ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಕ್ಷೇತ್ರ: ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳ ಸಾಲು!

ಕುತೂಹಲದ ಕೇಂದ್ರವಾದ ಚಾಮರಾಜನಗರ; ಸಚಿವ ಸೋಮಣ್ಣ ಹೆಸರೂ ಪ್ರಸ್ತಾವ
Last Updated 17 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಕಾರಣಕ್ಕೆ ಚಾಮರಾಜನಗರ ವಿಧಾನಸಭಾ ಕ್ಷೇತ್ರವು ಇಡೀ ಜಿಲ್ಲೆಯಲ್ಲೇ ಕುತೂಹಲದ ಕೇಂದ್ರ ಬಿಂದುವಾಗಿದೆ.

ಹಾಲಿ ಶಾಸಕ ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಸ್ಪರ್ಧಿಸುವುದಕ್ಕಾಗಿ ಬಿಜೆಪಿಯಲ್ಲಿ ಟಿಕೆಟ್‌ ಬಯಸುತ್ತಿರುವವರ ಪಟ್ಟಿಗೆ ಹೊಸ ಹೆಸರುಗಳು ಸೇರ್ಪಡೆಯಾಗುತ್ತಿವೆ. ಆರಂಭದಲ್ಲಿ ಆರು ಆಕಾಂಕ್ಷಿಗಳಿದ್ದರು. ಈಗ 12 ಆಕಾಂಕ್ಷಿಗಳಿದ್ದರೆ. ಎರಡು ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಹೆಸರೂ ಕೇಳಿ ಬರುತ್ತಿದೆ!

ಏಳೆಂಟು ಆಕಾಂಕ್ಷಿಗಳು ಕ್ಷೇತ್ರದಾದ್ಯಂತ ಸುತ್ತಾಡುತ್ತಿದ್ದರೆ, ಉಳಿದವರು ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಕೆ ನೀಡುವುದಕ್ಕಷ್ಟೇ ಸೀಮಿತರಾಗಿದ್ದಾರೆ.

ಆಕಾಂಕ್ಷಿಗಳು ಹೆಚ್ಚುತ್ತಿರುವುದು ವರಿಷ್ಠರಿಗೆ ತಲೆ ನೋವು ತಂದಿದ್ದರೆ, ನಿಷ್ಠಾವಂತ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

‘ಆಕಾಂಕ್ಷಿಗಳು ಹೆಚ್ಚಿರುವುದರಿಂದಲೇ ಪ್ರತಿ ಬಾರಿಯೂ ಸೋಲುತ್ತಿದ್ದೇವೆ. ಈ ಬಾರಿ ಹಿಂದಿಗಿಂತಲೂ ದುಪ್ಪಟ್ಟು ಆಕಾಂಕ್ಷಿಗಳಿರುವುದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು’ ಎಂಬ ಆತಂಕ ಕಾರ್ಯಕರ್ತರನ್ನು ಕಾಡುತ್ತಿದೆ.

‘ಆಕಾಂಕ್ಷಿಗಳು ಹೆಚ್ಚಿದ್ದಷ್ಟೂ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದರ್ಥ’ ಎಂದು ಪಕ್ಷದ ಜಿಲ್ಲಾ ಹಾಗೂ ರಾಜ್ಯ ನಾಯಕರು ಹೇಳಿದರೂ ‘ಟಿಕೆಟ್ ಘೋಷಣೆಯ ಬಳಿಕ ಉಳಿದವರು ಅಭ್ಯರ್ಥಿ ಪರ ಕೆಲಸ ಮಾಡದಿದ್ದರೆ ಹಿನ್ನಡೆಯಾಗಲಿದೆ’ ಎಂಬ ಭಯವೂ ಕಾಡುತ್ತಿದೆ.

12 ಆಕಾಂಕ್ಷಿಗಳು: ಹಿಂದಿನ ಚುನಾವಣೆಯ ಪರಾಜಿತ ಅಭ್ಯರ್ಥಿ ಪ‍್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ನಿಜಗುಣರಾಜು, ಕೇಂದ್ರ ಬರ ಪರಿಹಾರ ಸಮಿತಿಯ ಅಧ್ಯಕ್ಷರಾಗಿದ್ದ ಎಂ.ರಾಮಚಂದ್ರ, ಮುಖಂಡ ಅಮ್ಮನಪುರ ಮಲ್ಲೇಶ್‌, ಇಎನ್‌ಟಿ ತಜ್ಞ ಎ.ಆರ್‌.ಬಾಬು ಮತ್ತು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಅವರ ಹೆಸರು ಆರಂಭದಲ್ಲಿ ಪ್ರಮುಖವಾಗಿ ಕೇಳಿಬರುತ್ತಿತ್ತು. ಆ ಬಳಿಕ, ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ.ರುದ್ರೇಶ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಅವರ ಹೆಸರೂ ಸೇರ್ಪಡೆಗೊಂಡಿತು.

ತಿಂಗಳಿನಿಂದೀಚೆಗೆ ಈ ಪ‍ಟ್ಟಿಗೆ ನಾಲ್ವರು ಸೇರ್ಪಡೆಯಾಗಿದ್ದಾರೆ. ಜ್ಯೋತಿ ರೇಚಣ್ಣ, ನಾಗು ರಮೇಶ್‌ ಮತ್ತು ರೂಪಾ ಶೇಖರ್‌ ಅವರು ತಾವೂ ಆಕಾಂಕ್ಷಿ ಎಂದು ಸುದ್ದಿಗೋಷ್ಠಿ ಮೂಲಕವೇ ಹೇಳಿದ್ದಾರೆ. ಎರಡು ದಿನಗಳ ಹಿಂದೆ ಮುಖಂಡ ಪ್ರಭುಸ್ವಾಮಿ ಅವರು ತಮಗೂ ಟಿಕೆಟ್‌ ಕೊಡಿಸಿ ಎಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಎಂ.ಶಿವಣ್ಣ (ಕೋಟೆ) ಅವರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಆಕಾಂಕ್ಷಿಗಳ ಸಂಖ್ಯೆ 12ಕ್ಕೆ ಏರಿದೆ.

‘2013, 2018ರ ಚುನಾವಣೆಯಲ್ಲಿ ಪಕ್ಷದಲ್ಲಿ ಪ್ರಬಲವಾಗಿ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದರು. ಈ ಬಾರಿ ಪ್ರಬಲ ಆಕಾಂಕ್ಷಿಗಳ ಸಂಖ್ಯೆಯೇ 8ಕ್ಕೇರಿದೆ. ‘ನಮ್ಮ ನಾಯಕರಿಗೆ ಟಿಕೆಟ್‌ ಕೊಡಬೇಕು’ ಎಂದು ಕೆಲವರ ಬೆಂಬಲಿಗರು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಇಷ್ಟೊಂದು ಆಕಾಂಕ್ಷಿಗಳನ್ನು ನಾವು ಇದುವರೆಗೆ ಕಂಡಿಲ್ಲ’ ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹೇಳುತ್ತಾರೆ.

ಮಹಿಳೆಯರಲ್ಲೂ ಪೈಪೋಟಿ: ಇತ್ತೀಚಿನವರೆಗೂ ನಾಗಶ್ರೀ ಪ್ರತಾಪ್‌ ಒಬ್ಬರೇ ಆಕಾಂಕ್ಷಿಯಾಗಿದ್ದರು. ಅವರಿಗೆ ಪೈಪೋಟಿ ನೀಡಲು ಈಗ ಮೂವರು ಸೇರ್ಪಡೆಯಾಗಿದ್ದಾರೆ.

ಪಕ್ಷದ ಮುಖಂಡರು ಅಥವಾ ಆಕಾಂಕ್ಷಿಗಳಲ್ಲೇ ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ಬೆಂಬಲಿಗರ ಮೂಲಕ ತಾವೂ ಆಕಾಂಕ್ಷಿ ಎಂದು ಹೇಳಿಸುತ್ತಿದ್ದಾರೆ ಎಂಬ ಅನುಮಾನವೂ ಪಕ್ಷದ ಕಾರ್ಯಕರ್ತರಲ್ಲಿದೆ.

ಸೋಮಣ್ಣ ಹೆಸರೂ ಚಾಲ್ತಿಯಲ್ಲಿ

ಸಚಿವ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಾಗ, ‘ಮುಂದಿನ ಚುನಾವಣೆಯಲ್ಲಿ ಅವರು ಚಾಮರಾಜನಗರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ’ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆ ಪೂರಕವಾಗಿ ನಗರದಲ್ಲಿ ಅವರು ಬಾಡಿಗೆ ಮನೆಯನ್ನೂ ಮಾಡಿದ್ದರು.

ಆದರೆ, ‘ಇಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಹೇಳುತ್ತಿದ್ದ ಅವರು, ಕೆಲವು ತಿಂಗಳ ಹಿಂದೆ ಮನೆಯನ್ನೂ ಖಾಲಿ ಮಾಡಿದ್ದರು.

ಈಗ, ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿ ಬಂದ ಬಳಿಕ, ಅವರ ಹೆಸರು ಮತ್ತೆ ಕೇಳಿಬರುತ್ತಿದೆ. ‘ಚಾಮರಾಜನಗರ ಸೇರಿದಂತೆ ಹಳೆ ಮೈಸೂರು ಭಾಗಕ್ಕೆ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಅವರಿಗೆ ನೀಡಲು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ವರಿಷ್ಠರು ಒಪ್ಪಿದ್ದಾರೆ’ ಎನ್ನಲಾಗಿದೆ.

ಮೂವರ ಹೆಸರು ಅಂತಿಮ?

‘ಎಷ್ಟೇ ಆಕಾಂಕ್ಷಿಗಳಿದ್ದರೂ, ಪಕ್ಷದ ಜಿಲ್ಲಾ ಕೋರ್‌ ಕಮಿಟಿಯು ಸಭೆ ಸೇರಿ ಜನ ಬೆಂಬಲ ಮತ್ತು ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಐವರು ಇಲ್ಲವೇ ಮೂವರ ಹೆಸರುಗಳನ್ನು ಅಂತಿಮಗೊಳಿಸಿ, ರಾಜ್ಯದ ಸಮಿತಿಗೆ ಶಿಫಾರಸು ಮಾಡಲಿದೆ. ಅವರು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT