ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ರಚನೆ

ಕಾಂತರಾಜ ಜಾತಿಗಣತಿ ವರದಿ ಜಾರಿಗೆ ಮಂಗಲ ಶಿವಕುಮಾರ್ ಆಗ್ರಹ
Published 28 ನವೆಂಬರ್ 2023, 6:21 IST
Last Updated 28 ನವೆಂಬರ್ 2023, 6:21 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂತರಾಜ ಆಯೋಗ ನೀಡಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸುವಂತೆ ಆಗ್ರಹಿಸಲು ಮತ್ತು ಹಿಂದುಳಿದ ವರ್ಗಗಳ ಕಷ್ಟಗಳಿಗೆ ಸ್ಪಂದಿಸುವುದಕ್ಕಾಗಿ ಪಕ್ಷಾತೀತವಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ರಚಿಸಲು ವಿವಿಧ ಸಮಾಜಗಳ ಮುಖಂಡರು ನಿರ್ಧರಿಸಿದ್ದಾರೆ. 

ಮುಖಂಡ ಮಂಗಲ ಶಿವಕುಮಾರ್‌ ಅವರ ನೇತೃತ್ವದಲ್ಲಿ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಮೊದಲ ಹಂತವಾಗಿ ಕಾಂತರಾಜ ವರದಿಯನ್ನು ಅಂಗೀಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಹೋರಾಟ ನಡೆಸಲು ಒಕ್ಕೂಟ ತೀರ್ಮಾನಿಸಿದೆ. 

ಸಭೆಯಲ್ಲಿ ಮಾತನಾಡಿದ ಮಂಗಲ ಶಿವಕುಮಾರ್‌, ‘ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಹಿಂದುಳಿದ ಸಮಾಜಗಳು ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿವೆ. ಸಮಾಜದಲ್ಲಿ ಎಲ್ಲ ರಂಗಗಳಲ್ಲೂ ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಹಿಂದುಳಿದ ಸಮಾಜಗಳು ಒಗ್ಗೂಡದೆ ಉದಾಸೀನ ಮನೋಭಾವ ಹೊಂದಿರುವ ಕಾರಣದಿಂದಾಗಿ ಒಂದು ಶಕ್ತಿಯಾಗಿ ಹೊರಹೊಮ್ಮಿಲ್ಲ. ಇದೇ ಪರಿಸ್ಥಿತಿ ರಾಜ್ಯಾದ್ಯಂತ ಇದ್ದು, ಇದರಿಂದ ನಾವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ’ ಎಂದು ಹೇಳಿದರು. 

‘ಹಿಂದುಳಿದ ವರ್ಗಗಳ  ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗಾಗಿ ವಿವಿಧ ಸರ್ಕಾರಗಳು ಹಲವು ಆಯೋಗಗಳನ್ನು ರಚನೆ ಮಾಡಿದ್ದರೂ, ಆಯೋಗಗಳು ನೀಡಿರುವ ವರದಿಯನ್ನು ಸರ್ಕಾರಗಳು ಜಾರಿಗೆ ತಂದಿಲ್ಲ’ ಎಂದು ಅವರು ದೂರಿದರು. 

‘1920ರಲ್ಲಿ ಮೈಸೂರು ಅರಸರು ಮೊದಲ ಬಾರಿಗೆ ಮಿಲ್ಲರ್ ಆಯೋಗವನ್ನು ರಚನೆ ಮಾಡಿ ಹಿಂದುಳಿದ ವರ್ಗಗಳಿ ಧ್ವನಿಯಾದರು. ನಂತರ ಬಂದ ಎಲ್ಲ ಸರ್ಕಾರಗಳು ಹಿಂದುಳಿದ ವರ್ಗಗಳನ್ನು ಗುರುತಿಸಿ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ಭದ್ರತೆ ಮತ್ತು ಶಿಕ್ಷಣ ನೀಡುವಲ್ಲಿ ವಿಪಲವಾಗಿವೆ’ ಎಂದರು. 

‘ಮಾಜಿ ಮುಖ್ಯಮಂತ್ರಿ  ದಿವಗಂತ ದೇವರಾಜ ಅರಸ್ ಅವರು ಎಲ್.ಜಿ.ಹಾವನೂರು ಆಯೋಗವನ್ನು ರಚಿಸಿದರು. ಆಯೋಗದ ವರದಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿಲ್ಲ. 1983ರಲ್ಲಿ ರಾಮಕೃಷ್ಣ ಹೆಗಡೆಯವರು  ವೆಂಕಟಸ್ವಾಮಿ ಆಯೋಗ ರಚನೆ ಮಾಡಿದ್ದರು. ಅದರಲ್ಲಿ ಕೆಲ ಸಮುದಾಯಗಳನ್ನು ಕೈಬಿಟ್ಟಿದ್ದಾರೆ ಎಂದು ವರದಿ ತಿರಸ್ಕಾರ ಮಾಡಿ, ಎಬಿಸಿಡಿ ಎಂದು ವರ್ಗೀಕರಣ ಮಾಡಲಾಗಿತ್ತು. 1994ರಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಾಡಲಾಗಿತ್ತು. ಆಯೋಗಕ್ಕೆ ಪ್ರಾರಂಭದಿಂದಲೂ ವಿರೋಧ ಮಾಡಿಕೊಂಡು ಬರಲಾಗಿದೆ. ಕಾಂತರಾಜ ಅವರು ನೀಡಿರುವ ವರದಿಯ ಅಂಗೀಕಾರಕ್ಕೆ ಈಗಲೂ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ, ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಸರ್ಕಾರ ಕಾಂತರಾಜ ವರದಿ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಚಳಗಾಲದ ಅಧಿವೇಶನದಲ್ಲಿ ವರದಿಯನ್ನು ಸರ್ಕಾರ  ಅಂಗೀಕಾರ ಮಾಡಬೇಕು’  ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಈಡಿಗ ಸಮುದಾಯದ ಮುಖಂಡ ನಟರಾಜೇಗೌಡರು, ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ರಾಜೇಂದ್ರ, ರಾಮಶೆಟ್ಟಿ, ಮಹದೇವಸ್ವಾಮಿ,  ಸವಿತಾ ಸಮಾಜದ ಚಿನ್ನಸ್ವಾಮಿ, ವೆಂಕಟೇಶ್,  ಮಡಿವಾಳ ಸಮಾಜದ ದುಂಡುಮಹದೇವ, ಗಾಣಿಗ ಸಮುದಾಯದ ಲಕ್ಷ್ಮಣ, ಬೆಳ್ಳಶೆಟ್ಟಿ, ಜಯರಾಮಶೆಟ್ಟಿ, ಬದನಗುಪ್ಪೆ ಬಸವಣ್ಣ, ಪ್ರಕಾಶಶೆಟ್ಟಿ, ಪಿ.ಮಹದೇವಸ್ವಾಮಿ,  ಚೆನ್ನಿಪುರಮೋಳೆ ಮಹದೇವು, ಮಲ್ಲಯ್ಯನಪುರ ಶಿವಣ್ಣ, ನಾಗವಳ್ಳಿ ಕೇಶವಮೂರ್ತಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT