ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿ; ಬಿಜೆಪಿ ದೂರು

ಸೋಲಿನ ಭೀತಿಯಿಂದ ಅಪ್ಪ ಮಗನಿಂದ ಅಪಪ್ರಚಾರ: ಬಾಲರಾಜು ಆರೋಪ
Published 19 ಏಪ್ರಿಲ್ 2024, 7:19 IST
Last Updated 19 ಏಪ್ರಿಲ್ 2024, 7:19 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ: ‘ದೇಶ ಪ್ರೇಮಿ ಆರ್‌ಎಸ್‌ಎಸ್‌ನಿಂದ ಮಾತ್ರವೇ ಸಂವಿಧಾನ ಬದಲಾವಣೆ ಸಾಧ್ಯ’ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜು ಅವರು ಪ್ರಚಾರ ಸಭೆಯೊಂದರಲ್ಲಿ ಹೇಳಿದ್ದಾರೆ’ ಎಂದು ಉಲ್ಲೇಖಿಸಿದ ನಕಲಿ ಪತ್ರಿಕಾ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಪರ ವಿರೋಧ ಚರ್ಚೆಯೂ ನಡೆಯುತ್ತಿದ್ದು, ‘ನಕಲಿ ಸುದ್ದಿ ಹರಡಿದವರ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಸ್ವತಃ ಬಾಲರಾಜು ಕೊಳ್ಳೇಗಾಲ ಪಟ್ಟಣ ಠಾಣೆಗೆ ಗುರುವಾರ ದೂರು ನೀಡಿದ್ದಾರೆ. ಬಿಜೆಪಿ ಕೂಡ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ ದೂರು ನೀಡಿದೆ. 

ಇದರ ನಡುವೆಯೇ, ‘ಇಂತಹ ಹೇಳಿಕೆ ನೀಡಿರುವ ಬಾಲರಾಜು ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಪ್ರತಿನಿಧಿಗಳು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

ನಂತರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ‘ನಮ್ಮ ಹಾಗೂ ನಮ್ಮ ಪಕ್ಷದ ವಿರುದ್ಧ ಕಾಂಗ್ರೆಸ್‌ನವರು ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ. ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಯೂ ಕೆಲವು ಕಿಡಿಗೇಡಿಗಳನ್ನು ಛೂ ಬಿಟ್ಟಿದ್ದಾರೆ’ ಎಂದು ಆರೋಪಿಸಿದರು. 

‘ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ಕಾನೂನು ಘಟಕದಿಂದ ದೂರು ನೀಡಲಾಗಿದೆ. ಪೊಲೀಸರಿಗೂ ದೂರು ನೀಡಿದ್ದೇವೆ. ನ್ಯಾಯಯುತವಾಗಿ ಹೋರಾಡುತ್ತೇವೆ. ಬೆನ್ನಿಗೆ ಚೂರಿ ಹಾಕುವುದಿಲ್ಲ. ಅಪ್ಪ ಮಕ್ಕಳು ಸೋಲಿನ ಭೀತಿಯಿಂದ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

ನಗರಸಭೆ ಸದಸ್ಯ ರಾಮಕೃಷ್ಣ, ಪ್ರಕಾಶ್, ನಾಶೀರ್ ಷರೀಫ್‌, ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿದ್ದಪ್ಪಾಜಿ, ಬೂದಿತಿಟ್ಟು ಶಿವಕುಮಾರ್, ಜಗದೀಶ್ ಶಂಕನಪುರ ಇದ್ದರು.

ಡಿಸಿಗೆ ದೂರು: ‘ಬಾಲರಾಜು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಬಿಜೆಪಿ ಘಟಕವು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಅವರಿಗೆ ದೂರು ಸಲ್ಲಿಸಿತು. 

‘ಅವಹೇಳನಕಾರಿಯಾಗಿ ಪೇಸ್ ಬುಕ್ ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್ ಮಾಡಿ ಶೇರ್ ಮಾಡಿರುವ ಅಂಬೇಡ್ಕರ್ ದಲಿತ ಸೇನೆ ರಾಜ್ಯಾಧ್ಯಕ್ಷ ಕೇಶವಮೂರ್ತಿ, ಮಹದೇವ ಬುದ್ಧ ಹಾಗೂ ರಾಜೇಂದ್ರ ಸಿದ್ದಾರ್ಥ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಫೇಸ್‌ಬುಕ್‌ನಲ್ಲಿ ದಲಿತ ಹಿತರಕ್ಷಣಾ ಸಮಿತಿ ಹೆಸರಿನಲ್ಲಿ ಖಾತೆ ಆರಂಭಿಸಿ, ಹಲವು ಸದಸ್ಯರನ್ನು ಸೇರಿಸಲಾಗಿದೆ. ಸುಳ್ಳು ಸುದ್ದಿಯನ್ನು ಅಲ್ಲಿಂದಲೇ ಹಂಚಿಕೊಂಡಿದ್ದಾರೆ’ ಎಂದು ದೂರಲಾಗಿದೆ. 

ವಕೀಲರಾದ ಹರವೆ ಮಂಜು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಕಾರ್ಯದರ್ಶಿ ನಟರಾಜು, ನಗರ ಮಂಡಲ ಅಧ್ಯಕ್ಷ ಶಿವರಾಜ್, ಎಸ್ ಸಿ ಮೋರ್ಚಾದ ಗ್ರಾಮಾಂತರ ಮಂಡಲ ಆಧ್ಯಕ್ಷ ಮುಕುಂದ ಮೂರ್ತಿ, ಮಾಧ್ಯಮ ಸಹ ಪ್ರಮುಖ ಅಶ್ವಿನ್ ಹಾಜರಿದ್ದರು.

ಆರ್‌ಎಸ್‌ಎಸ್‌ನಿಂದ ಮಾತ್ರ ಸಂವಿಧಾನ ಬದಲಾವಣೆ ಮಾಡಲು ಸಾಧ್ಯ ಎಂದು ಹೇಳಿಕೆ ನೀಡಿರುವ ಎಸ್‌.ಬಾಲರಾಜು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪ‌ದಾಧಿಕಾರಿಗಳು ಚುನಾವಣಾ ತಹಶೀಲ್ದಾರ್‌ ಕೀರ್ತನಾ ಅವರಿಗೆ ದೂರು ಸಲ್ಲಿಸಿದರು
ಆರ್‌ಎಸ್‌ಎಸ್‌ನಿಂದ ಮಾತ್ರ ಸಂವಿಧಾನ ಬದಲಾವಣೆ ಮಾಡಲು ಸಾಧ್ಯ ಎಂದು ಹೇಳಿಕೆ ನೀಡಿರುವ ಎಸ್‌.ಬಾಲರಾಜು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪ‌ದಾಧಿಕಾರಿಗಳು ಚುನಾವಣಾ ತಹಶೀಲ್ದಾರ್‌ ಕೀರ್ತನಾ ಅವರಿಗೆ ದೂರು ಸಲ್ಲಿಸಿದರು

ಬಾಲರಾಜು ವಿರುದ್ದ ದೂರು

ಚಾಮರಾಜನಗರ: ‘ಸಂವಿಧಾನ ಬದಲಾಯಿಸಲು ಆರ್.ಎಸ್.ಎಸ್‌ನಿಂದ ಮಾತ್ರ ಸಾಧ್ಯ ಎಂದು ಹೇಳಿಕೆ ನೀಡಿರುವ ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜು ಅವರನ್ನು ದೇಶ ದ್ರೋಹ ಕಾಯ್ದೆಯಡಿ ಬಂಧಿಸಿ ಚುನಾವಣಾ ಕಣದಿಂದ ವಜಾಗೊಳಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಚುನಾವಣಾ ತಹಶೀಲ್ದಾರ್‌ ಕೀರ್ತನಾ ಅವರಿಗೆ ದೂರು ಸಲ್ಲಿಸಿದರು.  ‘ನಗರದಲ್ಲಿ ಪ್ರಚಾರ ನಡೆಸುವಾಗ ಅಭ್ಯರ್ಥಿಯು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಮೇಲ್ವರ್ಗದ ಅನುಕಂಪ ಪಡೆಯಲು ಇಂತಹ ಹೇಳಿಕೆ ನೀಡಿದ್ದಾರೆ. ಸಂವಿಧಾನವನ್ನು ಅಧ್ಯಯನ ಮಾಡದೆ ಮನುಧರ್ಮ ಶಾಸ್ತ್ರ ಅಧ್ಯಯನ ಮಾಡಿದ್ದಾರೆ’ ಎಂದು ದೂರಿದರು. ಒಕ್ಕೂಟದ ಕೆ.ಎಂ.ನಾಗರಾಜು ಸಿ.ಎಂ.ಶಿವಣ್ಣ ಆಲೂರು ನಾಗೇಂದ್ರ ಪಿ.ಸಂಘಸೇನಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT