ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸ್ಟೆಲ್‌ ಇರುವಲ್ಲೇ ಸರ್ವೆ ನಂಬರ್‌ ಗುರುತು

ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹಾಸ್ಟೆಲ್‌ ಜಾಗದ ಸರ್ವೆ, ಬಿಗಿ ಭದ್ರತೆ
Published 21 ಫೆಬ್ರುವರಿ 2024, 4:38 IST
Last Updated 21 ಫೆಬ್ರುವರಿ 2024, 4:38 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹಾಸ್ಟೆಲ್‌ನ ಆಸ್ತಿ ಅಕ್ರಮವಾಗಿ ಪರಭಾರೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ತಾಲ್ಲೂಕು ಭೂಮಾಪನ ಇಲಾಖೆಯು ಮಂಗಳವಾರ ಹಾಸ್ಟೆಲ್‌ ಆಸ್ತಿ ಸರ್ವೆ ನಡೆಸಿತು. 

ಭೂ ಮಾಪನ ಮತ್ತು ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್, ಭೂಮಾಪಕರಾದ ನಾಗಭೂಷಣ್‌ ಮತ್ತು ರಮೇಶ್‌ ಹಾಗೂ ಇತರ ಸಿಬ್ಬಂದಿ ಎರಡು ಗಂಟೆಗೂ ಹೆಚ್ಚು ಕಾಲ ಹಾಸ್ಟೆಲ್‌ಗೆ ಸಂಬಂಧಿಸಿದ ಆಸ್ತಿಯನ್ನು ಮಾಪನ ಮಾಡಿದರು.

ಹಾಸ್ಟೆಲ್‌ಗೆ ಸೇರಿರುವ ಸರ್ವೆ ನಂಬರ್‌ 295‌ರ ಒಂದು ಎಕರೆ 22 ಗುಂಟೆ ಜಮೀನನ್ನು (62 ಗುಂಟೆ) ಎಂಟು ಪೋಡುಗಳಾಗಿ (295/4ಎ, 295/4ಬಿ, 295/4ಸಿ, 295/4ಡಿ, 295/4ಎಫ್‌, 295/4ಜಿ ಮತ್ತು 295/4ಎಚ್‌) ಮಾಡಲಾಗಿದ್ದು, ಇದರಲ್ಲಿ ಮೂರು ಪೋಡುಗಳನ್ನು (295/4ಸಿ, 295/4ಡಿ ಮತ್ತು 295/4ಎಫ್‌) ನಕಲಿ ದಾಖಲೆ ಸೃಷ್ಟಿಸಿ ಬೇರೆಯವರ ಹೆಸರಿಗೆ ಪರಭಾರೆ ಮಾಡಲಾಗಿದೆ ಎಂದು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣೆ ಸಮಿತಿ ಆರೋಪಿಸಿತ್ತು.

‘ಈ ಪೈಕಿ ಸರ್ವೆ ನಂಬರ್‌ 295/4ಸಿಯಲ್ಲಿರುವ ಎಂಟು ಗುಂಟೆ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಅವರ ತಮ್ಮನ ಮಕ್ಕಳ ಹೆಸರಿಗೆ ಕ್ರಯವಾಗಿದೆ’ ಎಂದು ಸಮಿತಿಯವರು ದೂರಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಹಾಗೂ ಪದಾಧಿಕಾರಿಗಳು, ‘ಪರಭಾರೆಯಾಗಿರುವ ಜಮೀನು ಸಂಘದ ಹಾಸ್ಟೆಲ್‌ಗೆ ಸೇರಿಲ್ಲ. ಅದು ಬೇರೆಯೇ’ ಎಂದು ಹೇಳಿದ್ದರು. 

ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌, ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ಸಮಿತಿಯು ಇದೇ 15ರಂದು ಸಭೆ ಸೇರಿ ಚರ್ಚಿಸಿತ್ತಲ್ಲದೇ ಮಂಗಳವಾರ ಎರಡೂ ಕಡೆಯವರ ಸಮ್ಮುಖದಲ್ಲಿ ಸರ್ವೆ ನಡೆಸಲು ತೀರ್ಮಾನಿಸಿತ್ತು. 

ಮಂಗಳವಾರ ನಡೆಸಿರುವ ಸರ್ವೆಯಲ್ಲಿ 295/4ಸಿ, 295/4ಡಿ ಮತ್ತು 295/4ಎಫ್ ಸೇರಿದಂತೆ ಎಲ್ಲ ಎಂಟು ಪೋಡುಗಳು ಹಾಸ್ಟೆಲ್‌ ಇರುವ ಜಾಗದಲ್ಲೇ ಕಂಡು ಬಂದಿದೆ. ಅಧಿಕಾರಿಗಳು ಆಯಾ ಪೋಡುಗಳ ಜಾಗದಲ್ಲಿ ಸರ್ವೆ ನಂಬರ್‌ನ ಗುರುತು ಕೂಡ ಮಾಡಿದ್ದಾರೆ.

ಬಿಗಿ ಭದ್ರತೆ: ಸರ್ವೆಗಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪಟ್ಟಣ, ಗ್ರಾಮಾಂತರ ಹಾಗೂ ಸಂಚಾರ ಠಾಣೆಯ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. 

ಸಂಘದ ಪ‍ದಾಧಿಕಾರಿಗಳು, ಅವರ ಬೆಂಬಲಿಗರು ಮತ್ತು ಆಸ್ತಿ ಸಂರಕ್ಷಣಾ ಸಮಿತಿ ಹಾಗೂ ಸಮಿತಿಯ ಪರವಾಗಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. 

ಸರ್ವೆ ಕಾರ್ಯ ನಡೆದಿದೆ. ಅಧಿಕಾರಿಗಳು ನಮಗೆ ವರದಿ ನೀಡಲಿದ್ದಾರೆ. ಆ ವರದಿ ಆಧಾರದಲ್ಲಿ ನಾವು ಜಿಲ್ಲಾಧಿಕಾರಿಯವರಿಗೆ ವರದಿ ಕೊಡುತ್ತೇವೆ
ಐ.ಇ.ಬಸವರಾಜು ತಹಶೀಲ್ದಾರ್‌ ತನಿಖಾ ಸಮಿತಿ ಸದಸ್ಯ ಕಾರ್ಯದರ್ಶಿ

ಸಹಿ ಹಾಕದ ಸಂಘದ ಪದಾಧಿಕಾರಿಗಳು

ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಪದಾಧಿಕಾರಿಗಳು ಮತ್ತು ಆಸ್ತಿ ಸಂರಕ್ಷಣಾ ಸಮಿತಿಯ ಅಯ್ಯನಪುರ ಶಿವಕುಮಾರ್‌ ಹಾಗೂ ಇತರರ ಸಮ್ಮುಖದಲ್ಲಿ ಬೆಳಿಗ್ಗೆ 11 ಗಂಟೆಗೆ ಸರ್ವೆ ಆರಂಭಿಸಲಾಯಿತು. ಸರ್ವೆ ಆರಂಭಕ್ಕೂ ಮುನ್ನ ಎರಡೂ ಕಡೆಯವರಿಂದ ಅಧಿಕಾರಿಗಳು ಸರ್ವೆಗೆ ಸಮ್ಮತಿ ನೀಡುವ ಬಗ್ಗೆ ಸಹಿ ಪಡೆದರು.  ತಾಲ್ಲೂಕು ಕಚೇರಿಯ ಮುಂಭಾಗದಿಂದಲೇ ಸರಪಳಿ ಹಿಡಿದು ಅಳತೆ ಮಾಡಲಾಯಿತು. ಹಂಸಧ್ವನಿ ಹಿಂಭಾಗ ಸೇರಿದಂತೆ ಹಾಸ್ಟೆಲ್‌ಗೆ ಸೇರಿದ ಸರ್ವೆ ನಂಬರ್‌ಗೆ ಸೇರಿದ ಎಲ್ಲ ಜಾಗಗಳಲ್ಲೂ ಸರ್ವೆ ನಡೆಸಲಾಯಿತು.     ಅಂತಿಮವಾಗಿ ಸರ್ವೆ ನಂಬರ್‌ಗಳನ್ನು ಗುರುತಿಸಿದ ಬಳಿಕ ಸರ್ವೆ ನಡೆಸಿರುವ ಬಗ್ಗೆ ಎರಡೂ ಕಡೆಯವರ ಸಹಿಯನ್ನು ಅಧಿಕಾರಿಗಳು ಕೇಳಿದರು. ಈ ಸಂದರ್ಭದಲ್ಲಿ ಆಸ್ತಿ ಸಂರಕ್ಷಣಾ ಸಮಿತಿಯವರು ಸಹಿ ಹಾಕಿದರೆ ಸಂಘದ ಪದಾಧಿಕಾರಿಗಳು ಹಾಕಲಿಲ್ಲ. ಸರ್ವೆ ನಡೆಸಿರುವ ವರದಿಯನ್ನು ಸಮಿತಿಗೆ ಸಲ್ಲಿಸುವುದಾಗಿ ಭೂಮಾಪನಾ ಅಧಿಕಾರಿಗಳು ಮುಖಂಡರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT