ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ದುರಂತ: ಸಂತ್ರಸ್ತರ ಕುಟುಂಬಕ್ಕೆ ಹೊರಗುತ್ತಿಗೆ ಕೆಲಸದ ಭರವಸೆ

Published 17 ಜನವರಿ 2024, 5:18 IST
Last Updated 17 ಜನವರಿ 2024, 5:18 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ದುರಂತದ ಸಂತ್ರಸ್ತರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ಮಾತ್ರ ನೀಡುತ್ತಿದ್ದೀರಿ. ಆದರೆ, ಈವರೆಗೂ ನಮಗೆ ಕೆಲಸ ಕೊಟ್ಟಿಲ್ಲ. ಹಿಂದಿನ ಸರ್ಕಾರವೂ ಏನೂ ಮಾಡಿಲ್ಲ. ಈಗಿನ ಸರ್ಕಾರ ಕೂಡ ಏನೂ ಮಾಡುತ್ತಿಲ್ಲ...’

ಕೋವಿಡ್‌ ಸಮಯದಲ್ಲಿ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೆ ಮೃತಪ‍ಟ್ಟವರ ಕುಟುಂಬದ ಸದಸ್ಯರು ಸಚಿವರ ಮುಂದೆ ಮಂಗಳವಾರ ತಮ್ಮ ಅಳಲನ್ನು ಈ ರೀತಿ ಬಿಚ್ಚಿಟ್ಟರು. 

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾದರ್ಶನಲ್ಲಿ ಸಂತ್ರಸ್ತರ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರಯ ಹಾಜರಾಗಿ ಶೀಘ್ರವಾಗಿ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದರು. 

ಪತಿಯನ್ನು ಕಳೆದುಕೊಂಡ ನಾಗರತ್ನ ಎಂಬುವವರು ಮಾತನಾಡಿ, ‘ಹಲವು ಬಾರಿ ಶಾಸಕರಿಗೆ, ಸಚಿವರಿಗೆ ಮನವಿ ಮಾಡಿದ್ದೇವೆ. ಕೊಳ್ಳೇಗಾಲದಲ್ಲಿ ನಡೆದ ಜನತಾ ದರ್ಶನದಲ್ಲೂ ಮನವಿ ಮಾಡಿದ್ದೇವೆ. ಶಾಸಕ ಕೃಷ್ಣಮೂರ್ತಿ ಅವರು ಸದನದಲ್ಲೂ ಪ್ರಸ್ತಾಪಿಸಿದ್ದಾರೆ. ಆದರೆ, ಸರ್ಕಾರ ನಮಗೆ ಇನ್ನೂ ಸರ್ಕಾರಿ ಉದ್ಯೋಗ ನೀಡಿಲ್ಲ’ ಎಂದು ಅಳಲು ತೋಡಿಕೊಂಡರು. 

ಸಚಿವ ಕೆ.ವೆಂಕಟೇಶ್‌ ಮಾತನಾಡಿ, ‘ಮೃತಪಟ್ಟವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕಾಯಂ ಉದ್ಯೋಗ ನೀಡಬೇಕು ಎಂಬ ಪ್ರಸ್ತಾವ ಕಳುಹಿಸಲಾಗಿದೆ. ನೇಮಕಾತಿ ಆಗುವವರೆಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗುವುದು’ ಎಂದು ಭರವಸೆ ನೀಡಿದರು. 

ವಾರದಲ್ಲಿ ಕ್ರಮ: ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಮಾತನಾಡಿ, ‘ಕಾಯಂ ಸರ್ಕಾರಿ ನೌಕರಿ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ನಿಮ್ಮೆಲ್ಲರ ಮಾಹಿತಿಯೂ ನಮ್ಮ ಬಳಿ ಇದೆ. ಈಗ ಸಚಿವರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವಂತೆ ಹೇಳಿದ್ದಾರೆ. ವಾರದಲ್ಲಿ ಈ ಬಗ್ಗೆ ಕ್ರಮವಹಿಸಲಾಗುವುದು’ ಎಂದರು. 

192 ಅರ್ಜಿ: ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆದ ಜನತಾದರ್ಶನದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಬಂದಿದ್ದರು. ಒಟ್ಟು 192ಅರ್ಜಿಗಳು ಸ್ವೀಕಾರವಾಗಿವೆ. 

ಜಮೀನು ವಿವಾದ, ಇ–ಸ್ವತ್ತು ಸಮಸ್ಯೆ, ಸರ್ಕಾರಿ ಕೆಲಸಗಳಲ್ಲಿ ವಿಳಂಬ, ಕಳಪೆ ಗುಣಮಟ್ಟದ ಕಾಮಗಾರಿ, ಮದ್ಯದ ಅಂಗಡಿಗಳಿಂದ ನಿಯಮ ಉಲ್ಲಂಘನೆಮ ಸರ್ಕಾರಿ ಭೂಮಿ ಒತ್ತುವರಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜನರು ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಮುಂದೆ ದೂರು ನೀಡಿದರು.  

ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಬಸವನಪುರ ರಾಜಶೇಖರ ಅವರು, ‘ಗುಂಡ್ಲುಪೇಟೆ ತಾಲ್ಲೂಕಿನ ಕೆಲಸಿಪುರ ಗ್ರಾಮದಲ್ಲಿ ಉಮಾಮಹೇಶ್ವರಿ ಎಂಬುವವರು ಪೊಲೀಸರ ನೆರವು ಪಡೆದು ಸರ್ಕಾರಿ ಜಮೀನಿನಲ್ಲಿದ್ದ ದಲಿತರ ಶೆಡ್‌ಗಳನ್ನು ಕಿತ್ತು ಹಾಕಿದ್ದಾರೆ. ಪೊಲೀಸರೂ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಯಳಂದೂರು ತಾಲ್ಲೂಕಿನ ಮಹಿಳಾ ಮತ್ತು ಮಕ್ಖಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ನೌಕರರ ನೇಮಕಾತಿಯಲ್ಲಿ ನಕಲಿ ಅಂಕಪಟ್ಟಿ ನೀಡಿ ಉದ್ಯೋಗಪಡೆದುಕೊಂಡಿದ್ದಾರೆ ಈ ಬಗ್ಗೆ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದರು. 

ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. 

ಚಾಮರಾಜನಗರದ ಕನ್ನಡ ಹೋರಾಟಗಾರ ಪ್ರಶಾಂತ್‌ಕುಮಾರ್‌ ಅವರು, ‘ಚಾಮರಾಜನಗರ ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇ–ಸ್ವತ್ತು ಮಾಡಿಸಲು ₹75 ಸಾವಿರ ಪಡೆಯುತ್ತಿದ್ದಾರೆ. ಕೆಲವು ಅಧಿಕಾರಿಗಳು 15 ವರ್ಷಗಳಿಂದ ಇಲ್ಲೇ ಇದ್ದಾರೆ. ನ್ಯಾಯಾಲಯದ ಹಿಂಭಾಗ ಲೇಔಟ್‌ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯಾಗುತ್ತಿದ್ದರೂ, ನಗರಸಭೆ ಅಧಿಕಾರಿಗಳು ಖಾತೆ ಮಾಡಿ ಕೊಡುತ್ತಿದ್ದಾರೆ’ ಎಂದು ದೂರಿದರು.

‘ಮದ್ಯದ ಅಂಗಡಿಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ವೈನ್‌ಸ್ಟೋರ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲ. ಆದರೆ, ನಗರದಲ್ಲಿ ರಾಜಾರೋಷವಾಗಿ ಜನ ಮದ್ಯ ಸೇವಿಸುತ್ತಿದ್ದಾರೆ. ಬೆಳಿಗ್ಗೆ 6 ಗಂಟೆಗೇ ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ. ದೂರು ನೀಡಿದರೂ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ದೂರಿದರು. 

ನಗರಸಭೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರು ಮಾತನಾಡಿ, ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಆಂತರಿಕವಾಗಿ ಅವರನ್ನು ವರ್ಗಾವಣೆ ಮಾಡಲು ಕ್ರಮ ವಹಿಸಲಾಗುವುದು. ಇ–ಸ್ವತ್ತು ಅಕ್ರಮ ದೂರಿನ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕರು ಶೀಘ್ರದಲ್ಲಿ ವರದಿ ನೀಡಲಿದ್ದಾರೆ’ ಎಂದರು.

ಚಾಮರಾಜನಗರದ ಶೂಟರ್‌ ರಮೇಶ್ ಬಾಬು ಅವರು, ‘ಜಿಲ್ಲೆಯಲ್ಲಿ ಶೂಟಿಂಗ್‌ ಕ್ಲಬ್‌ ತೆರೆಯಲು ಬಯಸಿದ್ದೇನೆ. ಸರ್ಕಾರ ಎರಡು ಎಕರೆ ಜಾಗ ಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು. 

ಕೊಳ್ಳೇಗಾಲದ ಲಿಂಗರಾಜು ಅವರು ಶಂಕನಪುರ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ದೂರಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ವಸ್ತುಗಳ ಖರೀದಿಯಲ್ಲಿಅವ್ಯವಹಾರ ನಡೆಯುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್‌ ಐ.ಇ.ಬಸವರಾಜು ಇತರರು ಇದ್ದರು. 

ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರು
ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರು

ಹಾಸ್ಟೆಲ್‌ ಜಮೀನು ಪರಬಾರೆ: ಪ್ರಸ್ತಾಪ

ಚಾಮರಾಜನಗರ ತಾಲ್ಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹಾಸ್ಟೆಲ್‌ಗೆ ಸೇರಿದ ಜಮೀನನ್ನು ಅಕ್ರಮವಾಗಿ ಬೇರೆಯವರಿಗೆ ಪರಬಾರೆ ಮಾಡಲಾಗುತ್ತಿದೆ ಎಂಬ ವಿಚಾರ ಜನತಾ ದರ್ಶನದಲ್ಲಿ ಪ್ರಸ್ತಾಪವಾಯಿತು.  ಇದೇ ವಿಚಾರದ ಬಗ್ಗೆ ಇತ್ತೀಚೆಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ದಲಿತ ಸಮುದಾಯದ ಮುಖಂಡರಾದ ಅಯ್ಯನಪುರ ಶಿವಕುಮಾರ್‌ ನಲ್ಲೂರು ಸೋಮೇಶ್ವರ ಆರ್‌.ಮಹದೇವು ಹಾಗೂ ಇತರರು ಜಿಲ್ಲಾ ಉಸ್ತುವಾರಿ ಸಚಿವ ಶಾಸಕರಾದ ಪುಟ್ಟರಂಗಶೆಟ್ಟಿ ಎ.ಆರ್‌.ಕೃಷ್ಣಮೂರ್ತಿ ಎಚ್‌.ಎಂ ಗಣೇಶ್‌ ಪ್ರಸಾದ್‌ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರ ಮುಂದೆ ಪ್ರಸ್ತಾಪಿಸಿದರು. 

‘ಹಾಸ್ಟೆಲ್‌ಗೆ ಸೇರಿದ ಜಮೀನನ್ನು ಅಕ್ರಮವಾಗಿ ಪೋಡುಗಳನ್ನಾಗಿ ಮಾಡಿ ಕ್ರಯ ಮಾಡಲಾಗುತ್ತಿದೆ. ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಅವರ ತಮ್ಮಂದಿರ ಮಕ್ಕಳ ಹೆಸರಿಗೆ ಎಂಟು ಗುಂಟೆ ಜಮೀನು ಕ್ರಯ ಮಾಡಲಾಗಿದೆ. ಹಾಗಿದ್ದರೂ ಅಧ್ಯಕ್ಷರು ನಿರ್ದೇಶಕರು ಸುಮ್ಮನಿದ್ದಾರೆ. ಸಮುದಾಯಕ್ಕೆ ಸೇರಿದ ಜಮೀನನ್ನು ರಕ್ಷಿಸಬೇಕು. ಈ ಸಂಘವನ್ನು ಸೂಪರ್‌ಸೀಡ್‌ ಮಾಡಬೇಕು’ ಎಂದು ಮುಖಂಡರು ಒತ್ತಾಯಿಸಿದರು.

ತಹಶೀಲ್ದಾರ್‌ ಪ್ರತಿಕ್ರಿಯಿಸಿ ‘1953–54ರಲ್ಲಿ ಖಾಸಗಿಯವರಿಗೆ ಹಾಸ್ಟೆಲ್‌ಗಾಗಿ ಖಾಸಗಿ ಜಮೀನನ್ನು ಖರೀದಿಸಲಾಗಿದೆ. ಹಲವು ವರ್ಷಗಳ ಹಿಂದೆ ಪೋಡು ದುರಸ್ತಿಯಾಗಿದ್ದು ಕೆಲವರ ಕೈ ಬದಲಾವಣೆಯಾಗಿದೆ. ಖಾತೆಗಾಗಿ ಬಂದಾಗ ಸ್ಥಳ ಪರಿಶೀಲನೆ ನಡೆಸಿದಾಗ ವಿಚಾರ ಗೊತ್ತಾಗಿ ಖಾತೆ ಮಾಡಿಲ್ಲ. ನೋಂದಣಿ ರದ್ದುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಾಗಿದೆ’ ಎಂದು ಸಚಿವರ ಗಮನಕ್ಕೆ ತಂದರು.  ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಮಾತನಾಡಿ ‘ದಾಖಲೆಗಳನ್ನು ಪರಿಶೀಲಿಸಿ ನೋಂದಣಿ ರದ್ದುಪಡಿಸಲು ಕ್ರಮ ವಹಿಸಲಾಗುವುದು. ಸಂಘವನ್ನು ಸೂಪರ್‌ ಸೀಡ್‌ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಆರೋಪ‍ ನಿರಾಕರಣೆ:  ಮಧ್ಯಾಹ್ನದ ಬಳಿಕ ಸಂಘದ ಅಧ್ಯಕ್ಷ ಎಸ್‌.ನಂಜುಂಡಸ್ವಾಮಿ ಅವರು ಸಚಿವರ ಮುಂದೆ ಹಾಜರಾಗಿ ದಲಿತ ಮುಖಂಡರು ಮಾಡಿದ ಆರೋಪಗಳನ್ನು ನಿರಾಕರಿಸಿದರು.  ವೇದಿಕೆಯಲ್ಲೇ ತಹಶೀಲ್ದಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು ‘ಇವರೇ ಇದನ್ನು ಸೃಷ್ಟಿ ಮಾಡಿದ್ದಾರೆ. ನನ್ನ ತಮ್ಮಂದಿರ ಮಕ್ಕಳು ಬೇರೆಲ್ಲೋ ಜಮೀನು ಖರೀದಿ ಮಾಡಿದರೆ ಇವರು ಹಾಸ್ಟೆಲ್‌ ಜಮೀನು ಎಂದು ಹೇಳುತ್ತಿದ್ದಾರೆ. ಈ ಪಿತೂರಿ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತು’ ಎಂದರು.  ಸಚಿವ ವೆಂಕಟೇಶ್‌ ಮಾತನಾಡಿ ‘ತಹಶೀಲ್ದಾರ್‌ ಅವರಿಗೆ ಸೃಷ್ಟಿ ಮಾಡುವುದಕ್ಕೆ ಆಗುವುದಿಲ್ಲ. ಮುಖಂಡರು ಇಲ್ಲಿ ಆರೋಪ ಮಾಡಿದ್ದಾರೆ. ಅವರ ಬಳಿ ಇದ್ದ ದಾಖಲೆ ಕೊಟ್ಟಿದ್ದಾರೆ. ನಿಮ್ಮ ಬಳಿಯೂ ದಾಖಲೆಗಳಿದ್ದರೆ ಕೊಡಿ. ತನಿಖೆ ನಡೆಸೋಣ’ ಎಂದರು. 

‘ಸಕಾಲದಲ್ಲಿ ಇ–ಸ್ವತ್ತು ನೀಡಿ’

ಜನತಾ ದರ್ಶನದ ಕೊನೆಗೆ ಮಾತನಾಡಿದ ಸಚಿವ ವೆಂಕಟೇಶ್‌ ‘ಸಾರ್ವಜನಿಕರ ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ವಿಳಂಬ ಮಾಡದೇ ಇತ್ಯರ್ಥಗೊಳಿಸಬೇಕು. ಸಮಂಜಸವಾದ ಉತ್ತರ ಪರಿಹಾರ ನೀಡಬೇಕು. ಇದು ಅಧಿಕಾರಿಗಳ ಜವಾಬ್ದಾರಿಯಾಗಿದೆ’ ಎಂದರು. ‘ಇ-ಸ್ವತ್ತು ಸಂಬಂಧ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಜಿಲ್ಲೆಯಲ್ಲಿ ಯಾವ ಯಾವ ಭಾಗದಲ್ಲಿ ಎಷ್ಟೆಷ್ಟು ಇ-ಸ್ವತ್ತು ಕುರಿತ ಅರ್ಜಿಗಳು ಬಾಕಿ ಇವೆ ಎಂಬ ಬಗ್ಗೆ ಪರಿಶೀಲಿಸಬೇಕು. ಈ ಅರ್ಜಿಗಳು ವಿಲೇವಾರಿಯಾಗದಿರಲು ಕಾರಣ ಏನೆಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಸಾರ್ವಜನಿಕರಿಗೆ ಸಕಾಲದಲ್ಲಿ ಇ-ಸ್ವತ್ತು ಅರ್ಜಿಗಳು ಇತ್ಯರ್ಥಗೊಳಿಸಬೇಕು’ ಎಂದು ತಾಕೀತು ಮಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT