ಸೋಮವಾರ, ಅಕ್ಟೋಬರ್ 21, 2019
22 °C
ರೈತರೊಬ್ಬರ ಜಮೀನಿನಲ್ಲಿ ಅವಿತಿರುವ ವ್ಯಾಘ್ರ

ಬಂಡೀಪುರ: ಎರಡನೇ ದಿನವೂ ಸೆರೆ ಸಿಗದ ಹುಲಿ, ಮುಂದುವರಿದ ಕಾರ್ಯಾಚರಣೆ

Published:
Updated:
Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಚೌಡಹಳ್ಳಿ–ಹುಂಡೀಪುರ ಗ್ರಾಮದಲ್ಲಿ ರೈತನನ್ನು ಕೊಂದಿರುವ ಹುಲಿಯನ್ನು ಪತ್ತೆ ಮಾಡುವ ಕಾರ್ಯಾಚರಣೆ ಮುಂದುವರಿದಿದ್ದು, ಎರಡನೇ ದಿನವೂ ವ್ಯಾಘ್ರ ಸೆರೆ ಸಿಗಲಿಲ್ಲ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹುಂಡೀಪುರ ಗ್ರಾಮದ ಎಲ್ಲೆಯಲ್ಲಿ ಹುಲಿಯ ಹೆಜ್ಜೆ ಗುರುತು ಕಂಡು ಬಂದಿದ್ದರಿಂದ, ಆರು ಮಂದಿ ಪಶು ವೈದ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಆರು ಆನೆ ಬಳಸಿಕೊಂಡು ಗುರುವಾರ ಬೆಳಿಗ್ಗೆಯೇ ಕಾರ್ಯಾಚರಣೆ ಆರಂಭಿಸಿದರು. ಕಳೆದ ರಾತ್ರಿ ಅದೇ ಭಾಗದಲ್ಲಿ ಹುಲಿ ಓಡಾಡಿದ್ದ ಚಿತ್ರಗಳು, ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದವು.

ಅಲ್ಲಲ್ಲಿ ಹೆಜ್ಜೆ ಗುರುತುಗಳು ಕಂ‌ಡು ಬಂದಿದ್ದು ಬಿಟ್ಟರೆ ಹುಲಿಯ ಸುಳಿವು 12 ಗಂಟೆಯವರೆಗೂ ಸಿಗಲಿಲ್ಲ. ಗ್ರಾಮದ ರೈತ ಮಹೇಂದ್ರ ಎಂಬುವವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಹುಲಿಯ ಘರ್ಜನೆ ಕೇಳಿ ಬಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದರಿಂದ ಸಿಬ್ಬಂದಿ ಅಲ್ಲಿಗೆ ಹೋಗಿ ಕಾರ್ಯಾಚರಣೆ ನಡೆಸಿದರು. ಸಂಜೆ 5 ಗಂಟೆಯವರೆಗೂ ಹುಲಿ ಪತ್ತೆಯಾಗಲಿಲ್ಲ. ಅದೇ ಜಮೀನಿನಲ್ಲಿ ಹುಲಿ ಇದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ಜಗತ್‌ರಾಮ್‌ ಭೇಟಿ: ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ಜಗತ್‌ರಾಮ್‌, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಹಾಯಕ ಇನ್‌ಸ್ಪೆಕ್ಟರ್ ಜನರಲ್‌ ರಾಜೇಂದ್ರ ಗಾರವಾಡ್‌, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್‌ ಅವರು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಜೊತೆ ಚರ್ಚಿಸಿದರು. 

ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಬಾಲಚಂದ್ರ, ‘ಯಾವ ರೀತಿ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂಬ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಹುಲಿ ಇದೇ ಆಸುಪಾಸಿನಲ್ಲಿರುವುದು ದೃಢಪಟ್ಟಿದೆ. ರೈತ ಶಿವಲಿಂಗಪ್ಪ ಅವರನ್ನು ಕೊಂದಿರುವ ಹುಲಿ ಇದೇ ಎಂಬುದೂ ಹೆಜ್ಜೆಗುರುತಿನಿಂದ ಖಚಿತವಾಗಿದೆ. ಜೀವಂತವಾಗಿ ಸೆರೆ ಹಿಡಿಯಲು ಪ್ರಯತ್ನ ನಡೆಸುತ್ತಿದ್ದೇವೆ. ನಾಲ್ಕು ಅರಿವಳಿಕೆ ಗನ್‌ಗಳನ್ನು ಬಳಸಲಾಗುತ್ತಿದೆ. ಹುಲಿಯ ಚಲನವಲನದ ಮೇಲೆ ನಿಗಾ ಇಡಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನಷ್ಟು ಕ್ಯಾಮೆರಾಗಳನ್ನು ಅಳವಡಿಸಲಿದ್ದೇವೆ’ ಎಂದು ಹೇಳಿದರು. 

ಆಕ್ರೋಶ: ಈ ಮಧ್ಯೆ, ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದ್ದು, ಹುಲಿಯನ್ನು ಕೊಲ್ಲಲೇ ಬೇಕು ಎಂದು ಆಗ್ರಹಿಸಿದ್ದಾರೆ. ಕೊಲ್ಲುವ ಆದೇಶವನ್ನು ಹಿಂಪಡೆದಿರುವುದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪರಿಸರವಾದಿಗಳ ವಿರುದ್ಧ ಸ್ಥಳೀಯರು ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ. 

‘ಸ್ವಯಂ ಪ್ರೇರಿತರಾಗಿ ಬಂದಿದ್ದರು’

ಖಾಸಗಿ ಶೂಟರ್‌ಗಳಾದ ಶಫತ್‌ ಅಲಿ ಖಾನ್‌ ಮತ್ತು ಅಸ್ಗರ್‌ ಅಲಿ ಅವರನ್ನು ಕಾರ್ಯಾಚರಣೆಯಲ್ಲಿ ಬಳಸಲು ಮುಂದಾಗಿದ್ದರ ಸಂಬಂಧ ಪ್ರತಿಕ್ರಿಯಿಸಿದ ಬಾಲಚಂದ್ರ, ‘ಸ್ವಯಂ ಪ್ರೇರಿತರಾಗಿ ಅವರು ಬಂದಿದ್ದರು. ಈ ಹಿಂದೆ ಚಿರತೆ ಸೆರೆಹಿಡಿದ ಅನುಭವ ಇದ್ದುದರಿಂದ, ಹುಲಿಯನ್ನು ಸೆರೆ ಹಿಡಿಯಲು ಅನುಕೂಲವಾಗುವುದಾದರೆ ಆಗಲಿ ಎಂದು ಅವರ ಸೇವೆಯನ್ನು ಪಡೆಯಲು ಬಯಸಿದ್ದು ನಿಜ’ ಎಂದರು. 

‘ಕಾರ್ಯಾಚರಣೆಯಲ್ಲಿ ಭಾಗವಹಿಸಬೇಕಾದರೆ ಪತ್ರ ನೀಡಬೇಕು ಎಂದು ಅವರು ಕೇಳಿದ್ದರು. ಅದನ್ನೂ ಕೊಟ್ಟಿದ್ದೆವು. ಆದರೆ, ಮಹಾರಾಷ್ಟ್ರದಲ್ಲಿ ಆಗಿದ್ದ ವಿವಾದ ಹಾಗೂ ಇವರಿಬ್ಬರ ಮೇಲೆ ಬೇರೆ ಬೇರೆ ಆರೋಪಗಳಿರುವುದು ನಂತರ ತಿಳಿಯಿತು. ಮತ್ತೊಂದು ವಿವಾದ ಉಂಟಾಗುವುದು ಬೇಡ ಎಂದು ಪತ್ರವನ್ನು ವಾಪಸ್ ಪಡೆದು ಅವರನ್ನು ಕಳುಹಿಸಿದೆವು’ ಎಂದು ಹೇಳಿದರು. 

ಹೊಲದಲ್ಲಿ ಕಂಡ ಹುಲಿ, ಮರಿಗಳು

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದ ಓಂಕಾರ ವಲಯದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು ಕಾಣಿಸಿಕೊಂಡಿವೆ. ಕೊತ್ತನವಾಡಿ ಗ್ರಾಮದ ಗುಂಡಪ್ಪ ಅವರ ಜಮೀನಿನಲ್ಲಿ ಮರಿಯೊಂದಿಗಿರುವ ಹುಲಿಯನ್ನು ಕೇರಳದ ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಹುಲಿಯನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)