ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಕೂಲ ಹವಾಮಾನ: ಕಾವೇರಿ ತಳಿ ಇಳುವರಿ ಕುಂಠಿತ

ಗುಣಮಟ್ಟ ಕಳೆದುಕೊಂಡ ಬಯಲು ಸೀಮೆ ಕಾಫಿ
ನಾ.ಮಂಜುನಾಥಸ್ವಾಮಿ
Published 31 ಮೇ 2024, 4:37 IST
Last Updated 31 ಮೇ 2024, 4:37 IST
ಅಕ್ಷರ ಗಾತ್ರ

ಯಳಂದೂರು: ಈ ಬಾರಿ ಅತಿಯಾದ ತಾಪದಿಂದ ನಲುಗಿದ್ದ ಕಾಫಿ ಗಿಡಗಳಲ್ಲಿ ಕಾಯಿ ಉದುರುತ್ತಿದ್ದು ಇಳುವರಿ ಕುಸಿತಕ್ಕೆ ಕಾರಣವಾಗಿದೆ. ನೀರಾವರಿ ನಂಬಿದವರು ಸ್ಪ್ರಿಂಕ್ಲರ್ ಬಳಸಿ ಬೆಳೆ ಉಳಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.

ತಾಲ್ಲೂಕಿನ ಬಯಲು ಸೀಮೆಗಳಲ್ಲೂ ಕಾವೇರಿ ತಳಿಯ ಕಾಫಿ ಬೆಳೆಯಲಾಗುತ್ತದೆ. ಕಳೆದೆರಡು ವರ್ಷಗಳಿಂದ ಉಂಟಾದ ಹವಾಮಾನ ವೈಪರೀತ್ಯ ಮತ್ತು ತೇವಾಂಶದ ಕೊರತೆಯಿಂದ ಗುಣಮಟ್ಟದ ಕಾಯಿ ಗಿಡದಲ್ಲಿ ನಿಲ್ಲುತ್ತಿಲ್ಲ. ಈಗಾಗಲೇ ಹಣ್ಣಾಗಿದ್ದ ಕಾಫಿ ಈಚೆಗೆ ಸುರಿದ ಮಳೆಗೆ ಗೆಲ್ಲುಗಳಲ್ಲಿ ನಿಲ್ಲುತ್ತಿಲ್ಲ. ಈ ವರ್ಷವೂ ಕಾಫಿ ಕೈಸೇರದ ಆತಂಕದಲ್ಲಿ ಇದ್ದಾರೆ ಬಯಲು ಸೀಮೆ ಬೆಳೆಗಾರರು.

‘ಎರಡು ವರ್ಷಗಳಿಂದ ಅಧಿಕ ತಾಪಮಾನ ಗಿಡಗಳನ್ನು ಬಾಧಿಸಿತ್ತು. ಆಗಾಗ ಸುರಿದ ಅಕಾಲಿಕ ಮಳೆಯಿಂದ ಗಿಡದಲ್ಲಿ ಕಾಫಿ ಹೂ ಬಿಡುವುದು ವಿಳಂಬವಾಗಿತ್ತು. ತುಂತುರು ನೀರಾವರಿ ಮೂಲಕ ಹೂಗಟ್ಟುವಂತೆ ವ್ಯವಸ್ಥೆ ಮಾಡಲಾಗಿತ್ತು. ಅತಿಯಾದ ಬಿಸಿಲಿನಿಂದ ಕಾಯಿ ನಿರೀಕ್ಷಿಸಿದಷ್ಟು ಅರಳಲಿಲ್ಲ. ಪರಿಣಾಮ, ಈಗ ಸಸಿಯಲ್ಲಿ ಉಳಿದ ಕಾಫಿಯೂ ಹಣ್ಣಾಗಿ ಉದುರುತ್ತಿದೆ’ ಎಂದು ಮದ್ದೂರು ವಿಶ್ವನಾಥ್ ಹೇಳಿದರು. 

‘ಕಾಫಿ ನೆರಳು ಬಯಸುವ ಗಿಡ. ತೆಂಗು ಮತ್ತು ಅಡಿಕೆ ತೋಟಕ್ಕೆ ಅಂತರ ಬೆಳೆಯಾಗಿ ನಾಟಿ ಮಾಡಬಹುದು. ಇದರಿಂದ ಕಳೆಯ ನಿಯಂತ್ರಣವೂ ಸುಲಭ. ಅರೇಬಿಕಾ ತಳಿಗಳಾದ ಕಾವೇರಿ ಮತ್ತು ಚಂದ್ರಗಿರಿಯನ್ನು ಬಯಲು ಸೀಮೆಯಲ್ಲಿ ನಾಟಿ ಮಾಡಬಹುದು. ಕಾವೇರಿ ತಳಿ ಗಿಡ್ಡವಾಗಿದ್ದು ಅಧಿಕ ಸಾಂಧ್ರತೆಯಲ್ಲಿ ಉತ್ತಮ ಫಸಲನ್ನು ಪಡೆಯಬಹುದು. ಅತಿಯಾದ ಅನಾವೃಷ್ಟಿಯಿಂದ ಕೊಯ್ಲಿನ ಅವಧಿಯಲ್ಲಿ ವ್ತ್ಯತ್ಯಾಸ ಆಗಲಿದೆ’ ಎನ್ನುತ್ತಾರೆ ಬೆಳೆಗಾರರು.

‘ಕಳೆದ ವರ್ಷ ಗಿಡದಲ್ಲಿ ಹೂ ಬಿಡುವುದು ವಿಳಂಬವಾಗಿತ್ತು. ಇದರಿಂದ ಕೆಲವರು ತುಂತುರು ನೀರಾವರಿ ಮೂಲಕ ಬೆಳೆ ಉಳಿಸಿಕೊಂಡಿದ್ದರು. ಹೆಚ್ಚು ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಫಿ ಕೊಯ್ಲಿನಲ್ಲಿ ಕುಂಠಿತವಾಗಿತ್ತು. ಹಾಗಾಗಿ, ಈ ವರ್ಷ ಕಾಫಿಗೆ ಉತ್ತಮ ಧಾರಣೆ ಬರುವ ನಿರೀಕ್ಷೆಯಿಂದ ಬೆಳೆ ನಿರ್ವಹಣೆಗೆ ಮುಂದಾಗಿದ್ಧೇವೆ’ ಎಂದು ಬೆಳೆಗಾರ ಬೆಟ್ಟದ ನಾಗೇಂದ್ರ ಹೇಳಿದರು.

‘ಬಹುತೇಕರು ಕಾಫಿ ಜೊತೆ ಹಲಸು, ಹಣ್ಣಿನ ಸಸಿಗಳನ್ನು ನೆಟ್ಟಿದ್ದಾರೆ. ಹಾಗಾಗಿ, ನೀರಾವರಿ ಭೂಮಿಯಲ್ಲಿ ಕಾಫಿ ಗಿಡಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಸಿಕ್ಕರೆ ಬಹುಬೇಗ ಹೂ ಅರಳುತ್ತದೆ. ಒಟ್ಟಾರೆ, ಈ ವರ್ಷ ಮುಂಗಾರು ಹಂಗಾಮು ನಿಗದಿತ ಸಮಯದಲ್ಲಿ ಸುರಿಯುವ ನಿರೀಕ್ಷೆ ಇದ್ದು, ತೋಟಗಾರಿಕಾ ಬೆಳೆಗಳಲ್ಲಿ ಉತ್ತಮ ಫಸಲನ್ನು ನಿರೀಕ್ಷಿಸಬಹುದು’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು 'ಪ್ರಜಾವಾಣಿ’ಗೆ ತಿಳಿಸಿದರು. 

ಬಿಳಿಗಿರಿರಂಗನಬೆಟ್ಟದ ಕಾಫಿ ತೋಟಗಳಲ್ಲಿ ಗಿಡಗಳು ಹೂವು ಬಿಟ್ಟಿವೆ
ಬಿಳಿಗಿರಿರಂಗನಬೆಟ್ಟದ ಕಾಫಿ ತೋಟಗಳಲ್ಲಿ ಗಿಡಗಳು ಹೂವು ಬಿಟ್ಟಿವೆ
ಬನದಲ್ಲಿ ಕಾಫಿ ಹೂ ಮಳೆ
ಬಿಳಿಗಿರಿರಂಗನಬೆಟ್ಟ ಪ್ರದೇಶದಲ್ಲಿ ಸರಿಯಾದ ಸಮಯಕ್ಕೆ ಮಳೆ ಸುರಿದಿದೆ. ತಂಪು ವಾತಾವರಣ ಕಂಡುಬಂದಿದೆ.  ಮೇ ಅಂತ್ಯದಲ್ಲಿ ಸುರಿದ ಮಳೆಗೆ ಕಾಫಿ ಹೂ ಬಿಟ್ಟು ಜೂನ್ ಮೊದಲ ವಾರ ಕಾಯಿ ಮಿಡಿಗಾತ್ರ ಕಾಣಸಿಗಲಿದೆ. ‘ಅಕ್ಟೋಬರ್ ವೇಳೆಗೆ ಕೊಯ್ಲಿಗೆ ಬರುತ್ತದೆ. ಡಿಸೆಂಬರ್ ಕಾಫಿ ಸುಗ್ಗಿ ಮುಗಿಯುತ್ತದೆ. ಆದರೆ ಬಯಲು ಸೀಮೆಯಲ್ಲಿ ನೀರಾವರಿ ಪ್ರದೇಶದಲ್ಲಿ ಬಹುಬೇಗ ಹೂ ಬಿರಿದು ಕಾಳು ಕಟ್ಟುತ್ತದೆ. ಮುಂಗಾರು ಋತುವಿನಲ್ಲಿ ವ್ತ್ಯತ್ಯಾಸ ಕಂಡುಬಂದರೆ ಅಕಾಲಿಕ ಕಾಯಿ ಬಿಟ್ಟು ಫಸಲು ಉದುರಿ ಹೋಗುತ್ತದೆ’ ಎಂದು ಬೆಟ್ಟದ ಕಾಫಿ ಕೃಷಿಕ ಬೊಮ್ಮಯ್ಯ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT