ಬುಧವಾರ, ಸೆಪ್ಟೆಂಬರ್ 22, 2021
28 °C
ಬಿಎಸ್‌ವೈ ರಾಜೀನಾಮೆ: ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರಿಂದ ಕಟು ಟೀಕೆ

ಬಿಎಸ್‌ವೈ ರಾಜೀನಾಮೆ: ಬಿಜೆಪಿ ಹೈಕಮಾಂಡ್‌ ವಿರುದ್ಧ ಆಕ್ರೋಶ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಗುಂಡ್ಲುಪೇಟೆ: ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. 

ಪ್ರತಿಭಟನೆ ನಡೆಸಬಾರದು ಎಂದು ಯಡಿಯೂರಪ್ಪ ಅವರು ಮನವಿ ಮಾಡಿರುವುದರಿಂದ ಅವರ ಬೆಂಬಲಿಗರು, ಅಭಿಮಾನಿಗಳು, ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹೈಕಮಾಂಡ್‌, ರಾಜ್ಯದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿರುವವರಲ್ಲಿ ಬಹುಪಾಲು ಮಂದಿ ವೀರಶೈವ–ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಮುಖಂಡರು ಹಾಗೂ ಸದಸ್ಯರು ಕೂಡ ಪಕ್ಷದ ಮುಖಂಡರ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ. 

ಬಿಜೆಪಿ ಕಾರ್ಯಕರ್ತರು, ಯಡಿಯೂರಪ್ಪ ಅವರ ಅಭಿಮಾನಿ ಬಳಗ, ವೀರಶೈವ– ಲಿಂಗಾಯತ ಸಮುದಾಯವದವರ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ರಾಜೀನಾಮೆ ಸುತ್ತ ಜೋರಾಗಿ ಚರ್ಚೆಗಳು ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ಯಡಿಯೂರಪ್ಪ ಅಭಿಮಾನಿಗಳು, ಅವರಿಗೆ ಧನ್ಯವಾದ ಅರ್ಪಿಸುವ ಫ್ಲೆಕ್ಸ್‌ಗಳನ್ನೂ ಹಾಕಿದ್ದಾರೆ. 

ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಯಡಿಯೂರಪ್ಪ ಅವರು ಒಂದು ಬಾರಿ ಭೇಟಿ ನೀಡದಿದ್ದರೂ, ಅವರನ್ನು ಆರಾಧಿಸುವ ದೊಡ್ಡ ಬಳಗ ಇಲ್ಲಿದೆ. ಅವರನ್ನು ‘ಅಪ್ಪಾಜಿ’ ಎಂದೇ ಕರೆಯುತ್ತಾರೆ. ಅಂತಹ ಕಟ್ಟಾ ಅಭಿಮಾನಿಗಳು ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌ನಲ್ಲಿ ಬಿಜೆಪಿ ಹಾಗೂ ಅದರ ಮುಖಂಡರ ವಿರುದ್ಧ ಕಟುವಾದ ಶಬ್ದಗಳಲ್ಲಿ ಹರಿಹಾಯ್ದಿದ್ದಾರೆ. 

‘ಅಪ್ಪಾಜಿ ಕಣ್ಣೀರಿನ ಶಾಪ, ನಿಮಗೆ ತಟ್ಟದೇ ಬಿಡೊಲ್ಲ’, ‘ಆರ್‌ಐಪಿ ಬಿಜೆಪಿ’, ‘ವಯಸ್ಸಾದ ಮೇಲೆ ನಿಮ್ಮ ತಂದೆ-ತಾಯಿ ಮತ್ತು ಹಿರಿಯ ಪೋಷಕರನ್ನು ಮನೆಯಿಂದ ಹೊರಗೆ ಹಾಕಿ ಎಂದು ಸಮಾಜಕ್ಕೆ ಸಂದೇಶಕೊಟ್ಟ ಬಿಜೆಪಿ’, ‘ಯಡಿಯೂಪ್ಪ ಇಲ್ಲದ ಬಿಜೆಪಿ ರಾಜ್ಯದಲ್ಲಿ ದೂಳಿಪಟ’, ‘ನಿಮ್ಮ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅಪ್ಪಾಜಿ’, ‘ರಾಜ್ಯದಲ್ಲಿ ಬಿಜೆಪಿ ಇನ್ನು ಮುಗಿದ ಅಧ್ಯಾಯ’, ‘ಇದರ ಪರಿಣಾಮ ಕಾಣಲು ಹೆಚ್ಚು ದಿನ ಬೇಡ; ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೇ ಗೊತ್ತಾಗುತ್ತದೆ’, ‘ಪಕ್ಷ ಕಟ್ಟಿದ ಯಡಿಯೂರಪ್ಪ, ಅವರಿಗೆ ಮೋಸ ಮಾಡಿದ ಬಿಜೆಪಿ’ ಎಂಬ ಪೋಸ್ಟ್‌ಗಳನ್ನು ಬಿಎಸ್‌ವೈ ಬೆಂಬಲಿಗರು ಹಾಕಿದ್ದಾರೆ. 

ಬಿಜೆಪಿಯ ಚಿಹ್ನೆ ಕಮಲದ ಪೋಸ್ಟರ್ ಹಾಕಿ, ‘ಮರಳಿ ಬಾರದೂರಿಗೆ ನಿನ್ನ ಪಯಣ’ ಎಂಬ ಗೀತೆಯನ್ನೂ ಜೋಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧವೂ ಕಿಡಿ ಕಾರಿರುವ ಕಾರ್ಯಕರ್ತರು, ‘ನೆನಪಿರಲಿ, ಯಡಿಯೂರಪ್ಪ ಹೋರಾಟಗಾರನಾಗುವ ಸಮಯದಲ್ಲಿ ಮೋದಿ ಗುಜರಾತಿನ ರೈಲ್ವೆ ಸ್ಟೇಷನ್‍ನಲ್ಲಿ ಟೀ ಮಾರುತ್ತಿದ್ದ’, ‘ಸುಳ್ಳುಗಾರ ಮೋದಿ, ಕಳ್ಳಗಾರ ಅಮಿತ್ ಶಾ... ನಿಮ್ಮ ಆಟ ನಮ್ಮ ರಾಜ್ಯದಲ್ಲಿ ನಡೆಯೊಲ್ಲ’, ‘ಇಲ್ಲಿ ಏನೇ ಇದ್ದರೂ ರಾಜಾಹುಲಿ ದರ್ಬಾರ್’ ಎಂದೆಲ್ಲಾ ಬರೆದುಕೊಂಡಿದ್ದಾರೆ. 

ನಡೆಯದ ಪ್ರತಿಭಟನೆ: ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂಬುದು ಖಚಿತವಾಗುತ್ತಲೇ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅವರ ಅಭಿಮಾನಿ ಬಳಗದವರು,  ವೀರಶೈವ–ಲಿಂಗಾಯತ ಮಹಾಸಭಾದ ಮುಖಂಡರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ದಿನಾಂಕ, ಸಮಯ ಎಲ್ಲವನ್ನೂ ನಿಗದಿ ಪಡಿಸಿದ್ದರು. ಆದರೆ, ಯಡಿಯೂರಪ್ಪ ಅವರು ತಮ್ಮನ್ನು ಬೆಂಬಲಿಸಿ ಪ್ರತಿಭಟನೆ ನಡೆಸಬಾರದು, ಪಕ್ಷ ಹಾಗೂ ನಾಯಕರ ವಿರುದ್ಧ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದ್ದರಿಂದ ಪ್ರತಿಭಟನೆಯನ್ನು ರದ್ದುಗೊಳಿಸಿದ್ದರು. 

ರಾಜೀನಾಮೆ ವದಂತಿ ಹರಡಿದ್ದರೂ, ಕೊನೆಗಳಿಗೆಯಲ್ಲಿ ಎಲ್ಲವೂ ಬದಲಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿತ್ತು. ಸೋಮವಾರ ಅವರು ರಾಜೀನಾಮೆ ನೀಡುವುದರೊಂದಿಗೆ ಆ ನಿರೀಕ್ಷೆ ಸುಳ್ಳಾಯಿತು.

‘ಬಿಎಸ್‌ವೈ ಸರ್ವಶ್ರೇಷ್ಠ ನೇತಾರ’
ಯಡಿಯೂರಪ್ಪ ರಾಜೀನಾಮೆ ನೀಡುತ್ತಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ಅವರು, ‘ಗುಂಡ್ಲುಪೇಟೆ ಉಪಚುನಾವಣೆಯ ಸಂದರ್ಭದಲ್ಲಿ ಎಲ್ಲ ಹಳ್ಳಿಗಳನ್ನು ಸುತ್ತಾಡಿ ಅಭ್ಯರ್ಥಿಯಾದ ನನಗಿಂತಲೂ ಅತಿ ಹೆಚ್ಚಿನ ಹೊರೆ ಹೊತ್ತು ಕ್ಷೇತ್ರದಾದ್ಯಂತ ಸಂಚರಿಸಿದವರು ದಣಿವರಿಯದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು. ಅಂದು ಅವರು ಹಳ್ಳಿಗಳಲ್ಲಿ ಸುತ್ತಾಡಿ ಮತಯಾಚನೆ ಮಾಡಿದ ಫಲವೇ ಇಂದು ನಾನು ಶಾಸಕನಾಗಿರುವುದು’ ಎಂದು ಹೇಳಿದ್ದಾರೆ. 

‘ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಹಾಗೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುತ್ತೇನೆ ಎಂಬ ಅವರ ಮಾತು ನಮಗೆ ಪ್ರೇರಣಾದಾಯಕ. ನನಗೆ ಹಾಗೂ ನಮ್ಮ ಕ್ಷೇತ್ರದ ಜನತೆಗೆ ಹಾಗೂ ನಮ್ಮ ಪಕ್ಷದ ಕಾರ್ಯಕರ್ತರ ಸರ್ವ ಶ್ರೇಷ್ಠ ನೇತಾರ ಅವರು. ಇನ್ನೂ 10–15 ವರ್ಷಗಳ ಕಾಲ ರಾಜ್ಯದಲ್ಲಿ ರಾಜಕಾರಣ ಮಾಡಿ ಪಕ್ಷವನ್ನು ಮತ್ತಷ್ಟು ಬಲಿಷ್ಠ ಗೊಳಿಸುವುದಾಗಿ ಹೇಳುತ್ತಿರುವ ಬಿಎಸ್‌ವೈ ಅವರ ಬದ್ದತೆಯನ್ನು ಮೆಚ್ಚಲೇಬೇಕು’ ಎಂದು ಅವರು ಹೇಳಿದ್ದಾರೆ. 

––

ರಾಜ್ಯದಲ್ಲಿ ಬಿಜೆಪಿ ಸಂಘಟನೆ ಮಾಡಿದವರಲ್ಲಿ ಯಡಿಯೂರಪ್ಪ ಮುಂಚೂಣಿ ನಾಯಕರು. ಅಧಿಕಾರಕ್ಕೆ ಬಂದರೂ ಸ್ವಪಕ್ಷೀಯರೇ ಅವರಿಗೆ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲಿಲ್ಲ
-ದೊಡ್ಡಹುಂಡಿ ಜಗದೀಶ್, ಬಿಜೆಪಿ ಗುಂಡ್ಲುಪೇಟೆ ಮಂಡಲ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು