ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ

ವಿಧಾನಸೌಧದಲ್ಲಿ ಪಾಕಿಸ್ತಾನ  ಜಿಂದಾಬಾದ್  ಘೋಷಣೆ: ಕಾಂಗ್ರೆಸ್‌ ಕಚೇರಿ ಮುತ್ತಿಗೆಗೆ ಬಿಜೆಪಿ ಯತ್ನ
Published 28 ಫೆಬ್ರುವರಿ 2024, 16:49 IST
Last Updated 28 ಫೆಬ್ರುವರಿ 2024, 16:49 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸಭಾ ಸದಸ್ಯ ನಾಸೀರ್‌ ಹುಸೇನ್‌ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿ ರಾಷ್ಟ್ರದ್ರೋಹದ ಕೆಲಸ ಮಾಡಿದ್ದು, ಆರೋಪಿಗಳನ್ನು ಬಂಧಿಸದೇ ಕಾಂಗ್ರೆಸ್‌ ಸರ್ಕಾರ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 

ಸತ್ಯಮಂಗಲ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಮತ್ತು ಕಾಂಗ್ರೆಸ್‌ ಮುಖಂಡರ ಭಾವಚಿತ್ರ ಸುಡಲು ಯತ್ನಿಸಿದರು. ಆದರೆ, ಇದಕ್ಕೆ ಅವಕಾಶ ನೀಡದ ಪೊಲೀಸರು, ಭುವನೇಶ್ವರಿ ವೃತ್ತದಲ್ಲೇ ಪ್ರತಿಭಟನಕಾರರನ್ನು ವಶಕ್ಕೆ ಪಡೆದರು. 

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂದೆ ಸೇರಿದ ಪ್ರತಿಭಟನಕಾರರು, ಅಲ್ಲಿಂದ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ನಾಸೀರ್ ಹುಸೇನ್, ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಭಾವಚಿತ್ರವನ್ನು ಪ್ರದರ್ಶಿಸಿದ ಪ್ರತಿಭಟನಕಾರರು, ಸುಡಲು ಮುಂದಾದರು. ಪೊಲೀಸರು ಮಧ್ಯೆ ಪ್ರವೇಶ ಮಾಡಿ, ಭಾವಚಿತ್ರಗಳನ್ನು ಕಿತ್ತುಕೊಂಡರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. 

ಮನವೊಲಿಕೆಗೆ ಒಪ್ಪದೇ ಇದ್ದಾಗ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕೂರಿಸಿಕೊಂಡು ಬೇರೆಡೆಗೆ ಕರೆದೊಯ್ದರು. 

ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ  ಸೂರ್ಯ ಕುಮಾರ್‌, ‘ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಶತ್ರು ರಾಷ್ಟ್ರಪಾಕಿಸ್ತಾನದ ಬಗ್ಗೆ ಹಾಗೂ ಪಾಕ್ ಪ್ರೇಮಿಗಳ ಬಗ್ಗೆ ಮೃದು ಧೋರಣೆ ಹೊಂದಿದೆ. ರಾಜ್ಯ ಸಭಾ ಚುನಾವಣೆಯ ಬಳಿಕ ವಿಧಾನಸೌಧದ ಮೊಗಸಾಲೆಯಲ್ಲಿ ರಾಜ್ಯ ಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಅಭಿನಂದಿಸಲು ಬಂದ  ದೇಶದ್ರೋಹಿಗಳು ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮುಂದೆಯೇ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೇಶ ದ್ರೋಹದ ಕೆಲಸ. ಇನ್ನೂ ಆರೋಪಿಗಳನ್ನು ಬಂಧಿಸದ ಕಾಂಗ್ರೆಸ್ ಸರ್ಕಾರ, ರಕ್ಷಣೆ ನೀಡಲು ಮುಂದಾಗಿದೆ’ ಎಂದು ಆರೋಪಿಸಿದರು.

‘ಭಾರತ ನೆಲದಲ್ಲಿದ್ದು, ಕಾವೇರಿ ನೀರು ಕುಡಿದು ಬದುಕುತ್ತಿರುವ ದೇಶ ದ್ರೋಹಿಗಳು ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ರಾಷ್ಟ್ರ ಹಾಗೂ ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ. ಇಂಥವರ ರಕ್ಷಣೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ದೇಶದಲ್ಲಿ ಹುಟ್ಟಿಲ್ಲವೇ? ಕಾವೇರಿ ನೀರು ಕುಡಿಯುತ್ತಿಲ್ಲವೇ? ಇಂತಹ ದೇಶ ದ್ರೋಹಿಗಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ರಾಷ್ಟ್ರ ದ್ರೋಹಿಗಳನ್ನು ಬಂಧಿಸಿ, ಕ್ರಮಕೈಗೊಳ್ಳುವವರೆಗೆ ಬಿಜೆಪಿ ಹಾಗೂ ಯುವ ಮೋರ್ಚಾ ನಿರಂತರ ಹೋರಾಟ ಮಾಡಲಿದೆ ಎಂದು ಸೂರ್ಯಕುಮಾರ್‌ ಎಚ್ಚರಿಸಿದರು.

ಜಿಲ್ಲಾ ಉಪಾಧ್ಯಕ್ಷರಾದ ಶಿವುವಿರಾಟ್, ರೇವಣ್ಣ, ಬಿಜೆಪಿ ರಾಜ್ಯ ಯುವ ಮೋರ್ಚಾದ ಯೋಜನೆ ಮತ್ತು ಸಂಶೋಧನೆ ವಿಭಾಗದ ಸಂಚಾಲಕ ಪ್ರಣಯ್, ನಗರ ಮಂಡಲದ ಅಧ್ಯಕ್ಷ ಶಿವರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಅರಕಲವಾಡಿ ಮಹೇಶ್, ಎಸ್ ಟಿ .ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾ ಅಧ್ಗಕ್ಷ ಚಂದ್ರಶೇಖರ್, ಮುಖಂಡರಾದ ನಿಜಗುಣರಾಜು, ಎಸ್. ಬಾಲಸುಬ್ರಮಣ್ಯ, ಬಿ.ಪಿ.ಶಾಂತಮೂರ್ತಿ, ಆನಂದ್ ಭಗೀರಥ್, ಜಿಲ್ಲಾ ಕಾರ್ಯದರ್ಶಿ ನಟರಾಜು, ಎಪಿಎಂಸಿ ಅಧ್ಯಕ್ಷ  ಮನೋಜ್ ಪಟೇಲ್, ಚಂದ್ರಶೇಖರನಾಯಕ್, ಚಂದ್ರು ನಾಯಕ್, ಮಹದೇವಸ್ವಾಮಿ, ಕೂಸಣ್ಣ, ಬುಲೆಟ್ ಚಂದ್ರು, ಮೂಡುಗೂರು ಸುನಿಲ್, ನಾಗರಾಜು, ನಾಗೇಂದ್ರ, ಮಹೇಶ್, ಮರಿಯಾಲ ಮಹೇಶ್, ಮಾರ್ಕೆಟ್‌ ಕುಮಾರ್ ಪ್ರದೀಪ್, ಕಿರಣ್, ಮಹೇಶ್, ರಾಘವೇಂದ್ರ, ಇತರರು ಭಾಗವಹಿಸಿದ್ದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರವನ್ನು ಬಂಧಿಸಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರವನ್ನು ಬಂಧಿಸಿದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು

Cut-off box - ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಯತ್ನ ಪ್ರತಿಭಟನೆಯ ಬಳಿಕ ಪ್ರಣಯ್‌ ಮನೋಜ್‌ ಪಟೇಲ್‌ ಸೇರಿದಂತೆ ನಾಲ್ಕೈದು ಮಂದಿ ಮುಖಂಡರು ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಗೆ ಮುತ್ತಿಗೆ ಹಾಕಿದರು.  ಪಕ್ಷದ ಧ್ವಜ ಹಿಡಿದಿದ್ದ ಮುಖಂಡರು ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಚೇರಿ ಪ್ರವೇಶಿಸಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಎಲ್ಲರನ್ನು ತಡೆದು ಪೊಲೀಸ್‌ ವಾಹನದಲ್ಲಿ ಕೂರಿಸಿ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT