ಶನಿವಾರ, ಸೆಪ್ಟೆಂಬರ್ 25, 2021
30 °C
ಕೋವಿಡ್‌ ರೋಗಿಗಳ ಮನೆಗೆ ಭೇಟಿ, ಕುಟುಂಬದವರ ಆರೋಗ್ಯ ತಪಾಸಣೆ

ಚಾಮರಾಜನಗರ: 31ರವರೆಗೆ ಕ್ಷಯರೋಗ ಪತ್ತೆ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್-19ರಿಂದ ಗುಣಮುಖ ಹೊಂದಿದ ವ್ಯಕ್ತಿಗಳು ಕ್ಷಯ ರೋಗಕ್ಕೆ ತುತ್ತಾಗುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವುದರಿಂದ, ಅವರನ್ನೇ ಗುರಿಯಾಗಿಸಿಕೊಂಡು ಜಿಲ್ಲೆಯಾದ್ಯಂತ ಕ್ಷಯರೋಗ ಪತ್ತೆ ಆಂದೋಲನವನ್ನು ಆರೋಗ್ಯ ಇಲಾಖೆ ಆರಂಭಿಸಿದೆ.

ಸೋಮವಾರ (ಆ.16) ಆಂದೋಲನಕ್ಕೆ ಚಾಲನೆ ಸಿಕ್ಕಿದ್ದು, ಇದೇ 31ರವರೆಗೆ ನಡೆಯಲಿದೆ. ಕೋವಿಡ್‌ನಿಂದ ಗುಣಮುಖರಾದವರ ಮನೆಗಳಿಗೆ ಭೇಟಿ ನೀಡಲಿರುವ ಸಿಬ್ಬಂದಿ ಅವರನ್ನು ಹಾಗೂ ಅವರ ಕುಟುಂಬದ ಸದಸ್ಯರ ಆರೋಗ್ಯವನ್ನು ವಿಚಾರಿಸಲಿದ್ದಾರೆ. ಕ್ಷಯ ರೋಗ ಲಕ್ಷಣ ಇದೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ. ರೋಗ ಲಕ್ಷಣ ಇರುವವರ ಕಫದ ಮಾದರಿಯನ್ನು ಪಡೆದು ಪರೀಕ್ಷೆಗೆ ಒಳಡಿಸಲಿದ್ದಾರೆ. 

ಈ ವರ್ಷದ ಜನವರಿಯಿಂದ ಜುಲೈವರೆಗೆ 24,287 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 416 ಕ್ಷಯ ರೋಗದ ಪ್ರಕರಣಗಳು ಪತ್ತೆಯಾಗಿವೆ.

ಚಾಮರಾಜನಗರ ತಾಲ್ಲೂಕಿನಲ್ಲಿ 9,869, ಗುಂಡ್ಲುಪೇಟೆಯಲ್ಲಿ 4,878, ಕೊಳ್ಳೇಗಾಲದಲ್ಲಿ 7,831, ಯಳಂದೂರು ತಾಲೂಕಿನಲ್ಲಿ 1,719 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 

ಚಾಮರಾಜನಗರ ತಾಲ್ಲೂಕಿನಲ್ಲಿ 164, ಗುಂಡ್ಲುಪೇಟೆಯಲ್ಲಿ 66, ಕೊಳ್ಳೇಗಾಲದಲ್ಲಿ 147 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 39 ಕ್ಷಯರೋಗ ಪ್ರಕರಣಗಳು ಪತ್ತೆಯಾಗಿವೆ.

ಜಾಗತಿಕವಾಗಿ ಕೋವಿಡ್-19 ರಿಂದ ಚೇತರಿಸಿಕೊಂಡವರು ಕ್ಷಯ ರೋಗದ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋವಿಡ್‌ನಿಂದ ಗುಣಮುಖ ಹೊಂದಿದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸಾಧ್ಯತೆ ಮತ್ತು ಶ್ವಾಸಕೋಶ ಹಾನಿ ಉಂಟಾಗಿರುವ ಕಾರಣದಿಂದ ಕ್ಷಯರೋಗವು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಇದೇ 31ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಎನ್.ಮಹದೇವು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು