ಶನಿವಾರ, ಜೂನ್ 25, 2022
24 °C
ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಲಿಂಗಾಯತರು, ಕಲಾತಂಡಗಳ ವೈಭವ

ಬಸವ ಜಯಂತ್ಯುತ್ಸವ: ಅದ್ಧೂರಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸಿದ್ಧಮಲ್ಲೇಶ್ವರ ವಿರಕ್ತ ಮಠದಲ್ಲಿ ಶನಿವಾರ ನಡೆದ ಗ್ರಾಮಾಂತರ ಬಸವ ಜಯಂತ್ಯುತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. 

ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ನಡೆದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಜಾನಪದ ಕಲಾ ತಂಡಗಳ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ಗ್ರಾಮೀಣ ಭಾಗಗಳಿಂದ ಬಂದ ಸಾವಿರಾರು ಸಂಖ್ಯೆಯ ವೀರಶೈವ ಲಿಂಗಾಯತರು, ಬಸವ ಅನುಯಾಯಿಗಳು ಮೆರವಣಿಗೆಯಲ್ಲಿ ಹಾಗೂ ಮಠದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು. 

ಮಧ್ಯಾಹ್ನ 12ಕ್ಕೆ ಮಠದ ಆವರಣದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲಂಕೃತ ರಥದಲ್ಲಿ ಅಳವಡಿಸಿದ್ದ ಬಸವೇಶ್ವರರ ಭಾವಚಿತ್ರಕ್ಕೆ ಮಠದ ಅಧ್ಯಕ್ಷ ಚನ್ನಬಸವ ಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಮುಡುಗೂರು ಮಠದ ಇಮ್ಮಡಿ ಉದ್ದಾನ ಸ್ವಾಮೀಜಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. 

ನಂದಿಧ್ವಜ ಕುಣಿತ, ವೀರಗಾಸೆ, ಗೊರವರ ಕುಣಿತ, ಗಾರಡಿ ಗೊಂಬೆ, ಕಂಸಾಳೆ, ಬ್ಯಾಂಡ್ ಸೆಟ್, ಭಜನಾ ಮೇಳ, ಮಂಗಳವಾದ್ಯ ಸೇರಿದಂತೆ 10ಕ್ಕೂ ಹೆಚ್ಚು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತ, ಡೀವಿಯೇಷನ್‌ ರಸ್ತೆ, ಸುಲ್ತಾನ್ ಷರೀಫ್‌ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡೀವಿಯೇಷನ್‌ ರಸ್ತೆಯ ಮೂಲಕ ಭುವನೇಶ್ವರಿ ವೃತ್ತಕ್ಕೆ ಬಂದು ನಂತರ ರಾಚಯ್ಯ ಜೋಡಿ ರಸ್ತೆಯಾಗಿ ಮಠ ತಲುಪಿ ಮುಕ್ತಾಯ ಕಂಡಿತು. ನಾಲ್ಕು ಗಂಟೆಗೂ ಹೆಚ್ಚು ಕಾಲ ಮೆರವಣಿಗೆ ನಡೆಯಿತು. 

ವಿವಿಧ ಗ್ರಾಮಗಳಿಂದ ಬಂದಿದ್ದ, ಬಸವ ಮೆರವಣಿಗೆ, ಆಲೂರು ಗ್ರಾಮಸ್ಥರ ಅಶ್ವಾರೂಢ ಬಸವೇಶ್ವರ ಪುತ್ಥಳಿ, ದಾಸನೂರು ಗ್ರಾಮದ ಬಸವೇಶ್ವರ ಉತ್ಸವ ಮೂರ್ತಿ ರಥ, ಭಜನಾ ತಂಡ, ಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಗ್ರಾಮಗಳಿಂದ ಬಂದಿದ್ದ ಬಸವಣ್ಣನವರ ಭಾವಚಿತ್ರ ಹೊಂದಿದ್ದ ಟ್ರಾಕ್ಟರ್‌ಗಳು ಹಾಗೂ ಆಟೊಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. 

ಗುದ್ದುಗೆ ಪೂಜೆ: ಇದಕ್ಕೂ ಮೊದಲು ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಐದು ಗಂಟೆಗೆ ಪೂಜ್ಯರ ಗುದ್ದುಗೆ ಪೂಜೆ ನೆರವೇರಿತು. ಗೌಡಹಳ್ಳಿ ವಿರಕ್ತ ಮಠದ ಮರಿ ತೋಂಟದಾರ್ಯ ಸ್ವಾಮೀಜಿ ಅವರು ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು. ಹಂಡ್ರಕಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ ಧರ್ಮ ಸಂದೇಶ ಬೋಧನೆ ಮಾಡಿದರು.

ನಂತರ ಬಸವರಾಜ ಸ್ವಾಮೀಜಿಯ ಅನುಭವ ಮಂಟಪದ ಕಳಾಸಾರೋಣ ಕಾರ್ಯಕ್ರಮದಲ್ಲಿ ಕೊತ್ತಲವಾಡಿ ಮಠದ ಗುರುಸ್ವಾಮಿ, ಹಂಚಿಪುರ ಮಠದ ಚನ್ನಬಸವ ಸ್ವಾಮೀಜಿ ಸೇರಿದಂತೆ ಹಲವು ಮಠಾಧಿಪತಿಗಳು ಪಾಲ್ಗೊಂಡಿದ್ದರು. 

ಸಂಜೆ ಉಮ್ಮತ್ತೂರು ಬಸವರಾಜು ತಂಡದಿಂದ ಹಾಸ್ಯೋತ್ಸವ, ಬಿ.ಎನ್. ಕುಮಾರ್ ಬೋಗಯ್ಯನಹುಂಡಿ ಮತ್ತು ತಂಡದಿಂದ ಭಕ್ತಿ ಗೀತೆ, ವಿದ್ವಾನ್ ಶ್ರಿ ಶಿವಕುಮಾರಶಾಸ್ತ್ರಿ ಅವರಿಂದ ಶಿವಕಥೆ ನಡೆಯಿತು.

ಸಿಹಿ, ಪಾನಕ, ಮಜ್ಜಿಗೆ ವಿತರಣೆ

ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಹಾಗೂ ಇಂಚರ ಹೋಟೆಲ್‌ ಸಮೂಹದ ಸ್ಟೈಲ್ ಮಂಜು ನೇತೃತ್ವದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಗೆ ಮೈಸೂರು ಪಾಕ್‌, ಪಾನಕ, ಮಜ್ಜಿಗೆ ವಿತರಿಸಲಾಯಿತು.

ಕೊತ್ತಲವಾಡಿ ಕುಮಾರ್, ಸತೀಶ್, ಸುಭಾಷ್‌ ಪಟೇಲ್, ವೀರನಪುರ ಮಹದೇವಸ್ವಾಮಿ ಇದ್ದರು. 

ಅನುಭವ ಮಂಟಪ ಉದ್ಘಾಟನೆ ಇಂದು

ಸಿದ್ಧಮಲ್ಲೇಶ್ವರ ಮಠದ ಆವರಣದಲ್ಲಿ ಭಕ್ತರ ಸಹಕಾರದಿಂದ ₹6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಸವರಾಜ ಸ್ವಾಮೀಜಿ ಅವರ ಅನುಭವ ಮಂಟಪ ಹಾಗೂ ₹2.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬಸವೇಶ್ವರರ ಪ್ರತಿಮೆ ಅನಾವರಣ ಕಾರ್ಯಕ್ರಮ ಭಾನುವಾರ (ಮೇ 22) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. 

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಪಿರಿಯಾಪಟ್ಟಣದ ಬೆಟ್ಟದಪುರ ಸಲಿಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ‍‍ಪಡುಗೂರು ಅಡವಿ ಮಠದ ಶಿಲಿಂಗೇಂದ್ರ ಸ್ವಾಮೀಜಿ ಈ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ಬಳಿಕ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾಗವಹಿಸಲಿದ್ದಾರೆ.

ರಾತ್ರಿ 9 ಗಂಟೆಗೆ ಸಿದ್ಧಮಲ್ಲೇಶ್ವರ ಕಲಾ ಬಳಗದಿಂದ ‘ಪ್ರಭುಲಿಂಗ ಲೀಲೆ’ ನಾಟಕ ಪ್ರದರ್ಶನಗೊಳ್ಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.