ಮಂಗಳವಾರ, ಮಾರ್ಚ್ 21, 2023
29 °C
ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜಯ– ಡಿಕೆಶಿ ವಿಶ್ವಾಸ

ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಬಿಜೆಪಿ ಸುಳ್ಳಿನ ಕಾರ್ಖಾನೆ. ಅದರ ಮುಖಂಡರು ಬರೀ ಸುಳ್ಳೇ ಹೇಳುತ್ತಿದ್ದಾರೆ. ಸುಳ್ಳನ್ನು ತಯಾರು ಮಾಡುವುದೇ ಅವರ ಕೆಲಸ. ಬಿಜೆಪಿಯದ್ದು ಭ್ರಷ್ಟ ಮತ್ತು ಹೇಡಿ ಸರ್ಕಾರ’ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ವಾಗ್ದಾಳಿ ನಡೆಸಿದರು. 

ನಗರದಲ್ಲಿ ನಡೆದ ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್‌ ಯಾತ್ರೆ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಒಂಬತ್ತು ವರ್ಷಗಳಲ್ಲಿ 23 ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿರುವ ಇವರು ಯಾರಿಗೆ ಉದ್ಯೋಗ ಕೊಟ್ಟಿದ್ದಾರೆ? ಉದ್ಯೋಗ ಕೊಡಿ ಎಂದು ಕೇಳಿದರೆ, ‘ಪಕೋಡ ಮಾರಿ’ ಎಂದು ಹೇಳುತ್ತಾರೆ’ ಎಂದು ವ್ಯಂಗ್ಯವಾಡಿದರು.

‘2022ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ಆದಾಯ ದುಪ್ಪಟ್ಟು ಆಯಿತೇ? ರಸಗೊಬ್ಬರ, ಅಡುಗೆ ಅನಿಲ, ಅಗತ್ಯವಸ್ತುಗಳ ಬೆಲೆ ಹೆಚ್ಚಾಯಿತೇ ವಿನಾ ಬೇರೇನೂ ಆಗಿಲ್ಲ. ಅಚ್ಚೇ ದಿನ ಬರುತ್ತದೆ ಎಂದರು. ಅಂಬಾನಿ, ಅದಾನಿ, ಬಿಜೆಪಿ ಮುಖಂಡರು, ಸಚಿವರಿಗೆ ಒಳ್ಳೆಯ ದಿನಗಳು ಬಂದವೇ ವಿನಾ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಕಾರ್ಮಿಕರು, ನಿರುದ್ಯೋಗಿಗಳಿಗೆ ಬರಲಿಲ್ಲ. ಮೋದಿ ಅವರ ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ನಲ್ಲೂ ಇವರಾರು ಇಲ್ಲ’ ಎಂದು ಟೀಕಿಸಿದರು. 

‘ಈಗ ಮೋದಿ ರಾಜ್ಯಕ್ಕೆ ವಾರಕ್ಕೊಮ್ಮೆ ಬರುತ್ತಿದ್ದಾರೆ. ಇಲ್ಲಿಗೂ ಬರಬಹುದು. ‘ನಾನೂ ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನುವುದಕ್ಕೆ ಬಿಡುವುದಿಲ್ಲ’ ಎಂದು ಅವರು ಹೇಳಿದ್ದರು. ಆದರೆ, ರಾಜ್ಯದ ಇತಿಹಾಸದಲ್ಲೇ ಬಿಜೆಪಿಯಷ್ಟು ಭ್ರಷ್ಟಾಚಾರ ಮಾಡಿದವರು ಯಾರೂ ಇಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೇ 40ರಷ್ಟು ಕಮಿಷನ್‌ ಆರೋಪ ಮಾಡಿ ಪತ್ರ ಬರೆದರೆ, ಮೋದಿಯವರು ಕ್ರಮ ಕೈಗೊಂಡರಾ? ಪ್ರಧಾನಿಯವರೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದು ಇದರ ಅರ್ಥ’ ಎಂದರು. 

‘ಬಸವರಾಜಬೊಮ್ಮಾಯಿ ಸರ್ಕಾರದ ವಿರುದ್ಧ ‘ಪಾಪದ ಪುರಾಣ’ ಎಂಬ ಆರೋಪ ಪಟ್ಟಿ ಸಿದ್ಧಪಡಿಸಿದ್ದೇವೆ. ನಾವು ಆರೋಪ ಮಾಡಿದ ನಂತರ ಹಿಂದೆ ಇದ್ದ ನಮ್ಮ ಸರ್ಕಾರದ ಮೇಲೆ ದೂರುತ್ತಿದ್ದಾರೆ. ಐದು ವರ್ಷ ವಿರೋಧ ಪಕ್ಷದಲ್ಲಿದ್ದಾಗ, ಈಗ ಮೂರೂವರೆ ವರ್ಷ ಅಧಿಕಾರದಲ್ಲಿದ್ದಾಗ ಏನೂ ಕ್ರಮ ಕೈಗೊಳ್ಳದ ಇವರು ಈಗ ಮಾತನಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತು, ದಮ್‌ ಇದ್ದರೆ, ಅವರ ಸರ್ಕಾರದ ಮೇಲೆ ಇರುವ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಬ್ಬರಿಂದ ತನಿಖೆ ನಡೆಸಲಿ ಎಂದು ನಾನು ಸವಾಲು ಹಾಕಿದ್ದೆ. ಅದಕ್ಕೆ ಪ್ರತಿಕ್ರಿಯಿಸಲು ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಬಿಟ್ಟಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದರು. 

‘ಸುಧಾಕರ್‌ ಸುಳ್ಳಿನ ಸಾಮ್ರಾಟ. ಹಿಂದೆ ನಮ್ಮಲ್ಲೇ ಇದ್ದ ಗಿರಾಕಿ. ತನ್ನನ್ನೇ ಮಾರಿಕೊಂಡು ಅಲ್ಲಿಗೆ ಹೋಗಿದ್ದಾರೆ. ಇಲ್ಲಿ (ಚಾಮರಾಜನಗರ) ಕೋವಿಡ್‌ ಸಮಯದಲ್ಲಿ ಆಮ್ಲಜನಕ ಕೊರತೆಯಿಂದ 36 ಜನರು ಮೃತಪಟ್ಟಿದ್ದರೆ, ಇವರು ಬರೀ ಮೂರೇ ಜನರು ಸತ್ತಿದ್ದರು ಎಂದು ಸುಳ್ಳು ಹೇಳಿದ್ದರು. ಜನರ ಹೆಣದ ಮೇಲೆ ರಾಜಕೀಯ ಮಾಡಲು ಹೊರಟವರು. ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡದ ಇವರಿಗೆ ಮನುಷತ್ವ ಇದೆಯೇ’ ಎಂದು ಪ್ರಶ್ನಿಸಿದರು. 

‘ಕಾಂಗ್ರೆಸ್‌ ಸಂವಿಧಾನದ ಮೇಲೆ ವಿಶ್ವಾಸ ಇಟ್ಟುಕೊಂಡಿರುವ ಪಕ್ಷ. ಎಲ್ಲರಿಗೂ ಸಮಾನ ಹಕ್ಕು, ಸಮ ಸಮಾಜ ನಿರ್ಮಾಣವಾಗಬೇಕು ಎಂಬುದು ನಮ್ಮ ಕನಸು. ಆದರೆ ಸಮಾನ ಅವಕಾಶ ಕೊಡುವುದಕ್ಕೆ ಬಿಜೆಪಿ ವಿರೋಧಿ. ಅಸಮಾನತೆ ಇನ್ನೂ ಇರಬೇಕು ಎಂದು ಇಚ್ಛೆ ಪಡುವ ಪಕ್ಷ ಅದು. ಸಣ್ಣ ಪುಟ್ಟ ವಸ್ತುಗಳ ಮೇಲೆಯೂ ಜಿಎಸ್‌ಟಿ ಹಾಕಿ ಜನರ ರಕ್ತಹೀರುವ ಈ ಪಕ್ಷ ಅಧಿಕಾರದಲ್ಲಿ ಇರಬೇಕೇ? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಅನ್ನು ಬೆಂಬಲಿಸದೆ ಕಾಂಗ್ರೆಸ್‌ಗೆ ಮತ ಹಾಕಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. 

ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಕಳೆದ ವರ್ಷ ಬಸವರಾಜ ಬೊಮ್ಮಾಯಿ ಅವರು ಸುಳ್ಳಿನ ಬಜೆಟ್‌ ಮಂಡಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತುಕೊಂಡು ಅದಕ್ಕೆ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದರು. 

‘ಬಿಜೆಪಿ ಯಾವಾಗಲೂ ‘ಹಿಂದೂಗಳು ಮುಂದು’ ಎಂಬುದರ ಮೇಲೆ ನಂಬಿಕೆ ಇಟ್ಟರೆ,  ಕಾಂಗ್ರೆಸ್‌ ‘ನಾವೆಲ್ಲರೂ ಒಂದು’ ಎಂಬ ತತ್ವದಲ್ಲಿ ನಂಬಿಕೆ ಇಟ್ಟು ಕೆಲಸಮಾಡುತ್ತಿದೆ. ಮುಂಬರುವ ಚುನಾವಣೆ ಸುಳ್ಳು ಹಾಗೂ ಸತ್ಯದ ನಡುವಿನ ಚುನಾವಣೆ. ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಜೆಡಿಎಸ್‌ ಕಿಂಗ್‌ ಮೇಕರ್‌ ಆಗುವ ಆಸೆ ಹೊಂದಿದೆ. ಜನರು ಅದಕ್ಕೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದರು. 

ಕುಟುಂಬದವರಿಗೆ ಕೆಲಸ: ‘ಕೋವಿಡ್‌ ಸಮಯದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ 36 ಮಂದಿಯ ಕುಟುಂಬಕ್ಕೆ ಪರಿಹಾರ ನೀಡುವ, ಸಾಂತ್ವನ ಹೇಳುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಕಾಂಗ್ರೆಸ್‌ ಅದನ್ನು ಮಾಡಿದೆ. ಮುಂಬರುವ ಚುನಾವಣೆಯಲ್ಲಿ ನಾವು ಗೆದ್ದರೆ 36 ಮಂದಿಯ ಕುಟುಂಬದ ಸದಸ್ಯರಿಗೆ ಸಿಮ್ಸ್‌ ಆಸ್ಪತ್ರೆಯಲ್ಲಿ ಕೆಲಸ ನೀಡುತ್ತೇವೆ’ ಎಂದು ಶಿವಕುಮಾರ್‌ ಭರವಸೆ ನೀಡಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು