ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾಂತ, ಕಾರ್ಯಪದ್ಧತಿಯಲ್ಲಿ ಬಿಜೆಪಿ ರಾಜಿ ಮಾಡಿಕೊಂಡಿಲ್ಲ: ಕಟೀಲ್‌

ಮೂರು ದಿನಗಳ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರ ಉದ್ಘಾಟನೆ
Last Updated 16 ಜೂನ್ 2022, 15:10 IST
ಅಕ್ಷರ ಗಾತ್ರ

ಚಾಮರಾಜನಗರ: ಭಾರತೀಯ ಜನತಾ ಪಾರ್ಟಿಯು (ಬಿಜೆಪಿ) ತನ್ನ ಸುದೀರ್ಘ ರಾಜಕೀಯ ಅವಧಿಯಲ್ಲಿ ವಿಚಾರ‌ಧಾರೆ, ಸಿದ್ಧಾಂತ ಹಾಗೂ ಕಾರ್ಯ ಪದ್ಧತಿಯಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಗುರುವಾರ ಅಭಿಪ್ರಾಯಪಟ್ಟರು.

ನಗರದ ನಿಜಗುಣ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಮಟ್ಟದ ಪ್ರಶಿಕ್ಷಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪರಮ ವೈಭವದ ಸ್ಥಿತಿಗೆ ತಾಯಿ ಭಾರತಿಯನ್ನು ಕೊಂಡೊಯ್ಯುವ ಸಂಕಲ್ಪದ ವಿಚಾರಧಾರೆಯ ಆಧಾರದಲ್ಲಿ ಪಕ್ಷ ಬೆಳೆದುಕೊಂಡು ಬಂದಿದೆ. ಜನಸಂಘ ಸ್ಥಾಪನೆಯಾಗಿ, ಅದು ಭಾರತೀಯ ಜನತಾ ಪಾರ್ಟಿಯಾಗಿ ಬದಲಾದ ನಂತರವೂ ಈ ವಿಚಾರಧಾರೆಯಲ್ಲಿ ಬದಲಾವಣೆಯಾಗಿಲ್ಲ. ಸಿದ್ಧಾಂತ ಹಾಗೂ ಕಾರ್ಯಪದ್ಧತಿಯಲ್ಲಿ ರಾಜಿ ಮಾಡದೇ ಇರುವುದರಿಂದ ಇವತ್ತು ನಮ್ಮ ಪಕ್ಷ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ’ ಎಂದರು.

ಮಹಿಳೆಯರಿಗೆ ಪ್ರಾಮುಖ್ಯ: ’ಸ್ವಾತಂತ್ರ್ಯ ಭಾರತದಲ್ಲಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಆದ್ಯತೆ ನೀಡಿದ ಸರ್ಕಾರ ಎಂದರೆ ಅದು ನರೇಂದ್ರ ಮೋದಿ ಸರ್ಕಾರ. 11 ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದೆ. ಪಕ್ಷವು ಮಹಿಳೆಯರಿಗೂ ಶ್ರೇಷ್ಠ ಪ್ರಾತಿನಿಧ್ಯ ನೀಡುತ್ತಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ‘2014ರಿಂದ ಈ ದೇಶದಲ್ಲಿ ರಾಜಕಾರಣದ ನೀತಿ ಬದಲಾಗಿದೆ. ಇದಕ್ಕೆ ಪ್ರಧಾನಿ ಮೋದಿ ಅವರು ಕಾರಣ. ಅವರು ಅಧಿಕಾರ ಸ್ವೀಕರಿಸಿದ ನಂತರ ಜಗತ್ತಿನಲ್ಲಿ ಭಾರತದ ಗೌರವ ಹಿಮಾಲಯದೆತ್ತರಕ್ಕೆ ಏರಿದೆ’ ಎಂದರು.

‘ಮೋದಿ ಸರ್ಕಾರ ಬಡವರು, ಜನಸಾಮಾನ್ಯರ ಪರವಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಅವರ ಅನುಕೂಲಕ್ಕಾಗಿ ಉಜ್ವಲ, ಆಯುಷ್ಮನ್‌ ಭಾರತ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲೂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಕೂಡ ವಿವಿಧ ಯೋಜನೆಗಳ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡಿವೆ’ ಎಂದರು.

ಶಾಸಕ ಎನ್‌.ಮಹೇಶ್‌ ಅವರು ಮಾತನಾಡಿ, ‘ಮಾತೃಪ್ರಧಾನವಾದ ಈ ದೇಶದಲ್ಲಿ ಬಿಜೆಪಿಯು ಮಹಿಳೆಯರಿಗೂ ಪ್ರಾತಿನಿಧ್ಯ ನೀಡುತ್ತಿದೆ. ಮಹಿಳೆಯರಿಗಾಗಿಯೇ ಹಮ್ಮಿಕೊಳ್ಳಲಾಗಿರುವ ಈ ಶಿಬಿರ ಬೇರೆ ಪಕ್ಷಗಳಲ್ಲಿ ಕಾಣಲು ಸಾಧ್ಯವಿಲ್ಲ. ಸಂಘನಾತ್ಮಕವಾಗಿ, ರಾಜಕೀಯವಾಗಿ ಮಹಿಳೆಯರನ್ನು ಸಶಸ್ತ್ರೀಕರಣಗೊಳಿಸುವುದಕ್ಕೆ ಈ ಶಿಬಿರ ನೆರವಾಗಲಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ ಅವರು, ಶನಿವಾರದವರೆಗೆ ನಡೆಯಲಿರುವ ಶಿಬಿರದ ಬಗ್ಗೆ ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌, ಹಾಸನ ಪ್ರಭಾರಿ ನಿಜಗುಣರಾಜು, ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಲಲಿತಾ,ದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪ ಸುವರ್ಣ, ಪ್ರಶಿಕ್ಷಣ ಶಿಬಿರದ ಸಹ ಸಂಚಾಲಕಿ ಶೋಭಾ, ಮಾಧ್ಯಮ ಸಂಚಾಲಕಿ ರಜನಿ ಪೈ, ಮೋರ್ಚಾದ ಅಶ್ವಿನಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT