ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರ ತತ್ವದಲ್ಲಿ ಕೈಜೋಡಿಸಿದರೆ ದೊಡ್ಡ ಸಾಧನೆ’

69ನೇ ಸಹಕಾರ ಸಪ್ತಾಹಕ್ಕೆ ಚಾಲನೆ, ಚಾಮುಲ್‌ ಎಂಡಿ ರಾಜಶೇಖರ್‌ ಮೂರ್ತಿ ಅಭಿಪ್ರಾಯ
Last Updated 15 ನವೆಂಬರ್ 2022, 4:16 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಾಜದ ಎಲ್ಲ ವರ್ಗಗಳು ಸಹಕಾರ ತತ್ವದ ಅಡಿಯಲ್ಲಿ ಕೈ ಜೋಡಿಸಿದರೆ ಬಹು ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ್‌ ಮೂರ್ತಿ ಸೋಮವಾರ ಅಭಿಪ್ರಾಯಪಟ್ಟರು.

ನಗರದ ರಾಮುಸಮುದ್ರದ ಚಾಮುಲ್‌ ಉಪ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಸಹಕಾರ ಯೂನಿಯನ್‌, ಸಹಕಾರ ಇಲಾಖೆ ಹಾಗೂ ಚಾಮರಾಜನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 69ನೇ ಅಖಿಲ ಬಾರತ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುಟುಂಬದ ಎಲ್ಲ ಸದಸ್ಯರ ಸಹಕಾರ ಇದ್ದರಷ್ಟೇ ಮನೆಯನ್ನು ಚೆನ್ನಾಗಿ ನಡೆಸಲು ಸಾಧ್ಯ. ಅದೇ ಮಾದರಿಯಲ್ಲಿ ಸಮಾಜದಲ್ಲಿರುವ ಎಲ್ಲರೂ ಪರಸ್ಪರ ಸಹಕಾರದಿಂದ ಕೈ ಜೋಡಿಸಿದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಜನಸಾಮಾನ್ಯರ, ರೈತರ ಉತ್ಪನ್ನಗಳು ಕೂಡ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಬಹುದು’ ಎಂದರು.

‘ಗುಜರಾತ್‌ನಲ್ಲಿ ಅಮೂಲ್‌ ಆರಂಭವಾಗಿದ್ದು, ಕೇವಲ 50 ಲೀಟರ್‌ ಹಾಲಿನಿಂದ. 50 ಲೀಟರ್‌ ಹಾಲನ್ನು ಇಟ್ಟುಕೊಂಡು ಏನು ಮಾಡಬಹುದು ಎಂದು ನಕ್ಕಿದ್ದರು. ಆದರೆ, ಈಗ ಅದು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ಬೆಳೆದಿದೆ’ ಎಂದು ಉದಾಹರಿಸಿದರು.

‘ನಮ್ಮ ನಂದಿನಿ (ಕೆಎಂಎಫ್‌) ರಾಜ್ಯದ ರೈತರ ಸಂಸ್ಥೆ. ರಾಜ್ಯದಾದ್ಯಂತ ಪ್ರತಿ ದಿನ 95 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿದೆ. ಇದನ್ನು 1 ಕೋಟಿ ಲೀಟರ್‌ಗೆ ತಲುಪಿಸುವ ಗುರಿ ಇದೆ. ‘ನಂದಿನಿ’ ವ್ಯವಸ್ಥೆಯಲ್ಲಿ 16 ಸಾವಿರ ಸಂಘಗಳಿವೆ. 55 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಒಟ್ಟಾರೆ ಈ ವ್ಯವಸ್ಥೆಯಲ್ಲಿ 30 ಕೋಟಿ ಜನರು ಭಾಗಿಯಾಗಿದ್ದಾರೆ. ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಸಿ ಮಾತನಾಡಿದ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಚ್‌.ಎಂ.ಬಸವಣ್ಣ, ‘ಸಹಕಾರ ಸಂಘ ಅಭಿವೃದ್ಧಿಯಾದರೆ ದೇಶ ಅಭಿವೃದ್ದಿ ಆಗುತ್ತದೆ. ಸಹಕಾರ ಕ್ಷೇತ್ರ ಹಲವು ನಾಯಕರನ್ನು ಹುಟ್ಟುಹಾಕಿದೆ. ಇಲ್ಲಿ ಕೆಲಸ ಮಾಡಿದಂತಹ ಅನೇಕರು ದೇಶದಲ್ಲಿ ಗಣ್ಯ ವ್ಯಕ್ತಿಗಳಾಗಿದ್ದಾರೆ. ಸಹಕಾರ ಸಂಘಗಳಿಂದ ಹಲವರು ಪ್ರಗತಿ ಕಂಡಿದ್ದೇವೆ’ ಎಂದರು.

‘ದೇಶ ಪ್ರಗತಿ ಹೊಂದಬೇಕಾದರೆ ಅಸ್ಪತ್ರೆ, ಪಂಚಾಯಿತಿ, ಸಹಕಾರ ಸಂಘಗಳು ಅವಶ್ಯಕ ಎಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಹಾಗೂ ಪ್ರಧಾನಿಗಳಾಗಿದ್ದ ವಾಜಪೇಯಿ ಅಭಿಪ್ರಾಯಪಟ್ಟಿದ್ದರು’ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎ.ಎಂ.ನಾಗರಾಜು, ನಿರ್ದೇಶಕ ಎಚ್‌.ಎನ್‌.ಸುಂದರ್‌ರಾಜ್‌, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಮಾತನಾಡಿದರು.

ಸಾಧನಾ ಸಂಸ್ಥೆಯ ಟಿ.ಜೆ.ಸುರೇಶ್‌ ಅವರು ‘ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ಅಭಿವೃದ್ಧಿಗಾಗಿ ಜೆಮ್‌–ಪೋರ್ಟಲ್‌ ಬಳಕೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಕಿರಣ್‌ಕುಮಾರ್‌, ಚಾಮುಲ್‌ ವಿಸ್ತರಣಾಧಿಕಾರಿ ಶ್ಯಾಂಸುಂದರ್‌ ಇತರರು ಇದ್ದರು.

‘ತಂತ್ರಜ್ಞಾನ ಲಭ್ಯವಿದೆ’

‘ನಂದಿನಿ ಉತ್ಪನ್ನಗಳು ಮುಂಬೈ, ಕಾಶ್ಮೀರ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಸಿಗುತ್ತಿದೆ. ಚಾಮುಲ್‌ನಲ್ಲಿ ತಯಾರಾಗುವ ಗುಡ್‌ಲೈಫ್‌ ಹಾಲು, ಕಾಶ್ಮೀರದ ಸೈನಿಕರಿಗೆ ಪೂರೈಕೆಯಾಗುತ್ತದೆ. ಎಲ್ಲಿಯ ಚಾಮರಾಜನಗರ? ಎಲ್ಲಿಯ ಕಾಶ್ಮೀರ? ಸಹಕಾರ ವ್ಯವಸ್ಥೆ ಎರಡರ ನಡುವೆ ಕೊಂಡಿಯಾಗಿದೆ. ನಮ್ಮಲ್ಲಿ ಈಗ ತಂತ್ರಜ್ಞಾನಗಳು ಲಭ್ಯವಿವೆ. ಜನರು ಒಂದಾಗಬೇಕಾಗಿದೆ’ ಎಂದು’ ಎಂದು ರಾಜಶೇಖರಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT