ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡು ಜಿಲ್ಲೆ ಬೆಸೆಯುವ ‘ಭೈಲಾಪುರ ಮಾರಮ್ಮ’

ನಾ.ಮಂಜುನಾಥಸ್ವಾಮಿ
Published 18 ಫೆಬ್ರುವರಿ 2024, 4:59 IST
Last Updated 18 ಫೆಬ್ರುವರಿ 2024, 4:59 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಆಲ್ಕೆರೆ ಅಗ್ರಹಾರ ಗ್ರಾಮದ ಭೈಲಾಪುರ ಮಾರಮ್ಮ ಹೊಸ ದೇಗುಲ ಲೋಕಾರ್ಪಣೆಗೆ ಸಿದ್ದವಾಗಿದ್ದು, ಇದೇ 20 ರಂದು ಅಂಕಣ ಸಂಪ್ರೋಕ್ಷಣಾ ಪ್ರತಿಷ್ಠಾಷನಾ ಮಹೋತ್ಸವ ನಡೆಯಲಿದೆ.

ಪುರಾಣ ಪ್ರಸಿದ್ಧವಾದ ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಚರಿತ್ರೆ ಇದೆ. ಸಾವಿರಾರು ಭಕ್ತರು ನಾಡಿನ ವಿವಿಧ ಭಾಗಗಳಿಂದ ದೇವಿ ದರ್ಶನಕ್ಕೆ ಬರುತ್ತಾರೆ. ಇಲ್ಲಿಯವರೆಗೂ ಬಯಲಿನಲ್ಲಿ ಇದ್ದ ಮೂರ್ತಿಗೆ ಗ್ರಾಮಸ್ಥರು ನೂತನ ಗುಡಿ ಕಟ್ಟಿ, ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಕಾರ್ಯಕ್ಕೆ ಮೂರು ತಿಂಗಳ ಮೊದಲೇ ಚಾಲನೆ ನೀಡಿದ್ದಾರೆ.  

‘ಜಿಲ್ಲೆಯ ವಿವಿಧ ಭಾಗಗಳಲ್ಲಿ ದೇವಿಯ ಭಕ್ತರಿದ್ದಾರೆ. ತಾಲ್ಲೂಕಿನ ಬೂದಿತಿಟ್ಟು, ಮದ್ದೂರು, ಗೌಡಹಳ್ಳಿ, ಮಲಾರಪಾಳ್ಯ, ದೇವರಹಳ್ಳಿ ಗ್ರಾಮಗಳ ಭಕ್ತರು ಮನೆ ದೇವರಾಗಿ  ಮಾರಮ್ಮನನ್ನು ಆಯ್ಕೆ ಮಾಡಿಕೊಂಡು ಪ್ರತಿ ವರ್ಷ ಪೂಜೆ ಪುನಸ್ಕಾರ ನೆರವೇರಿಸಿ, ಅನ್ನಸಂತರ್ಪಣೆ ಮಾಡುವ ಪದ್ಧತಿ ಇದೆ’ ಎನ್ನುತ್ತಾರೆ ಭಕ್ತ ನಂಜಪ್ಪ.

‘ಊರೊಟ್ಟಿನ ಹಬ್ಬಗಳಲ್ಲಿ ದೇವಿಗೆ ಅಡಿಕೆ ಸಿರಿ ಸಿಂಗಾರ ಮಾಡಿ, ಬಗೆ ಬಗೆ ಪುಷ್ಪಗಳ ಅಲಂಕಾರ ಗಮನ ಸೆಳೆಯುತ್ತದೆ. ಸತ್ತಿಗೆ, ಸೂರಿಪಾನಿ ಜೊತೆ ಭಕ್ತರು ಸಾಗಿ ಪೂಜಾ ಕೈಂಕರ್ಯ ನೆರವೇರಿಸಿ,   ಪಂಚಾಮೃತ, ಎಳನೀರು ಅರ್ಪಿಸುತ್ತಾರೆ. ಸುಮಂಗಲೆಯರು ಸಿಂಗರಿಸಿದ ತಟ್ಟೆಯಲ್ಲಿ ತಂಬಿಟ್ಟು ಇಟ್ಟು, ದೇವರಿಗೆ ತಂಪು ತುಂಬಿ ಮಳೆ, ಬೆಳೆ, ಮನೆ ಮಕ್ಕಳ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬದ ದಿನ ದೇವಿಗೆ ಕೇಲು ಉತ್ಸವ, ಉತ್ಸವ ಮೂರ್ತಿ ಮೆರವಣಿಗೆ ಹಾಗೂ ಕೊಂಡೋತ್ಸವ ನಡೆಯಲಿದೆ’ ಎಂದು  ಗ್ರಾಮಸ್ಥರು ಹೇಳಿದರು.

ನರಸೀಪುರದಿಂದ ಬಂದವಳು

ಈ ಮಾರಮ್ಮ ದೇವಿ ಕೂಡ ತಿರಮಕೂಡಲು ನರಸೀಪುರ ಸಮೀಪದ ಗ್ರಾಮದವಳು. ಶತಮಾನಗಳ ಹಿಂದೆ ಕಾಣಿಸಿಕೊಂಡ ಶೀತ ಜ್ವರಕ್ಕೆ ಬೆಚ್ಚಿದ ಅಲ್ಲಿನ ಗ್ರಾಮಸ್ಥರು ಹೊಸ ಪ್ರದೇಶ ಹುಡುಕಿ ಹಾಲಿನ ಸಮೃದ್ಧತೆ ಮತ್ತು ನೀರಿನಿಂದ ನಳನಳಿಸುತ್ತಿದ್ದ ಆಲ್ಕೆರೆ ಅಗ್ರಹಾರಕ್ಕೆ ಬಂದರು. ಜೊತೆಯಲ್ಲಿ ಮಾರಮ್ಮನಿಗೂ ಇಲ್ಲಿ ಪೂಜೆ ಸಲ್ಲಿಸಿದರು. ಶ್ರಮಿಕರ ಭಕ್ತಿಗೆ ಒಲಿದ ಭೈಲಾಪುರ ಮಾರಮ್ಮ ದೇವಿಯಾಗಿ ಅಗ್ರಹಾರದಲ್ಲಿ ನೆಲೆಗೊಂಡ ಬಗ್ಗೆ ಜನಪದರು ಈಗಲೂ ಸ್ಮರಿಸುತ್ತಾರೆ. ‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಭಕ್ತರೂ ದೇವಿಗೆ ನಡೆದುಕೊಳ್ಳುತ್ತಾರೆ’ ಎಂದು ಶಿವ ಪಾರ್ವತಿ ದೇವಳದ ಆಗಮಿಕ ರಾಮಪ್ಪ ಹೇಳಿದರು. 

ಪ್ರತಿಷ್ಠಾಪನೆಗೆ ಸಿದ್ಧವಾದ ದೇವಿಯ ಸುಂದರ ವಿಗ್ರಹ.
ಪ್ರತಿಷ್ಠಾಪನೆಗೆ ಸಿದ್ಧವಾದ ದೇವಿಯ ಸುಂದರ ವಿಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT