ಸೋಮವಾರ, ಏಪ್ರಿಲ್ 19, 2021
32 °C

ಬಾಬು ಜಗಜೀವನರಾಂ ಸಮಾನತೆಯ ಹರಿಕಾರ: ಅಶ್ವಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ರಾಂ ಅವರು ದೇಶದ ಸಮಾನತೆಯ ಹರಿಕಾರರು ಆಗಿದ್ದರು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರು ತಿಳಿಸಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್‌ರಾಂ ಅವರ 114ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಸ್ಪೃಶ್ಯತೆಯ ವಿರುದ್ಧ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿಕೊಂಡಿದ್ದ ಬಾಬೂಜೀ ಅವರು ದೇಶದಲ್ಲಿ ಸಮಾನತೆ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದರು. ಅಸಂಘಟಿತ ಕಾರ್ಮಿಕರ, ಭೂ ರಹಿತರ ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ನಿಂತಿದ್ದರು’ ಎಂದರು.

‘ಬಾಬು ಜಗಜೀವನರಾಂ ಅವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದರು. ತಾರತಮ್ಯದಿಂದ ಕೂಡಿದ್ದ ಅಂದಿನ ಸಮಾಜವನ್ನು ಸರಿದಾರಿಗೆ ತರಲು ಪಣತೊಟ್ಟಿದ್ದ ಅವರ ವಿಚಾರಧಾರೆ, ತತ್ವ ಸಿದ್ದಾಂತ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.  

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ ಅವರು ‘ಮಾತನಾಡಿ ಜಗಜೀವನರಾಂ ಅವರು ಅಪ್ರತಿಮ ದೇಶಭಕ್ತರಾಗಿದ್ದರು. ದೇಶದಲ್ಲಿನ ದೀನದಲಿತರ, ದಮನಿತರ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಹಸಿರು ಕ್ರಾಂತಿಯ ಮೂಲಕ ಅಖಂಡ ಭಾರತದ ಕೋಟ್ಯಂತರ ಜನರ ಹಸಿವನ್ನು ನೀಗಿಸಿದ ಅವರು ಎಲ್ಲರಿಗೂ ಅನುಕರಣೀಯರಾಗಿದ್ದಾರೆ’ ಎಂದರು.

ಮುಖ್ಯ ಭಾಷಣ ಮಾಡಿದ ಪುದುಚೇರಿ ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ.ರಂಗಯ್ಯ ಅವರು ‘ಬಾಬು ಜಗಜೀವನ‌ರಾಂ ಅವರ ಜಯಂತಿಯನ್ನು ಸಮತಾ ದಿನವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಿಸಲು ಹೋರಾಡಿದ ಮಹಾನ್ ಚೇತನ ಅವರು’ ಎಂದರು.

ಸಂವಿಧಾನ ನಮಗೆ ಸಮಾನತೆ ಕೊಟ್ಟಿದೆ. ಆದರೆ ಸಮಾಜವು ಸಮಾನತೆಯನ್ನು ಕಿತ್ತುಕೊಂಡಿದೆ. ಅದನ್ನು ಪಡೆಯಲು ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಮೊದಲಿಗೆ ಶೈಕ್ಷಣಿಕ ಪ್ರಜ್ಞಾವಂತರಾಗಿ ನಂತರ ಸಂಘಟನೆಯನ್ನು ಬಲಗೊಳಿಸಬೇಕು. ಬಸವಣ್ಣನವರ ಅದರ್ಶ ಕಾಯಕ ತತ್ವವನ್ನು ಎಲ್ಲರೂ ಪಾಲಿಸಬೇಕು. ಆ ಗಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವೆಂದು ಬಾಬೂಜೀಯವರು ನಂಬಿದ್ದರು’ ಎಂದು ಅವರು ಅಭಿಪ್ರಾಯಪಟ್ಟರು. 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್ ಅವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ತುಮಕೂರಿನ ಹರಳಯ್ಯ ಪೀಠಾಧ್ಯಕ್ಷರಾದ ಬಸವಹರಳಯ್ಯ ಹಾಗೂ ಉರಿಲಿಂಗಿ ಪೆದ್ದಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮತ್ತು ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಅವರು ಮಾತನಾಡಿದರು.

ಜಿಲ್ಲಾ  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್‌, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಚ್.ಸಿ.ಭಾಗೀರಥಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು