ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರ್ನಾಮ: ನಳಿನ್‌ಕುಮಾರ್‌ ಕಟೀಲ್‌

ಬಿಜೆಪಿ ಜನಸೇವಕ್‌ ಸಮಾವೇಶ: ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದವರಿಗೆ ಪುಷ್ಪಾರ್ಚನೆ ಮಾಡಿ ಅಭಿನಂದನೆ
Last Updated 11 ಜನವರಿ 2021, 14:27 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆ ಹಾಗೂ ರಾಜ್ಯದಲ್ಲಿ ಬಿಜೆಪಿ ಪ್ರಕಾಶಮಾನವಾಗಿ ಬೆಳೆಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ನಿರ್ನಾಮವಾಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಸೋಮವಾರ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಪಕ್ಷ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿಸುವುದಕ್ಕಾಗಿ ಹಮ್ಮಿಕೊಂಡಿದ್ದ ಜನ ಸೇವಕ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾನು ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ಇಡೀ ರಾಜ್ಯದಲ್ಲಿ ಪಕ್ಷದ ಚಿತ್ರಣ ನೋಡಿದಾಗ ಚಾಮರಾಜನಗರದಲ್ಲಿ ಪಕ್ಷ ಹಿಂದೆ ಉಳಿದಿತ್ತು. ಇಲ್ಲಿ ಪಕ್ಷವನ್ನು ಬಲ ಪಡಿಸಲು ಸಾಧ್ಯವೇ ಎಂಬ ಯೋಚನೆ ಇತ್ತು. ಆದರೆ, ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಕಾರ್ಯಕರ್ತರನ್ನು ನೋಡಿದಾಗ ಸಂತೋಷವಾಗುತ್ತಿದೆ. ಜಿಲ್ಲೆಯಲ್ಲೂ ಪಕ್ಷ ಪ್ರಬಲವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ’ ಎಂದು ಹೇಳಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್‌ ಈಗ ತಿಥಿಯ ಪಕ್ಷವಾಗಿದೆ. ನೆಹರೂ ತಿಥಿ, ಗಾಂಧಿ ತಿಥಿ ಸೇರಿದಂತೆ ವರ್ಷದಲ್ಲಿ ಐದು ತಿಥಿಗಳನ್ನು ಬಿಟ್ಟು ಬೇರೇನೂ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಮೂರು ಶಾಪ:‘ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಕಾಂಗ್ರೆಸ್‌ ಅನುಷ್ಠಾನಗೊಳಿಸಲಿಲ್ಲ. ಶ್ರೇಷ್ಠ ಸಂವಿಧಾನವನ್ನು ನೀಡಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೊ ಬಳಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದದವರ ಮತಗಳನ್ನು ಪಡೆದಿರುವ ಕಾಂಗ್ರೆಸ್, ಈ ಹಿಂದೆ‌ ಅಂಬೇಡ್ಕರ್‌ ಅವರನ್ನು ಎರಡೆರಡು ಬಾರಿ ಸೋಲಿಸಿತ್ತು. ಈ ಇಬ್ಬರ ಶಾಪವೂ ಕಾಂಗ್ರೆಸ್‌ ಮೇಲಿದೆ’ ಎಂದು ನಳಿನ್‌ ಕುಮಾರ್ ಕಟೀಲ್‌ ಹೇಳಿದರು.

‘ಗೋಮಾತೆಯನ್ನು ಈ ದೇಶದಲ್ಲಿ ಎಲ್ಲರೂ ಪೂಜೆ ಮಾಡುತ್ತಾರೆ. ಅಂತಹದ್ದರಲ್ಲಿ ಕಾಂಗ್ರೆಸ್‌, ಗೋ ಹತ್ಯೆ ಮಾಡುವವರ ಪರವಾಗಿ ಮಾತನಾಡುತ್ತದೆ. ಹೀಗಾಗಿ ಗೋವಿನ ಶಾಪವೂ ಕಾಂಗ್ರೆಸ್‌ಗೆ ತಟ್ಟಿದೆ’ ಎಂದು ಟೀಕಿಸಿದರು.

ಹಳ್ಳಿಯಿಂದ ಡೆಲ್ಲಿವರೆಗೆ: ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ಮಾತನಾಡಿ, ‘ಪಕ್ಷವು ಇದುವರೆಗೆ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೇ ಮೊದಲ ಬಾರಿಗೆ ತಳಮಟ್ಟದಲ್ಲೂ ಪಕ್ಷವನ್ನು ಸಂಘಟಿಸಲಾಗಿತ್ತು. ರಾಜ್ಯದಾದ್ಯಂತ 3,300 ಪಂಚಾಯಿತಿಗಳಲ್ಲಿ ಪಕ್ಷದ ಬೆಂಬಲಿತರು‌ ಅಧಿಕಾರ ಪಡೆದಿದ್ದಾರೆ. 45 ಸಾವಿರಕ್ಕೂ ಹೆಚ್ಚು ಮಂದಿ ಗೆದ್ದಿದ್ದಾರೆ. ಪಕ್ಷವು ಈಗ ಹಳ್ಳಿಯಿಂದ ಡೆಲ್ಲಿಯವರೆಗೆ ಅಧಿಕಾರದಲ್ಲಿದೆ’ ಎಂದರು.

ಸುಳ್ಳು ಹೇಳುವುದನ್ನು ಬಿಡಿ: ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಮಾತನಾಡಿ,‘ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸಿದ್ದು ಬಿಜೆಪಿಯವರಲ್ಲ, ನಾವು’ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ಇಲ್ಲಿನ ರೈತರ ಕಷ್ಟವನ್ನು ಅರಿತು 2008ರಲ್ಲಿ ಜಿಲ್ಲೆಯಲ್ಲಿ ಒಬ್ಬರು ಶಾಸಕರು ಇಲ್ಲದಿದ್ದರೂ ₹212 ಕೋಟಿ ವೆಚ್ಚದ ಕೆರೆ ತುಂಬಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತಂದವರು ಬಿ.ಎಸ್‌.ಯಡಿಯೂರಪ್ಪ ಅವರು. ಕಾಂಗ್ರೆಸ್‌ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಎಲ್ಲ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳಿಗೆ ನಾವು ಈಗ ನೀರು ಹರಿಸಿದ್ದೇವೆ. ಕೆರೆ ತುಂಬಿಸುವ ವಿಚಾರದಲ್ಲಿ ಕಾಂಗ್ರಸ್‌ನವರು ಸುಳ್ಳು ಹೇಳುವುದನ್ನು ಬಿಡಿ’ ಎಂದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‌ ನಾರಾಯಣ, ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಘಟಕ ಉಪಾಧ್ಯಕ್ಷರಾದ ರಾಜೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್‌, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ ಸೇರಿದಂತೆ ಹಲವು ಮುಖಂಡರು ಇದ್ದರು.

ಗುಂಡ್ಲುಪೇಟೆಯಿಂದ ಹನೂರುವರೆಗೆ ಅರಳಿದ ಕಮಲ

ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಮಾತನಾಡಿ, ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ 1,150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇದರಿಂದ ನಮ್ಮ ಉತ್ಸಾಹ ಇಮ್ಮಡಿ ಗೊಳಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಬೇಕು ಎಂಬ ಕನಸು ಇತ್ತು. ಅದೀಗ ನನಸಾಗಿದೆ. ಗುಂಡ್ಲುಪೇಟೆಯಿಂದ ಹನೂರುವರೆಗೆ ಎಲ್ಲ ಕಡೆಯೂ ಕಮಲ ಅರಳಿದೆ’ ಎಂದರು.

‘ಹಳ್ಳಿಗಳ ಅಭಿವೃದ್ಧಿಯ ಕನಸು ಕಂಡಿದ್ದ ನಜೀರ್‌ ಸಾಬ್‌ ಅವರನ್ನು ನಾವು ನೆನಪು ಮಾಡಿಕೊಳ್ಳಬೇಕು. ದೇಶದಲ್ಲೇ ಮೊದಲಾಗಿ, ಅಧಿಕಾರ ವಿಕೇಂದ್ರೀಕರಣ, ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಯೋಚಿಸಿದ ಅವರು ಅದನ್ನು ರಾಜ್ಯದಲ್ಲಿ ಜಾರಿಗೆ ತಂದರು. ಅವರ ಕನಸನ್ನು ಈಡೇರಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಸುರೇಶ್‌ ಕುಮಾರ್‌ ಅವರು ಹೇಳಿದರು.

ಜನ ಕೈಬಿಡಲಿಲ್ಲ: ಶ್ರೀನಿವಾಸ ಪ್ರಸಾದ್‌

ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಮಾತನಾಡಿ, ‘ರಾಜ್ಯದಾದ್ಯಂತ ಬಿಜೆಪಿ ಅಭೂತಪೂರ್ವಯಶಸ್ಸು ಗಳಿಸಿದೆ. ಜಿಲ್ಲೆಯಲ್ಲೂ ಉತ್ತಮ ಸಾಧನೆ ಮಾಡಿದ್ದೇವೆ. ನಿರಾಸೆ ಪಡಬೇಕಾಗಿಲ್ಲ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿಬೇಕು’ ಎಂದರು.

ಲೋಕಸಭಾ ಚುನಾವಣೆಯನ್ನು ಪ್ರಸ್ತಾಪಿಸಿದ ಅವರು, ‘ನಾನು ಸ್ಪರ್ಧಿಸುವುದಿಲ್ಲ ಎಂದಿದ್ದೆ. ಒತ್ತಾಯದ ಮೇರೆಗೆ ಸ್ಪರ್ಧಿಸಿದೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ನಮ್ಮಿಂದ 3.60 ಲಕ್ಷ ಹೆಚ್ಚು ಮತಗಳನ್ನು ಪಡೆದಿದ್ದರು. ಹಾಗಾಗಿ, ಗೆಲ್ಲುವ ಪರಿಸ್ಥಿತಿ ಇರಲಿಲ್ಲ. ಸ್ವಲ್ಪ ಭಯ ಇತ್ತು. ಆತ್ಮವಿಶ್ವಾಸದಿಂದ ಮುನ್ನುಗ್ಗಿದೆ. ಜನರು ಕೈಬಿಡಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT