ಜಾಗದಲ್ಲಿ ಕ್ರೈಸ್ತ ಸಮುದಾಯದವರು ಅಕ್ರಮವಾಗಿ ಯಾವುದೇ ಗೋರಿಗಳನ್ನು ನಿರ್ಮಾಣ ಮಾಡಿಲ್ಲ ಎಂದು ಸೇಂಟ್‌ ಪೀಟರ್ಸ್ ಲೂಥರನ್ ಚರ್ಚ್‍ನ ಫಾದರ್ ಜೋಸ್ವಾ ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದರು.

ಪಟ್ಟಣದ ಸೆಂಟ್ ಪೀಟರ್ಸ್ ಚರ್ಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವಿಜಯಪುರ ಸರ್ವೆ ನಂಬರ್ 102, 62, 61 ಮತ್ತು 105ರ ಮಧ್ಯೆ ಇರುವ ಸರ್ಕಾರಿ ರಸ್ತೆ ಮತ್ತು ರಾಜ ಕಾಲುವೆಯಲ್ಲಿ ಕ್ರೈಸ್ತ ಸಮುದಾಯದವರು ಅಕ್ರಮವಾಗಿ ಗೋರಿಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ನಿವಾಸಿಗರು ಆರೋಪಿಸಿದ್ದಾರೆ. ಆದರೆ ಸರ್ವೆ ನಂ-101ರಲ್ಲಿ ಸೇಂಟ್ ಪೀಟರ್ಸ್ ಲೂಥರನ್ ಚರ್ಚ್‍ನವರಿಗೆ 20 ಗುಂಟೆ ಜಾಗವನ್ನು 2000 ಇಸವಿಯಲ್ಲಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಮಂಜೂರು ಮಾಡಿ ಸ್ಮಶಾನವಾಗಿ ಬಳಸಲು ಆದೇಶ ಹೊರಡಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಸೇಂಟ್ ಪೀಟರ್ಸ್ ಲೂಥರನ್ ಚರ್ಚ್‍ನ ಸದಸ್ಯರು ಹಾಗೂ ಇತರೆ ಪ್ರೊಟೆಸ್ಟಂಟ್ ಕ್ರೈಸ್ತರು ಅದನ್ನು ಬಳಸಿಕೊಂಡು ಬರುತ್ತಿದ್ದು, ಶವಸಂಸ್ಕಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

20 ಗುಂಟೆ ಜಾಗವನ್ನು ಸರ್ಕಾರ ಕ್ರೈಸ್ತ ಸಮುದಾಯಕ್ಕೆ ಸ್ಮಶಾನವಾಗಿ ಬಳಸಲು ಅಧಿಕೃತವಾಗಿ ನೀಡಿದೆ. ಹೀಗಾಗಿ ನಿವಾಸಿಗರ ಆರೋಪದಲ್ಲಿ ಹುರುಳಿಲ್ಲ. ಅದು ಸ್ಮಶಾನಕ್ಕೆಂದೆ ಸರ್ಕಾರ ನೀಡಿರುವ ಸ್ಥಳವಾಗಿರುವ ಕಾರಣ ಶವಸಂಸ್ಕಾರ ಮಾಡಲು ಹಾಗೂ ಗೋರಿಗಳನ್ನು ಕಟ್ಟಲು ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಅಧಿಕೃತ ದಾಖಲೆಗಳಿದೆ ಎಂದು ಹೇಳಿದರು.

ಶವ ಸಂಸ್ಕಾರ ಮಾಡುವುದನ್ನು ಹಾಗೂ ಗೋರಿ ಕಟ್ಟುವುದನ್ನು ಪ್ರಶ್ನಿಸಲು ಹೋದ ಸ್ಥಳೀಯ ನಿವಾಸಿಗಳ ಮೇಲೆ ಕ್ರೈಸ್ತ ಸಮುದಾಯದವರು ದಬ್ಬಾಳಿಕೆ ಮಾಡಿ, ಬೆದರಿಕೆ ಹಾಕಿ, ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಆದರೆ ಗುಂಡ್ಲುಪೇಟೆಯ ಇತಿಹಾಸದಲ್ಲೇ ಕ್ರೈಸ್ತ ಸಮುದಾಯದವರು ಹೀಗೆ ದಬ್ಬಾಳಿಕೆ ಮಾಡಿ, ಬೆದರಿಕೆ ಹಾಕಿ, ಹಲ್ಲೆ ನಡೆಸಲು ಮುಂದಾದ ಉದಾಹರಣೆಗಳಿಲ್ಲ. ಕ್ರೈಸ್ತ ಸಮುದಾಯವು ಶಾಂತಿ, ಸಮಾಧಾನ, ಸಹನೆಗೆ ಹೆಸರಾಗಿದ್ದು, ನಮ್ಮಿಂದ ಇಂತಹ ಯಾವುದೇ ಕೃತ್ಯಗಳು ಜರುಗಿಲ್ಲ ಎಂದು ಸ್ಪಷ್ಟಪಡಿಸಿದರು.

ಆ ಜಾಗದಲ್ಲಿ ಸ್ಮಶಾನದಲ್ಲಿ ಶವಸಂಸ್ಕಾರ ಮಾಡುವುದು ಹಾಗೂ ಗೋರಿಗಳನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಸಹ ಯಾವುದೇ ಲೋಪಗಳನ್ನು ಎಸಗಿರುವುದಿಲ್ಲ. ಬದಲಿಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ರೂಪಿಸಿರುವ ಕಾನೂನು, ಚೌಕಟ್ಟಿನ ಪ್ರಕಾರ ಎಲ್ಲಾ ಪ್ರಕ್ರಿಯೆಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಆದ್ದರಿಂದ ಸ್ಮಶಾನದ ಜಾಗವನ್ನು ಸರ್ಕಾರವೇ ಕ್ರೈಸ್ತ ಸಮುದಾಯಕ್ಕೆ ಅಧಿಕೃತವಾಗಿ ಮಂಜೂರು ಮಾಡಿರುವ ಕಾರಣ ಪ್ರತಿಯೊಂದು ಕಾನೂನು ಬದ್ಧವಾಗಿಯೇ ನಡೆಯುತ್ತಿವೆ ಎಂದು ಹೇಳಿದರು.

ಮುಖಂಡರಾದ ಥಾಮಸ್, ವಜ್ರಮಣಿ, ಪ್ರವೀಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT