ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬೇಡ್ಕರ್‌ ತಿಳಿಯಲು ಜೀವಮಾನ ಸಾಲದು: ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌

Published 14 ಏಪ್ರಿಲ್ 2024, 16:05 IST
Last Updated 14 ಏಪ್ರಿಲ್ 2024, 16:05 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜಕಾರಣಿ, ನ್ಯಾಯವಾದು, ಹೋರಾಟಗಾರ, ವಿಚಾರವಾದಿಯಾಗಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜೀವನ ಸಾಧನೆಗಳನ್ನು ಅರಿಯಲು ಒಂದು ಜೀವಮಾನ ಸಾಕಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್‌ ಭಾನುವಾರ ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 133ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಅಂಬೇಡ್ಕರ್ ಅವರು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ರಚನೆ ಮಾಡಿ, ನೊಂದವರ ಪರ ಹೋರಾಟ ಮಾಡಿದ್ದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವು ಸಂವಿಧಾನಕ್ಕೆ ಬದ್ಧವಾಗಿ ಕೆಲಸವಾಗಿ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು. 

ದೇಶದಲ್ಲಿ ಸಮಾನತೆ ಜಾರಿಗೆ ಬರಬೇಕಾದ ಅವಶ್ಯಕತೆ ಇದೆ. ಎಲ್ಲರೂ ಅಹಿಂಸೆಯ ಹಾದಿಯನ್ನು ಅನುಸರಿಸಬೇಕು. ಅಂಬೇಡ್ಕರ್‌ ತಮ್ಮ ಜೀವನದ ಉದ್ದಕ್ಕೂ ಇದನ್ನೇ ಪ್ರತಿಪಾದಿಸಿದ್ದರು. ಅವರ ವಿಚಾರಧಾರೆಗಳು ಇನ್ನೂ 500 ವರ್ಷ ಕಳೆದರೂ ಪ್ರಸ್ತುತವಾಗಿರುತ್ತದೆ’ ಎಂದು ಪ್ರತಿಪಾದಿಸಿದರು.

ಮುಖ್ಯ ಭಾಷಣ ಮಾಡಿದ ವಿಚಾರವಾದಿ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ‘ಜನರು ಹಬ್ಬಗಳನ್ನು ಆಚರಣೆ ಮಾಡುವುದು ಬಿಟ್ಟು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿ, ಪ್ರತಿ ದಿನ ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಓದುವಂತೆ ಮಾಡಿ. ಜನರ ಉದ್ದಾರಕ್ಕಾಗಿ ತಮ್ಮ ಪದವಿಗಳನ್ನೇ ತೊರೆದ ಬುದ್ಧ, ಬಸವಣ್ಣ ಅಂಬೇಡ್ಕರ್‌ ಅವರ ಮಾರ್ಗದರ್ಶನದಲ್ಲಿ ನಾವು ಸಾಗಬೇಕು’ ಎಂದು ಹೇಳಿದರು. 

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಾಕಷ್ಟು ಜನವರ ಜೀವನವನ್ನು ಹಸನು ಮಾಡಿದ್ದರು. ದೇಶದಲ್ಲಿ ಇಂದಿಗೂ ಅಸಮಾನತೆ, ಅಸ್ಪೃಶ್ಯತೆ, ಅಸಮಾನತೆ ಇದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಪಡಬೇಕು’ ಎಂದು ಹೇಳಿದರು. 

ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಉದೇಶ ಟಿ.ಜೆ. ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. 

ಕೊಳ್ಳೇಗಾಲ ಜೇತವನ ಬುದ್ಧ ವಿಹಾರದ ಸುಗತಪಾಲ ಬಂತೇಜಿ‌ ಸಾನಿಧ್ಯವಹಿಸಿ ಮಾತನಾಡಿದರು.   

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್‌ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥಪ್ರಸನ್ನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ. ಮಲ್ಲಿಕಾರ್ಜುನ, ನಗರಸಭೆ ಆಯುಕ್ತ ರಾಮದಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು. 

ಜನಪ್ರತಿನಿಧಿಗಳು ದೂರ: ಚುನಾವನಾ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸಮಾರಂಭದಿಂದ ದೂರ ಉಳಿದಿದ್ದರು. 

ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಸುಗತಪಾಲ ಬಂತೇಜಿ‌ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ ಪ್ರಕಾಶ್‌ ಮೀನಾ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇತರರು ಭಾಗವಹಿಸಿದ್ದರು
ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಸುಗತಪಾಲ ಬಂತೇಜಿ‌ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ ಪ್ರಕಾಶ್‌ ಮೀನಾ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಇತರರು ಭಾಗವಹಿಸಿದ್ದರು
ಭಾವಚಿತ್ರದ ಮೆರವಣಿಗೆ ಅದ್ದೂರಿ ವೇದಿಕೆ
ಸಮಾರಂಭಕ್ಕೂ ಮುನ್ನಾ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರದ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.  ನಗರದ ಪ್ರವಾಸಿ ಮಂದಿರದ ಮುಂಭಾಗ ಮೆರವಣಿಗೆಗೆ ಅಧಿಕಾರಿಗಳು ವಿವಿಧ ದಲಿತ ಪ್ರಗತಿಪರ ಸಂಘಟನೆಗಳ ಮುಖಂಡರು ಚಾಲನೆ ನೀಡಿದರು.  ವಿವಿಧ ಜಾನಪದ ಕಲಾ ತಂಡಗಳು ನೂರಾರು ಅಂಬೇಡ್ಕರ್‌ ಅನುಯಾಯಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.  ವೇದಿಕೆ ಕಾರ‍್ಯಕ್ರಮ ಆರಂಭಕ್ಕೂ ಮುನ್ನಾ ನಗರದ ಪ್ರವಾಸಿ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾವಚಿತ್ರ ಮೆರವಣಿಗೆಗೆ ನಾನಾ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯು ಸುಲ್ತಾನ್‌ ಷರೀಫ್‌ ವೃತ್ತ ಗುಂಡ್ಲುಪೇಟೆ ವೃತ್ತ ಚಿಕ್ಕಂಗಡಿ ಬೀದಿ ದೊಡ್ಡಂಗಡಿ ಬೀದಿ ಸಂತೇಮರಹಳ್ಳಿ ವೃತ್ತ ಡೀವಿಯೇಷನ್ ವೃತ್ತ ಭುವನೇಶ್ವರಿ ವೃತ್ತದ ಮೂಲಕ ಸಾಗಿ ಪೇಟೆ ಪ್ರೈಮರಿ ಶಾಲಾವರಣ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT