ಭಾನುವಾರ, ನವೆಂಬರ್ 27, 2022
26 °C
ಬುಡಕಟ್ಟು ಸಮುದಾಯದವರು, ಆಮ್ಲಜನಕ ದುರಂತ ಸಂತ್ರಸ್ತರೊಂದಿಗೆ ರಾಹುಲ್‌ ಸಂವಾದ

ಭಾರತ್‌ ಜೋಡೊ: ಸಂಸ್ಕೃತಿ ಮೆಚ್ಚಿದರು, ಸಂತ್ರಸ್ತರ ಕಷ್ಟಕ್ಕೆ ಮರುಗಿದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಜೀವನ ಪದ್ಧತಿ, ಸಂಸ್ಕೃತಿಯನ್ನು ಮೆಚ್ಚಿದ
ರಾಹುಲ್‌ ಗಾಂಧಿ, ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಕುಟುಂಬದವರ ಕಷ್ಟವನ್ನು ಕೇಳಿ ಮರುಗಿದರು.

ರಾಜ್ಯದಲ್ಲಿ ‘ಭಾರತ್‌ ಜೋಡೊ’ ಯಾತ್ರೆಯ ಮೊದಲ ದಿನದ ಭೋಜನ ವಿರಾಮದಲ್ಲಿ ಅವರು ಸೋಲಿಗರು, ಜೇನ ಕುರುಬರು ಹಾಗೂ ಬೆಟ್ಟಕುರುಬ ಸಮುದಾಯಗಳ ಮುಖಂಡರು ಹಾಗೂ ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುಟುಂಬದೊಂದಿಗೆ ಪ್ರತ್ಯೇಕವಾಗಿ ಸಂವಾದ ನಡೆಸಿದರು.  

‘ಮೂರೂ ಸಮುದಾಯಗಳ 20 ಮಂದಿ ಸಂವಾದದಲ್ಲಿದ್ದರು. ಸೋಲಿಗ, ಜೇನು ಕುರುಬ ಹಾಗೂ ಬೆಟ್ಟ ಕುರುಬರು, ಅವರ ಜೀವನ ಕ್ರಮ, ಕುಲಕಸುಬುಗಳ ಬಗ್ಗೆ ಮಾಹಿತಿ ಪಡೆದ ರಾಹುಲ್‌ ಗಾಂಧಿ, ಹಾಲುಮತ ಕುರುಬರು, ಜೇನು ಕುರುಬರು ಹಾಗೂ ಬೆಟ್ಟಕುರುಬರ ನಡುವಣ ವ್ಯತ್ಯಾಸದ ಬಗ್ಗೆ ಮಾಹಿತಿ ಕೇಳಿದರು. ಜೊತೆಗೆ ಇದ್ದ ಸಿದ್ದರಾಮಯ್ಯ ಅವರನ್ನೂ ಈ ಬಗ್ಗೆ ಪ್ರಶ್ನಿಸಿದರು’ ಎಂದು ಸೋಲಿಗ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಅರಣ್ಯ ಹಕ್ಕು ಕಾಯ್ದೆಯಿಂದ ಗಿರಿಜನರಿಗೆ ಆಗಿರುವ ಅನುಕೂಲ, ಆದಿವಾಸಿಗಳ ಸಮಸ್ಯೆಗಳು, ವಂಶವಾಹಿ ಕಾಯಿಲೆ ಸಿಕೆಲ್‌ಸೆಲ್‌ ಅನೀಮಿಯಾದ ಬಗ್ಗೆಯೂ ಮುಖಂಡರು ರಾಹುಲ್‌ ಗಾಂಧಿ ಅವರಿಗೆ ವಿವರಿಸಿದರು.

‘ಸಾಮಾನ್ಯ ಜೇನು, ತುಡುವೆ ಜೇನು ಹಾಗೂ ಕಡ್ಡಿ ಜೇನನ್ನು ರಾಹುಲ್ ಅವರಿಗೆ ಕೊಟ್ಟಾಗ, ಅವುಗಳ ವ್ಯತ್ಯಾಸ ಬಗ್ಗೆ ಕೇಳಿದರು. ಸಾಂಪ್ರದಾಯಿಕ ಗೊರುಕನ ನೃತ್ಯ ಪ್ರದರ್ಶಿಸಿದೆವು. ನೃತ್ಯ ಹಾಗೂ ಹಾಡನ್ನು ಮೆಚ್ಚಿದರು’ ಎಂದರು.  

‘‘ಕಾಡು ನಿಮ್ಮಿಂದಾಗಿ ಉಳಿದಿದೆ. ನಿಜವಾದ ನಾಗರಿಕರೆಂದರೆ ನೀವು. ನಿಮ್ಮಲ್ಲಿ ಸಾಕಷ್ಟು ಮೌಲ್ಯಗಳಿವೆ. ಹಾಗಾಗಿ, ಆದಿವಾಸಿಗಳು, ಹಿಂದುಳಿದಿರುವ ಬುಡಕಟ್ಟು ಜನಾಂಗದವರು ಎಂಬ ಪದಗಳನ್ನು ನೀವು ಬಳಸಬಾರದು. ಅದ್ಭುತವಾದ ನಿಮ್ಮ ಜೀವನದ ಜ್ಞಾನವನ್ನು ಕಾಪಾಡಿಕೊಳ್ಳಬೇಕು’ ಎಂದು ರಾಹುಲ್‌ ಗಾಂಧಿ ಸಲಹೆ ನೀಡಿದರು’ ಎಂದರು.  

ಕಷ್ಟ ತೋಡಿಕೊಂಡ ಸಂತ್ರಸ್ತರು: ಇನ್ನೊಂದು ಸಂವಾದದಲ್ಲಿ ಆಮ್ಲಜನಕ ದುರಂತದಲ್ಲಿ ಮೃತಪಟ್ಟ 24 ಮಂದಿಯ ಕುಟುಂಬದವರಿದ್ದರು.  

‘ಸರ್ಕಾರ, ಜಿಲ್ಲಾಡಳಿತ ಹಾಗೂ ವೈದ್ಯರ ನಿರ್ಲಕ್ಷದಿಂದಾಗಿ ದುರ್ಘಟನೆ ಸಂಭವಿಸಿದೆ. ನಮ್ಮದಲ್ಲದ ತಪ್ಪಿಗೆ ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡು, ಇಡೀ ಕುಟುಂಬವೇ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು’ ಎಂದು ಸಂಯೋಜಕರೊಬ್ಬರು ತಿಳಿಸಿದರು. 

‘ಘಟನೆಯಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಕೊಳ್ಳೇಗಾಲ ಮುಡಿಗುಂಡ ಏಳು ವರ್ಷದ ಬಾಲಕಿಯೊಬ್ಬಳು ಮಾತನಾಡಿ, ಶಿಕ್ಷಣ ಪಡೆಯಲು ತೀವ್ರ ತೊಂದರೆಯಾಗಿದೆ. ಮುಂದೆ ವೈದ್ಯಳಾಗಬೇಕೆಂಬ ಆಸೆ ಇದೆ. ತಾವು ಸಹಾಯ ಮಾಡಬೇಕು ಎಂದು ಮನವಿ ಮಾಡಿದಳು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಕಾಂಗ್ರೆಸ್‌ ಸರ್ಕಾರ ಬಂದರೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ, ಸರ್ಕಾರಿ ಉದ್ಯೋಗ ಸೇರಿದಂತೆ ಸಂತ್ರಸ್ತರ ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ಭರವಸೆಯನ್ನೂ ನೀಡಿದರು’ ಎಂದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಮುಖಂಡರಾದ ಜೈರಾಂ ರಮೇಶ್‌, ಮುನಿಯಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು