ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಿಲು ಯೋಜನೆ

ಘನ ತ್ಯಾಜ್ಯದ ವ್ಯವಸ್ಥಿತ ವಿಲೇವಾರಿಗೆ ಜಿಲ್ಲಾ ಪಂಚಾಯಿತಿ ಚಿಂತನೆ, ಪ್ಲಾಸ್ಟಿಕ್‌ ಕಸ ಹೊರಗಡೆ ಸಾಗಿಸಲು ಯೋಚನೆ
Last Updated 3 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್‌ ಮುಕ್ತವನ್ನಾಗಿ ಮಾಡಲು ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸುತ್ತಿದೆ. ಉತ್ಪತ್ತಿಯಾಗುವ ತ್ಯಾಜ್ಯವನ್ನು ಅಲ್ಲಿಂದ ಬೇರೆ ಕಡೆಗೆ ಸಾಗಿಸಿ ವ್ಯವಸ್ಥಿತ ವಿಲೇವಾರಿ ಮಾಡಲು ಚಿಂತನೆ ನಡೆಸಿದೆ.

ಕಣ್ಣುಹಾಯಿ‌ಸಿದಷ್ಟು ದೂರಕ್ಕೆ ಹಸಿರನ್ನು ಹೊದ್ದುಕೊಂಡಿರುವ ಅರಣ್ಯದ ಮಧ್ಯೆ ತಲೆ ಎತ್ತಿ ನಿಂತಿರುವ ಬಿಳಿಗಿರಿರಂಗನಬೆಟ್ಟ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ರಂಗನಾಥಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆ ಏನಲ್ಲ. ವಾರಾಂತ್ಯದಲ್ಲಿ ಹಾಗೂ ರಜಾದಿನಗಳಲ್ಲಿ ಇಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬುತ್ತಾರೆ. ಹಾಗಾಗಿ, ಬೆಟ್ಟದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಸೇರಿದಂತೆ ಇನ್ನಿತರ ಘನ ತಾಜ್ಯ ಗಣನೀಯ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.

ಪ್ಲಾಸ್ಟಿಕ್‌ ಬಾಟಲಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಪ್ರವಾಸಿಗರೂ ಇದ್ದಾರೆ. ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಬರುವ ಬೆಟ್ಟದಲ್ಲಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಆದರೆ, ನಿಯಮಗಳನ್ನು ಎಲ್ಲರೂ ಪಾಲನೆ ಮಾಡುತ್ತಿಲ್ಲ.

ಬೆಟ್ಟದಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಒಲವು ತೋರಿತ್ತು. ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ್‌ ಅವರು ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಬಂದಿದ್ದ ಸಂದರ್ಭದಲ್ಲಿ ಅತ್ಯಾಧುನಿಕ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಜಾಗ ಗುರುತಿಸುವುದಕ್ಕೂ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಜಾಗದ ಸಮಸ್ಯೆ ಇರುವುದರಿಂದ ಅಲ್ಲಿ ಘಟಕ ಸ್ಥಾಪನೆ ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ.

ಹಾಗಾಗಿ, ಅಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಹೊರಗಡೆ ಸಾಗಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ಯೋಚನೆ ನಡೆಸುತ್ತಿದೆ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಬಿ.ಎಚ್‌.ನಾರಾಯಣರಾವ್‌ ಅವರು ಈ ಬಗ್ಗೆ ವಿಶೇಷ ಆಸಕ್ತಿ ತೋರಿದ್ದು, ರೂಪು ರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಬಿಳಿಗಿರಿರಂಗನಬೆಟ್ಟ ಸೂಕ್ಷ್ಮ ಪರಿಸರ ವಲಯದಲ್ಲಿ ಇರುವುದರಿಂದ ಪ್ಲಾಸ್ಟಿಕ್‌ ಹಾಗೂ ಇನ್ನಿತರ ಕಸವನ್ನು ಎಸೆಯುವಂತಿಲ್ಲ. ಬೆಟ್ಟವನ್ನು ಪ್ಲಾಸ್ಟಿಕ್‌ ಮುಕ್ತ ಮಾಡುವ ಬಗ್ಗೆ ಯೋಜನೆ ಹಾಕಿಕೊಂಡಿದ್ದೇವೆ. ಈ ಸಂಬಂಧ ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತೇವೆ’ ಎಂದು ನಾರಾಯಣರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಏನು ಯೋಜನೆ?: ಬೆಟ್ಟದಲ್ಲಿ 10ರಿಂದ 12 ಸಣ್ಣ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಳಸದಂತೆ ಅವರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳಲಿದೆ. ‌ಅಂಗಡಿಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಪ್ರವಾಸಿಗರಲ್ಲೂ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಿದ್ದಾರೆ.

ಮಾತ್ರವಲ್ಲದೇ, ಬೆಟ್ಟದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ ನಂತರ ಅಲ್ಲಿಂದ ಹೊರಗಡೆ ಸಾಗಿಸುವುದು ಜಿಲ್ಲಾ ಪಂಚಾಯಿತಿಯ ಯೋಚನೆ. ಕಸ ಸಾಗಿಸಲು ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೆರವು ಕೇಳಲೂ ಚಿಂತನೆ ನಡೆದಿದೆ.

‘ಅಲ್ಲಿಂದ ಸಂಗ್ರಹಿಸಿ ತಂದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಿಮೆಂಟ್‌ ಕಾರ್ಖಾನೆಗಳಿಗೆ ಕಳುಹಿಸಲು ಚಿಂತಿಸುತ್ತಿದ್ದೇವೆ. ಈಗಾಗಲೇ ನಾವು ಕಾರ್ಖಾನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಸಿಇಒ ಮಾಹಿತಿ ನೀಡಿದರು.

*

ಬೆಟ್ಟದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಜಾಗದ ಕೊರತೆ ಇದೆ. ಹಾಗಾಗಿ, ತ್ಯಾಜ್ಯ ವಿಲೇವಾರಿಗೆ ಈ ಯೋಜನೆ ರೂಪಿಸುತ್ತಿದ್ದೇವೆ
– ಬಿ.ಎಚ್‌.ನಾರಾಯಣರಾವ್‌, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT