ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ, ಮಹಾವೀರ ಪಾಠಕ್ಕೆ ಕತ್ತರಿ: ದಲಿತ, ಪ‍್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Last Updated 1 ಮಾರ್ಚ್ 2021, 12:29 IST
ಅಕ್ಷರ ಗಾತ್ರ

ಚಾಮರಾಜನಗರ: ಆರನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಭಗವಾನ್ ಬುದ್ಧ ಹಾಗೂ ತೀರ್ಥಂಕರ ಮಹಾವೀರರಿಗೆ ಸಂಬಂಧಿಸಿ ಪಾಠಗಳನ್ನು ರದ್ದು ಪಡಿಸಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟವು ನಳಂದ ವಿಶ್ವವಿದ್ಯಾಲಯ ಪ್ರಧಾನ ಕಾರ್ಯದರ್ಶಿ ಬಂತೇ ಬೋದಿದತ್ತ ಥೇರಾ, ಬಂತೇ ಧಮ್ಮಾವೀರ ಅವರ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಎದುರು ಸೇರಿದ ಪ್ರತಿಭಟನಕಾರರು ಸರ್ಕಾರ, ಶಿಕ್ಷಣ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ ಅವರಿಗೆ ಮನವಿ ಸಲ್ಲಿಸಿದರು.

‘6 ನೇ ತರಗತಿಯ ಸಮಾಜ - ವಿಜ್ಞಾನ ಭಾಗ -1ರಲ್ಲಿನ ‘ಹೊಸ ಧರ್ಮಗಳ ಉದಯ’ ಎಂಬ ಪಾಠವನ್ನು ಬೋಧನೆ- ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬಾರದು’ ಎಂದುಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಪಾಠದಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾದ ಅಂಶಗಳಿವೆ ಎಂಬ ಕಾರಣಕ್ಕೆ ಈ ರೀತಿಯ ಸುತ್ತೋಲೆ ಹೊರಡಿಸಲಾಗಿದ್ದು, ಇದು ಸಂವಿಧಾನದ ವಿರೋಧಿ ಕೆಲಸ’ ಎಂದು ಪ್ರತಿಭಟನಾನಿರತರು ಮನವಿ ಪತ್ರದಲ್ಲಿ ದೂರಿದ್ದಾರೆ.

‘ಬ್ರಾಹ್ಮಣರು ಯಜ್ಞಯಾಗಗಳನ್ನು ನಡೆಸುತ್ತಿದ್ದರು, ಜನಸಾಮಾನ್ಯರಿಗೆ ಅರ್ಥವಾಗದ ಮಂತ್ರಗಳನ್ನು ಪಠಿಸಿ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರು ಎಂಬಂತಹ ಅಂಶಗಳಿವೆ ಎಂಬ ಕಾರಣಕ್ಕೆ ಪಾಠಕ್ಕೆ ಕತ್ತರಿ ಹಾಕಿರುವುದರಿಂದ ನಿಜವಾದ ಇತಿಹಾಸಕ್ಕೆ ಧಕ್ಕೆಯಾಗಿದೆ. ಋಗ್ವೇದ ಕಾಲದಲ್ಲಿ ಯಜ್ಞ- ಯಾಗಾದಿಗಳಲ್ಲಿ ಬ್ರಾಹ್ನಣರು ಹಸು ಕರುಗಳನ್ನು ಬಲಿಕೊಟ್ಟು ನಂತರ ಬಗೆಬಗೆಯ ಭಕ್ಷ್ಯಭೋಜನ ತಯಾರಿಸಿ ಸೇವಿಸುತ್ತಿದ್ದರು, ಸೋಮಪಾನ- ಸುರಾಪಾನಗಳನ್ನು ಮಾಡುತ್ತಿದ್ದರು, ಬಹಿರಂಗ ಕಾಮಕೇಳಿಗಳನ್ನು ನಡೆಸುತ್ತಿದ್ದರು ಎಂದು ವೇದ, ಉಪನಿಷತ್ತುಗಳಲ್ಲಿ ದಾಖಲಾಗಿರುವುದು ಸುಳ್ಳೇ’ ಎಂದು ಪ್ರಶ್ನಿಸಿದ್ದಾರೆ.

‘ಕೆಳಜಾತಿಗಳನ್ನು ನಿಂದಿಸುವ ಪಾಠ ರದ್ದು ಮಾಡಿ’

ಬ್ರಾಹ್ಮಣರು ನಂತರದ ದಿನಗಳಲ್ಲಿ ಅಂತಹ ಕೆಟ್ಟ ಆಚರಣೆಗಳನ್ನು ಬಿಟ್ಟಿರುವುದು ಅಭಿನಂದಾನರ್ಹ. ಆದರೆ, ಇತಿಹಾಸವನ್ನು ಯಾರೂ ಮರೆಮಾಚಬಾರದು. ಕನ್ನಡ ಸಾಹಿತ್ಯದ ಹಳೆಗನ್ನಡ ಹಾಗೂ ನಡುಗನ್ನಡ ಸಾಹಿತ್ಯದ ವಿವಿಧ ಕಾವ್ಯಗಳಲ್ಲಿ ಹೊಲೆಯ- ಮಾದಿಗರನ್ನು ಬಹಳ ತುಚ್ಛೀಕರಿಸಿ ನಿಂದಿಸಿ ಬರೆಯಲಾಗಿದೆ. ಪುರಂದರದಾಸರ ಹೊಲೆಯ ಊರೊಳಗಿಲ್ಲವೇ? ಎಂಬ ಪದ್ಯಗಳಲ್ಲಿ ಹೊಲೆಯ ಎಂಬ ಪದಕ್ಕೆ ದುಷ್ಟ, ನೀಚ, ಅಶುದ್ಧ, ಕೆಟ್ಟವ ಎಂಬೆಲ್ಲ ಅರ್ಥಗಳನ್ನು ಕಲ್ಪಿಸಲಾಗಿದೆ. ಆದ್ದರಿಂದ ಈ ಪಾಠಗಳನ್ನು ರದ್ದುಪಡಿಸುವ ಅಗತ್ಯವಿದೆ’ ಎಂದು ಅವರು ಆಗ್ರಹಿಸಿದ್ದಾರೆ.

ಬ್ರಾಹ್ಮಣರು ಯಜ್ಞ- ಯಾಗಾದಿಗಳನ್ನು ನಡೆಸಿ, ಹಸು, ಕರುಗಳನ್ನು ಬಲಿಕೊಟ್ಟು ತಿನ್ನುತ್ತಿದ್ದರು ಎಂಬುದಕ್ಕೆ ಚರಿತ್ರೆಯಲ್ಲಿ ಆಧಾರಗಳಿವೆ. ಆದರೆ ಹೊಲೆಯ - ಮಾದಿಗರು ಮತ್ತು ಹಿಂದುಳಿದವರು ದುಷ್ಟರು- ನೀಚರು ಎಂಬುದಕ್ಕೆ ಸಾಕ್ಷಿ ಆಧಾರಗಳಿಲ್ಲ. ನೈಜ ಇತಿಹಾಸ ಮರೆಮಾಚುವುದಾದರೆ, ಮೂಲ ನಿವಾಸಿಗಳನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಚಿತ್ರಿಸಿರುವ ಸುಳ್ಳುಗಳನ್ನು ಪಠ್ಯ ಪುಸ್ತಕಗಳಿಂದ ತೆಗೆದು ಹಾಕಬೇಕಿದೆ’ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‌ಉನ್ನತ ಸಮಿತಿ ರಚಿಸಿ: ರಾಜ್ಯ ಸರ್ಕಾರಉನ್ನತ ಮಟ್ಟದ ವಿಷಯ ತಜ್ಞರ ಸಮಿತಿ ರಚಿಸಿ, ನೈಜ ಇತಿಹಾಸವನ್ನು ಪುನರ್ ಸ್ಥಾಪಿಸಲು ಕ್ರಮಕೈಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ದಲಿತ ಸಂಘರ್ಷ ಸಮಿತಿ ಮುಖಂಡರಾದ ದೊಡ್ಡಿಂದುವಾಡಿ ಸಿದ್ದರಾಜು, ಸಿ.ಎಂ.ಶಿವಣ್ಣ, ಮುಖಂಡರಾದ ಜಿ.ಎಂ.ಗಾಡ್ಕರ್, ಕೆ.ಎಂ.ನಾಗರಾಜು, ಆಲೂರು ನಾಗೇಂದ್ರ, ಎಂ.ಶಿವಮೂರ್ತಿ, ಆಲೂರು ಮಹದೇವಯ್ಯ, ಸುಭಾಷ್ ಮಾಡ್ರಳ್ಳಿ, ಬಂಗಾರಸ್ವಾಮಿ,ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಯ್ಯ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT