ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಬಿಎಸ್‌ವೈ ಮೇಲೆ ಪ್ರೀತಿ: ಬಿಜೆಪಿ ಮುಖಂಡ ಮಲ್ಲೇಶ್‌ ವ್ಯಂಗ್ಯ

Last Updated 11 ಅಕ್ಟೋಬರ್ 2021, 2:00 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿ, ಮೂಲತಃ ಬಿಎಂಟಿಸಿ ನೌಕರ ಉಮೇಶ್‌ ಅವರ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡರು ರಾಜಕೀಯ ಲಾಭಕ್ಕಾಗಿ ಇದು ಯಡಿಯೂರಪ್ಪ ಹಾಗೂ ಲಿಂಗಾಯತ ಸಮುದಾಯದ ಮೇಲಿನ ಮೇಲಿನ ದಾಳಿ ಎಂದು ಬಿಂಬಿಸಲು ಪಿತೂರಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ಅವರು ಟೀಕಿಸಿದ್ದಾರೆ.‌

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ20 ಪರ್ಸೆಂಟ್‌ ಕಮಿಷನ್ ತೆಗೆದುಕೊಳ್ಳುವ ಮುಖ್ಯಮಂತ್ರಿ, ಕಡು ಭ್ರಷ್ಟ, ಜೈಲಿಗೆ ಹೋಗಿ ಬಂದವರು... ಎಂದೆಲ್ಲ ಕಠೋರವಾಗಿ ಟೀಕಿಸುತ್ತಿದ್ದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರಿಗೆ ಈಗ ಅವರ ಮೇಲೆ ದಿಢೀರ್‌ ಆಗಿ ಪ್ರೀತಿ ಬಂದಿರುವುದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಉಮೇಶ್ ಈಡಿಗ ಸಮಾಜಕ್ಕೆ ಸೇರಿದವರು. ಬಿಎಂಟಿಸಿಯಲ್ಲಿ ನೌಕರರಾಗಿದ್ದವರು. ಹಿಂದೆ ಯಡಿಯೂರಪ್ಪ ಅವರ ಅಪ್ತ ಸಹಾಯಕರಾಗಿದ್ದರು. ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಮಾಹಿತಿ ಆಧರಿಸಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಲೆಕ್ಕಚಾರದಲ್ಲಿ ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ಅವರಿಗೆ ಅವಮಾನವಾಗಿದೆ, ಲಿಂಗಾಯತ ಸಮಾಜಕ್ಕೆ ಅವಮಾನವಾಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

‘ಈ ಹಿಂದೆ ಡಿ.ಕೆ.ಶಿವಕುಮಾರ್‌ ಮನೆ ಮೇಲೆ ದಾಳಿ ನಡೆದಾಗ ಕೇಂದ್ರ ಸರ್ಕಾರವು ಒಕ್ಕಲಿಗರ ವಿರೋಧಿ ಎಂದೂ, ಜಮೀರ್ ಮನೆ ಮೇಲೆ ದಾಳಿಯಾದಾಗ ಮುಸ್ಲಿಂ ವಿರೋಧಿ ಎಂದೂ, ಈಗ ಲಿಂಗಾಯತ ವಿರೋಧಿ ಎಂದು ಬಣ್ಣ ಕಟ್ಟುತ್ತಿರುವ ಕಾಂಗ್ರೆಸಿಗರ ಗೋಸುಂಬೆ ಬಣ್ಣ ಜನರಿಗೆ ಚೆನ್ನಾಗಿ ತಿಳಿದಿದೆ’ ಎಂದು ವ್ಯಂಗ್ಯವಾಡಿದರು.

‘ಉಮೇಶ್‌ ಮನೆ ಮೇಲಿನ ದಾಳಿಗೂ, ಲಿಂಗಾಯತ ಸಮಾಜಕ್ಕೂ ಸಂಬಂಧವಿಲ್ಲ. ಐಟಿ ಅಧಿಕಾರಿಗಳು ಯಾವುದೇ ಜನಾಂಗದ, ಜಾತಿಯ ಭ್ರಷ್ಟರ ಮನೆಗಳ ಮೇಲೆ ದಾಳಿ ಮಾಡಿದರೂ ಲಿಂಗಾಯತ ಸಮಾಜ ಸ್ವಾಗತಿಸುತ್ತದೆ. ಈ ದೇಶಕ್ಕೆ ಭ್ರಷ್ಟಾಚಾರಿಗಳೇ ಮೊದಲ ಶತ್ರು. ಅವರು ಯಾವುದೇ ಜಾತಿ, ಮತ ಪಂಥಕ್ಕೆ ಸೇರಿದ್ದರೂ, ಅವರನ್ನು ಜೈಲಿಗೆ ಕಳುಹಿಸಿದರೆ ನಾವು ಸ್ವಾಗತಿಸುತ್ತೇವೆ’ ಎಂದು ಮಲ್ಲೇಶ್‌ ಹೇಳಿದರು.

ಮುಖಂಡರಾದ ವಕೀಲ ಸುನಿಲ್ ಕಟ್ನವಾಡಿ, ವೀರನಪುರ ಮಹಾಲಿಂಗಪ್ಪ, ಶಂಭು ಪಟೇಲ್, ಸತೀಶ್ ಇದ್ದರು.

’ಲಿಂಗಾಯತರನ್ನೇ ಸಿ.ಎಂ. ಮಾಡಲಿ’

‘ದಲಿತರ ಮತಗಳು ಬೇಕೆನ್ನುವ ಕಾಂಗ್ರೆಸ್ಸಿಗರು ದಲಿತ ನಾಯಕರ ಬಗ್ಗೆ ಕಾಳಜಿ ತೋರುವ ಮತ್ತು ಅವರನ್ನು ಮುಖ್ಯಮಂತ್ರಿ ಮಾಡುವ ಘೋಷಣೆಯನ್ನು ಏಕೆ ಮಾಡುತ್ತಿಲ್ಲ?ಖರ್ಗೆ ಸೋಲಿಗೆ, ಜಿ.ಪರಮೇಶ್ವರ ಸೋಲಿಗೆ ಯಾರು ಕಾರಣರು? ಈಗ ಲಿಂಗಾಯತರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಕೆಪಿಸಿಸಿ ಅಧ್ಯಕ್ಷಗಾದಿಗೆ ಲಿಂಗಾಯತರನ್ನೇ ನೇಮಿಸುವ ಮೂಲಕ ಸಮುದಾಯದವರ ವಿಶ್ವಾಸ ಗಳಿಸಲು ಪ್ರಯತ್ನಿಸಲಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT