ಶುಕ್ರವಾರ, ಡಿಸೆಂಬರ್ 4, 2020
20 °C
ಪೂರ್ಣಯ್ಯ ಕಾಲದ ‘ಮೋಡಿ ಕನ್ನಡ’ ಮನ್ನಣೆ ತಂದಿತ್ತ ತಹಶೀಲ್ದಾರ್ ತಹಸಿನ್ ಮಹ್ಮದ್

ಯಳಂದೂರು: ವಿದೇಶಿಗರ ಮನಸೆಳೆದ ಕನ್ನಡ- ಪರ್ಷಿಯನ್ ‘ಬಖೈರ್’

ನಾ. ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಭಾರತದಲ್ಲಿ ಹಳೇ ಬಂಗಲೆ ಮತ್ತು ಜಹಗೀರುಗಳಲ್ಲಿ ಹಾವು, ಚೇಳು ನಿಧಿ ಕಾಯುತ್ತವೆ ಎಂಬ ನಂಬುಗೆ ಜನಪದರಲ್ಲಿ ಬಲವಾಗಿದೆ. ಇವುಗಳ ಹಿಂದೆ ಮೂಢನಂಬಿಕೆ ಮತ್ತು ನಿಧಿಗಳ್ಳರ ದೂರಾಲೋಚನೆ ಸೇರಿದೆ ಎಂಬುದು ವಾಸ್ತವ. ಈ ಕಾರಣಕ್ಕೆ ಯಳಂದೂರು ಪಟ್ಟಣದ ಬಂಗಲೆಯಲ್ಲಿ ಮರೆಯಾಗಿದ್ದ ಕನ್ನಡ ಗೂಡ ಲಿಪಿ ಮತ್ತು ಬಖೈರ್‌ಗಳು ಬೆಳಕು ಕಾಣಲು ನೂರಾರು ವರ್ಷ ಕಾಯಬೇಕಾಯಿತು.

ಯಳಂದೂರು ಪಟ್ಟಣದ ಪೂರ್ಣಯ್ಯ ಬಂಗಲೆ ಅಂದಿನ ಬ್ರಿಟಿಷರ ಪಾಲಿನ ವೈಟ್‌ಹೌಸ್ ಆಗಿತ್ತು. ಸ್ವಾತಂತ್ರ್ಯಾನಂತರ ಇದು ಸರ್ಕಾರದ ಎಲ್ಲಾ ಕಚೇರಿಗಳ ತವರಾಯಿತು. ಇಲ್ಲಿ ನೂರಾರು ವರ್ಷಗಳಿಂದ ಮುಚ್ಚಿದ್ದ ಕೊಠಡಿಯೊಂದನ್ನು ತೆರೆಯಲು 80ರ ದಶಕದಲ್ಲಿ ನೇಮಕವಾದ ತಹಶೀಲ್ದಾರ್ ಮುಂದಾದರು. ಇವರೇ ತಹಸಿನ್ ಮಹ್ಮದ್. ಹಲವರ ವಿರೋಧದ ನಡುವೆ ಮುಚ್ಚಿದ್ದ ಕೊಠಡಿಯನ್ನು ತೆಗೆಸಿ ‘ಕನ್ನಡದ ಮೋಡಿ ಲಿಪಿ’ ಅಕ್ಷರಗಳನ್ನು ಬೆಳಕಿಗೆ ತಂದರು.

ಏನಿತ್ತು?: ಕಚೇರಿಯ ಕಡತವೊಂದನ್ನು ಹುಡುಕುತ್ತಿದ್ದ ತಹಶೀಲ್ದಾರ್ ಕಟ್ಟಡದ ಒಳಭಾಗದ ರೂಮ್ ಒಂದನ್ನು ಭದ್ರಪಡಿಸಿದ್ದು ಕಣ್ಣಿಗೆ ಬಿದ್ದಿತು. ಇದನ್ನು ತೆರವುಗೊಳಿಸಲು ಬಾಗಿಲು ತೆರೆದು ತಪಾಸಣೆ ನಡೆಸಿದಾಗ ಮಧ್ಯಮ ಗಾತ್ರದ ಬಿಳಿಯ ಪೆಠಾರಿ ಗೋಚರಿಸಿತು. ಒಳಭಾಗದಲ್ಲಿ ಕಪ್ಪು ವಸ್ತ್ರದಲ್ಲಿ ಸುತ್ತಿಟ್ಟಿದ್ದ ಕೈಬರಹದ ಮೋಡಿ ಕನ್ನಡ ಲಿಪಿಯ ಕಾಗದ ಪತ್ರಗಳು ಕಂಡುಬಂದವು. ದಕ್ಷಿಣ ಭಾರತದ ಚರಿತ್ರೆಗೆ ಸಂಬಂಧಿಸಿದ ಆಕರಗಳಾಗಿ ಇವು ನಂತರ ಗಮನ ಸೆಳೆದವು.

ಮೈಸೂರು ಚಿತ್ರಕಲೆ: ಮೈಸೂರು ಅರಮನೆ ಮತ್ತು ಚಾಮರಾಜನಗರ ಸೀಮೆಗೆ ಇರುವ ನಂಟು, ಮೈಸೂರು ಚಿತ್ರಕಲೆಗೆ ಸಂಬಂಧಿಸಿದ ದಾಖಲೆಗಳು ಕಡತಗಳಲ್ಲಿ ಸಿಕ್ಕಿವೆ. ಕನ್ನಡದ ಅಕ್ಷರಗಳನ್ನು ಕೂಡಿಸಿ ಬರೆಯಲಾಗಿತ್ತು. ಇಂತಹ ಚಾರಿತ್ರಿಕ ಬರಹಗಳನ್ನು 2 ಜೀಪ್‌ಗಳಲ್ಲಿ ತುಂಬಿಸಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ನೀಡಲಾಯಿತು. ಇವು ಅಂದಿನ ಕಂದಾಯ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿಸುವ ಅಪೂರ್ವ ದಾಖಲೆಗಳು ಆಗಿದ್ದವು ಎಂದು ತಹಶೀಲ್ದಾರ್ ಮಹ್ಮದ್ ಅಭಿಪ್ರಾಯ ಆಗಿತ್ತು.

ಬಖೈರುಗಳಲ್ಲಿ ಭಾಷೆ: ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಹಳೇ ಮೈಸೂರು ಭಾಗದ ರೆಕಾರ್ಡ್ ಇಲ್ಲಿ ಸಿಕ್ಕಿವೆ. ಬಟ್ಟೆಗೆ ಹಸಿ ಹುಣಸೆ ಬೀಜದ ರಸ ಬಳಸಿ ಅಕ್ಷರಗಳನ್ನು ಬರೆಯುತ್ತಿದ್ದರು. ಈ ಕಾಗದ 1 ಮೈಲಿ ದೂರ ಇದ್ದು, ಹಲವಾರು ಮಡಿಕೆ ಮಾಡಿ ಸುತ್ತಿಡಲಾಗಿತ್ತು. ಕೆರೆ ಕಟ್ಟೆಗಳನ್ನು ಕಟ್ಟಿಸಿ, ಶ್ರಮಿಕರಿಗೆ ಬಟವಾಡಿ ಮಾಡಿದ ಲೆಕ್ಕವನ್ನು ಪೂರ್ಣಯ್ಯ ಅವರೇ ಬರೆದಿದ್ದರು ಎನ್ನಲಾಗಿದೆ. ಈಗ ವಿದೇಶಿಗರು ಇವುಗಳ ಅಧ್ಯಯನಕ್ಕೆ ಮುಂದಾಗಿದ್ದಾರೆ. ಹಳೇ ದಾಖಲೆಗಳನ್ನು ಹೊಂದಿರುವ ಒಂದು ವಿಧಾನದ ಕೈಬರಹಗಳನ್ನು ಬಖೈರ್ ಎಂದು ಗುರುತಿಸಲಾಗಿದೆ. ಪರ್ಷಿಯನ್ ಭಾಷೆಯಲ್ಲಿ ಹೆಚ್ಚು ಕಂಡುಬಂದಿದೆ ಎಂದು ಬರಹಗಾರ ಈಚನೂರು ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬಂಗಲೆ ವಿಶೇಷ: ಪೂರ್ಣಯ್ಯ ವಂಶಸ್ಥರಿಗೆ ದಿವಾನಗಿರಿ ಮುಂದುವರಿ ಸಲು ಇಂಗ್ಲಿಷರು ನಿರಾಕರಿಸಿದರು. ನಿವೃತ್ತರಾದಾಗ ಯಳಂದೂರನ್ನು ಜಹಗೀರಾಗಿ ಪೂರ್ಣಯ್ಯ ಆರಿಸಿ ಕೊಂಡರು. ಅರಮನೆ ದರ್ಬಾರಿನಲ್ಲಿ ಮುಮ್ಮಡಿ ಕೃಷ್ಣರಾಜರು ಹಾಗೂ ಕರ್ನಲ್ ಜಾನ್ ಮಾಲ್ಕಂ 1807ರಲ್ಲಿ ಹಕ್ಕು ಪತ್ರ ನೀಡಿದರು. 1 ಆನೆ ಮತ್ತು ಬೆಲೆಬಾಳುವ ಕಿಲ್ಲತ್ತನ್ನು ನೀಡಿ ಗೌರವಿಸಲಾಯಿತು. 1811ರಲ್ಲಿ ಪೂರ್ಣಯ್ಯ ಶ್ರೀರಂಗಪಟ್ಟಣದಲ್ಲಿ ಗತಿಸಿದರು. ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಪೂರ್ಣಯ್ಯ ಮೊಮ್ಮಗ ಪಿ.ಎನ್. ಕೃಷ್ಣಮೂರ್ತಿ (1901-1906) ಮೈಸೂರು ದಿವಾನರಾದರು. ಪೂರ್ಣಯ್ಯ ಬಂಗಲೆ ಮನೋಲಿಥಿಕ್ ಆರ್ಚ್ ಮತ್ತು ಕೊರೊನಿಥಿಯನ್ಸ್ ಶೈಲಿಯ ಅಲಂಕಾರಿಕಾ ಬಾಗಿಲು ಮತ್ತು ಕಿಟಕಿ ಹೊಂದಿದೆ. ಗೋಡೆ ಮೇಲ್ಭಾಗದಲ್ಲಿ ರೋಮನ್ ಅಂಕಿಗಳ 2 ಗಡಿಯಾರಗಳಿವೆ.ಸುಸಜ್ಜಿತ ವೈಟ್‌ಹೌಸ್‌ಗೆ ಈಗ ಜಿಲ್ಲಾ ವಸ್ತು ಸಂಗ್ರಹಾಲಯದ ಮನ್ನಣೆ ದೊರೆತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು