ಬುಧವಾರ, ಮೇ 25, 2022
30 °C

ಮೀಸಲಾತಿ ಹೋರಾಟದ ಹಿಂದೆ ಬಿಜೆಪಿ, ಆರ್‌ಎಸ್‌ಎಸ್‌ ಕುತಂತ್ರ-ಬಿಎಸ್‌ಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟದ ಹಿಂದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗಳ ಕುಮ್ಮಕ್ಕು ಇದ್ದು, ಕೇಂದ್ರ ಸರ್ಕಾರ ನಡೆಸುತ್ತಿರುವ ಖಾಸಗೀಕರಣವನ್ನು ಮರೆ ಮಾಚುವ ಹುನ್ನಾರ ಇದರ ಹಿಂದೆ ಇದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಬುಧವಾರ ಆರೋಪಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಈಗ ಮುಳುಗುತ್ತಿರುವ ಹಡಗು. ಎಲ್ಲವೂ ಖಾಸಗೀಕರಣವಾಗುತ್ತಿದೆ. ಬಿಎಸ್‌ಎನ್‌ಎಲ್‌, ರೈಲ್ವೆ, ಎಲ್‌ಐಸಿ, ಆರೋಗ್ಯ, ಶಿಕ್ಷಣ... ಎಲ್ಲವನ್ನೂ ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುತ್ತಿದೆ. ಇದನ್ನು ಮರೆಮಾಚಲು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗಳು ಮೀಸಲಾತಿ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿವೆ’ ಎಂದು ದೂರಿದರು.

‘ಹೋರಾಟ ನಡೆಸುತ್ತಿರುವ ಸಮುದಾಯಗಳು ಖಾಸಗೀಕರಣದ ವಿರುದ್ಧ ಧ್ವನಿ ಎತ್ತಬೇಕು. ಇಲ್ಲವೇ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡುವಂತೆ ಹೋರಾಟ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ಈಗ ಹೋರಾಟ ಮಾಡುತ್ತಿರುವವರಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿರುವುದರ ಹಿಂದಿನ ಉದ್ದೇಶವೇ ತಿಳಿದಿಲ್ಲ. ಯಾವ ಸಮುದಾಯ ಅವಕಾಶದಿಂದ ವಂಚಿತವಾಗಿದೆಯೋ ಅಥವಾ ಪ್ರಾಧಾನ್ಯ ಇಲ್ಲದ ವರ್ಗಗಳಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಲ್ಲಿ ಅವಕಾಶ ನೀಡುವ ಉದ್ದೇಶದಿಂದ ಮೀಸಲಾತಿ ಜಾರಿಯಾಗಿದೆ’ ಎಂದರು.

‘ಮೀಸಲಾತಿ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಕೇಂದ್ರದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ಹಾಗೂ ಬಿಜೆಪಿಯೇ ನೇರ ಹೊಣೆ. ಮೀಸಲಾತಿಯನ್ನು ವಿರೋಧಿಸುತ್ತಿದ್ದ ಮೇಲ್ವರ್ಗಗಳು ಈಗ ಮೀಸಲಾತಿಯನ್ನು ಕೇಳುತ್ತಿವೆ. ಮೀಸಲಾತಿ ವ್ಯವಸ್ಥೆಯನ್ನು ನಾಶ ಮಾಡುವ ಉದ್ದೇಶದಿಂದಲೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಈ ಹೋರಾಟಕ್ಕೆ ಬೆಂಬಲ ನೀಡುತ್ತಿವೆ. ಕಾಂಗ್ರೆಸ್‌ ಕೂಡ ಬೆಂಬಲ ನೀಡುತ್ತಿದೆ’ ಎಂದು ಕೃಷ್ಣಮೂರ್ತಿ ಅವರು ದೂರಿದರು.

ಸಮುದಾಯಗಳ ನಡುವೆ ಸಂಘರ್ಷ: ‘ಮೀಸಲಾತಿ ಹೋರಾಟವು ವಿವಿಧ ಸಮುದಾಯಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಲಿದೆ’ ಎಂದು ಕೃಷ್ಣಮೂರ್ತಿ ಅವರು ಹೇಳಿದರು.

‘ಕುರುಬ ಸಮುದಾಯ ಎಸ್‌ಟಿಗೆ ಸೇರ್ಪಡೆ ಮಾಡುವಂತೆ ದೊಡ್ಡ ಸಮಾವೇಶ ನಡೆಸಿದೆ. ಪಂಚಮಸಾಲಿ ಲಿಂಗಾಯತ ಸಮುದಾಯ ಕೂಡ ಪ್ರವರ್ಗ 2ಎಗೆ ಸೇರಿಸುವಂತೆ ದೊಡ್ಡ ಮಟ್ಟಿನ ಹೋರಾಟ ಮಾಡುತ್ತಿದೆ. ಒಕ್ಕಲಿಗರು ಕೂಡ ಪ್ರವರ್ಗ– 2ಎಗೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಈಡಿಗ ಸಮುದಾಯ ಇದಕ್ಕೆ ವಿರೋಧ ವ್ಯಕ್ತಪಡಿಸಿ ಯಥಾಸ್ಥಿತಿ ಕಾಪಾಡುವಂತೆ ಒತ್ತಾಯ ಮಾಡಿದೆ. ಈ ಹೋರಾಟವು ದುರ್ಬಲ ಹಾಗೂ ಪ್ರಬಲ ಸಮುದಾಯಗಳ ನಡುವೆ ಸಂಘರ್ಷ ಉಂಟು ಮಾಡಲಿದೆ’ ಎಂದರು.

‘12 ಬಾರಿ ಮುಖ್ಯಮಂತ್ರಿಯಾಗಿರುವ ಲಿಂಗಾಯ‌ತ ಸಮುದಾಯ, ಎಂಟು ಬಾರಿ ಮುಖ್ಯಮುಂತ್ರಿಯಾಗಿರುವ ಒಕ್ಕಲಿಗ ಸಮುದಾಯ ಹಾಗೂ ಮುಖ್ಯಮಂತ್ರಿಯಾಗಿ ಕುರುಬರ ಸಮುದಾಯ, ಹಿಂದುಳಿದ ವರ್ಗದವರು ಎಸ್‌ಸಿ, ಎಸ್‌ಟಿ, ಪ್ರವರ್ಗ 2ಎ ನಲ್ಲಿ ಪಾಲು ಕೇಳುತ್ತಿವೆ’ ಎಂದರು.

ಶೇ 100 ಮೀಸಲಾತಿ ನೀಡಿ: ಯಾವುದೇ ಸಮುದಾಯದವನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಬಾರದು. ಬದಲಿಗೆ ಜಾತಿ ಹಾಗೂ ಜನಸಂಖ್ಯೆ ಆಧಾರದಲ್ಲಿ ನೇರವಾಗಿ ಮೀಸಲಾತಿ ನೀಡಲಿ. ಉದಾಹರಣೆ ಒಕ್ಕಲಿಗರು ಶೇ 11ರಷ್ಟಿದ್ದರೆ, ಶೇ 11ರಷ್ಟು ಮೀಸಲಾತಿ, ಲಿಂಗಾಯತರು ಶೇ 16ರಷ್ಟಿದ್ದರೆ ಅಷ್ಟೇ ಪ್ರಮಾಣದಲ್ಲಿ ಮೀಸಲಾತಿ ನಿಗದಿ ಪಡಿಸಲಿ. ಆಗ ಎಲ್ಲರಿಗೂ ಸಮ ಪಾಲು, ಸಮಬಾಳು ಎಂಬ ತತ್ವ ಸಾಕಾರವಾಗುತ್ತದೆ’ ಎಂದು ಕೃಷ್ಣಮೂರ್ತಿ ಅವರು ಹೇಳಿದರು.

‘ರೈತರ ಹೋರಾಟ, ಮೋದಿ ನೇತೃತ್ವದ ಸರ್ಕಾರ ವೈಫಲ್ಯಗಳನ್ನು ಮುಚ್ಚಿಹಾಕುವ ಹುನ್ನಾರವೂ ಇದರ ಹಿಂದಿದೆ. ರಾಜ್ಯದ ಶಾಸಕರು, ಸಂಸದರು ಹಾಗೂ ವಿಧಾನಪರಿಷತ್‌ ಸದಸ್ಯರು ಮೀಸಲಾತಿ ಬಗ್ಗೆ ತಮ್ಮ ನಿಲುವು ಸ್ಪಷ್ಟ ಪಡಿಸಬೇಕು. ಇದರ ಬಗ್ಗೆ ಚರ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಅಧಿವೇಶನ ಕರೆಯಬೇಕು’ ಎಂದು ಅವರು ಆಗ್ರಹಿಸಿದರು.

ಪಕ್ಷದ ರಾಜ್ಯದ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು