ಶುಕ್ರವಾರ, ಮಾರ್ಚ್ 5, 2021
30 °C

ಚಾಮರಾಜನಗರ: ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ನಂತರ ಆರಂಭವಾಗಿರುವ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. 

ಬಿ.ರಾಚಯ್ಯ ಜೋಡಿ ರಸ್ತೆಯ ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿದರು. ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದರು. 

ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಪ್ರಕ್ರಿಯೆ ವಿಳಂಬವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಶೀಘ್ರವಾಗಿ ವಿದ್ಯಾರ್ಥಿ ವೇತನ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. 

’ಶಾಲಾ ಕಾಲೇಜುಗಳು ಆರಂಭಗೊಂಡರೂ ಹಾಸ್ಟೆಲ್‌ಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಹಾಸ್ಟೆಲ್‌ ಪ್ರವೇಶಾತಿಗೆ ಅರ್ಜಿಗಳನ್ನೂ ನೀಡಲಾಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ತ್ವರಿತವಾಗಿ ಅರ್ಜಿಗಳನ್ನು ನೀಡಿ, ಹಾಸ್ಟೆಲ್‌ಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿದರು.

‘ಶೈಕ್ಷಣಿಕ ವರ್ಷ ಆರಂಭಗೊಂಡಿದ್ದರೂ, ಕೆಎಸ್‌ಆರ್‌ಟಿಸಿ ಪೂರ್ಣ ಪ್ರಮಾಣದಲ್ಲಿ ಬಸ್‌ಗಳನ್ನು ಓಡಿಸುತ್ತಿಲ್ಲ. ಇದರಿಂದಾಗಿ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ತಲುಪಲು ವಿದ್ಯಾರ್ಥಿಗಳು ಕಷ್ಟ ಪಡುತ್ತಿದ್ದಾರೆ. ಜನವರಿ 30ರವರೆಗೆ ಸಾರಿಗೆ ಇಲಾಖೆಯು ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಈಗ ಬಸ್‌ ಪಾಸ್‌ ವಿತರಿಸಲಾಗುತ್ತಿದ್ದು, 2020ರ ನವೆಂಬರ್‌ನಿಂದ ಬಸ್‌ ಪಾಸ್‌ನ ಅವಧಿ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು 10 ತಿಂಗಳ ಅವಧಿಗೆ ಶುಲ್ಕ ನೀಡಿದ್ದು, ಇದರ ಪ್ರಕಾರ ಇನ್ನು ಆರೇಳು ತಿಂಗಳಿಗೆ ಮಾತ್ರ ಬಸ್‌ ಪಾಸ್‌ ಸೌಲಭ್ಯ ಸಿಗಲಿದೆ. ಪೋಷಕರು ಈಗಾಗಲೇ ಸಂಕಷ್ಟದಲ್ಲಿದ್ದು, ಸಾರಿಗೆ ಇಲಾಖೆ ಈ ನಿರ್ಧಾರ ಅವರಿಗೆ ಇನ್ನಷ್ಟು ಹೊರೆಯಲಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದರು.   

ಶಾಲಾ ಕಾಲೇಜುಗಳಲ್ಲಿ ಬೋಧಕರ ಕೊರತೆ ಉಂಟಾಗಿದ್ದು, ಅವಶ್ಯಕ ಬೋಧಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಎಐಡಿಎಸ್‌ಒ ಜಿಲ್ಲಾ ಸಮಿತಿ ಅಧ್ಯಕ್ಷೆ ಆಸಿಯಾ ಬೇಗಂ, ಕಾರ್ಯಕರ್ತರಾದ ರಾಜೇಂದ್ರ, ಅಜಯ್‌, ಸೃಜನ್‌, ಅಮರ್‌, ಸಂದೀಪ್‌, ಅಶೋಕ್‌, ಬಸವರಜು, ಅಜಯ್‌, ಶಶಾಂಕ್‌ ಮತ್ತು ಹರ್ಷ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.