ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸು, ಮೇಕೆ ಬೇರೆಡೆ ಸಾಗಿಸಲು ಸೂಚನೆ

ಕಾಡಿಗೆ ದನ–ಕರು ಬಿಟ್ಟರೆ ಕಾನೂನು ಕ್ರಮದ ಎಚ್ಚರಿಕೆ– ಗೋಪಿನಾಥಂ ಗ್ರಾಮಸ್ಥರ ಆಕ್ರೋಶ
Last Updated 23 ಡಿಸೆಂಬರ್ 2022, 6:03 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ‘ಗ್ರಾಮಸ್ಥರು ಸಾಗುವಳಿಗೆ ಬೇಕಾದಷ್ಟು ದನ ಮತ್ತು ಮೇಕೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಬೇರೆಡೆಗೆ ಸಾಗಿಸ ಬೇಕು. ಅರಣ್ಯದ ಒಳಗೆ ಜಾನುವಾರು ಗಳನ್ನು ಬಿಡಬಾರದು. ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಕಾವೇರಿ ವನ್ಯಜೀವಿ ವಲಯದ ಅಧಿಕಾರಿ ಗಳು ಗಡಿ ಗ್ರಾಮ ಗೋಪಿನಾಥಂ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ವಲಯ ಅರಣ್ಯಾಧಿ ಕಾರಿ ನೀಡಿರುವ ಸಾರ್ವಜನಿಕ ಪ್ರಕಟಣೆ ಗ್ರಾಮಸ್ಥರು, ರೈತ ಮುಖಂಡರನ್ನು ಕೆರಳಿಸಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾರದೊಳಗೆ ಪ್ರಕಟಣೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

‘ಡಿ. 17 ಮತ್ತು 18ರಂದು ಕೇಂದ್ರದ ಅರಣ್ಯ ಅಧಿಕಾರಿಗಳ ತಂಡ ಗೋಪಿನಾಥಂಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ವಲಯದಲ್ಲಿ ವೀಕ್ಷಣೆ ಮಾಡಿದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಕಂಡು ಬಂದಿರುವುದಕ್ಕೆ ಮೇಲಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳು ಕಾಡಿಗೆ ಹೊಂದಿಕೊಂಡಿವೆ. ಹಲವು ಕುಟುಂಬಗಳಿಗೆ ಜಾನುವಾರುಗಳ ಸಾಕಣೆ ಜೀವನಾಧಾರವಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಲ್ಲಿನ ಗ್ರಾಮಸ್ಥರಿಗೆ ಮೂಲ ಸೌಕರ್ಯ ವನ್ನು ಕಲ್ಪಿಸುವುದು ಬಿಟ್ಟು, ಒಕ್ಕಲೆಬ್ಬಿಸಲು ಹುನ್ನಾರ ನಡೆಸಲಾ ಗುತ್ತಿದೆ’ ಎಂದು ಜನರು ದೂರಿದ್ದಾರೆ.

‘ತಮಗೆ ಬೇಕಾದಷ್ಟು ಜಾನುವಾರು ಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಬೇರೆ ಕಡೆಗೆ ಸಾಗಿಸಬೇಕು ಎಂದು ಸೂಚಿಸಿರುವುದು ಎಷ್ಟರ ಮಟ್ಟಿಗೆ ಸರಿ? ಕಾಡಿನೊಳಗೆ ವಾಸಿಸುವವರಿಗೆ ಎಲ್ಲ ಹಕ್ಕುಗಳನ್ನು ಕೊಟ್ಟಿರುವಾಗ ಅರಣ್ಯ ಇಲಾಖೆಯವರು ಅಮಾನುಷವಾಗಿ ನಡೆದುಕೊಳ್ಳುತ್ತಿದ್ದಾರೆ. ವಾರದೊಳಗೆ ಈ ಪ್ರಕಟಣೆ ವಾಪಸ್‌ ಪಡೆಯದಿದ್ದರೆ, ಉಗ್ರವಾದ ಹೋರಾಟ ಮಾಡುತ್ತೇವೆ. ಮಹದೇಶ್ವರ ಬೆಟ್ಟಕ್ಕೆ ಜನಪ್ರತಿನಿಧಿಗಳು ಭೇಟಿ ನೀಡುವುದಕ್ಕೆ ಬಿಡುವುದಿಲ್ಲ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಎಚ್ಚರಿಸಿದ್ದಾರೆ.

‘ಮಲೆ ಮಹದೇಶ್ವರ ವನ್ಯಧಾಮದ ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಇಲ್ಲ. ಈ ಭಾಗದ ಜನರು ತಲೆಮಾರುಗಳಿಂದ ವ್ಯವಸಾಯ, ಜಾನುವಾರುಗಳು ಮತ್ತು ಅರಣ್ಯವನ್ನು ನಂಬಿ ಜೀವನವನ್ನು ಸಾಗಿಸುತಿದ್ದೇವೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳನ್ನು ಕಾಡಿಗೆ ಬಿಡಬಾ ರದು ಎಂದು ಹೇಳುವುದಾದರೆ, ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ಇದು.ಪ್ರಕೃತಿಯನ್ನೇ ಆರಾಧಿಸುವ ವರು ನಾವು. ಅರಣ್ಯಕ್ಕೂ ಜಾನುವಾರು ಗಳಿಗೂ ಇರುವ ಕೊಂಡಿಯನ್ನು ಅರಣ್ಯಾಧಿಕಾರಿಗಳು ಕಿತ್ತೊಗೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಗ್ರಾಮಸ್ಥ ಕೆ.ವಿ. ಮಹದೇವಸ್ವಾಮಿ ದೂರಿದರು.

ವನ್ಯಪ್ರಾಣಿಗಳ ದಾಳಿಗೆ ಕಾರಣ?

‘ಕಾಡಂಚಿನ ಪ್ರದೇಶಗಳಲ್ಲಿ ದನ–ಕರುಗಳು, ಕುರಿ– ಮೇಕೆಗಳ ಓಡಾಟ ಹೆಚ್ಚಿದ್ದರೆ ಹುಲಿ, ಚಿರತೆಯಂತಹ ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಅವುಗಳ ಮೇಲೆ ದಾಳಿ ಮಾಡುತ್ತಿರುತ್ತವೆ. ಇದರಿಂದ ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ’ ಎಂಬುದು ಅಧಿಕಾರಿಗಳ ಹೇಳಿಕೆ.

ಇದರ ನಡುವೆಯೇ ವನ್ಯಧಾಮ ಅಂಚಿನಲ್ಲಿರುವ ಗ್ರಾಮಗಳಲ್ಲಿ ಹೊರಗಡೆ ವ್ಯಕ್ತಿಗಳು ಸ್ಥಳೀಯರ ಮೂಲಕ ಕುರಿ ಮೇಕೆಗಳನ್ನು ಸಾಕಣೆ ಮಾಡುವ ಉದ್ಯಮ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆ ಕಲೆ ಹಾಕಿದೆ.

ಹನೂರು ತಾಲ್ಲೂಕಿನ ಕೆವಿಎನ್ ದೊಡ್ಡಿಯಲ್ಲಿ ಚಿರತೆ ಹಾವಳಿ ತಡೆಗಟ್ಟುವ ಸಲುವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

‘ಮೈಸೂರಿನ ವ್ಯಕ್ತಿಯೊಬ್ಬರು ಭಾರಿ ಸಂಖ್ಯೆಯಲ್ಲಿ ಮೇಕೆಗಳನ್ನು ಖರೀದಿಸಿ ಅವುಗಳನ್ನು ಇಲ್ಲಿಗೆ ತಂದು ಬಿಟ್ಟು ಸ್ಥಳೀಯರಿಗೆ ಕೂಲಿ ನೀಡಿ ಸಾಕುತ್ತಿದ್ದಾರೆ. ಕೂಲಿಗಾಗಿ ಮೇಕೆ, ಹಸುಗಳನ್ನು ಮೇಯಿಸುತ್ತಿರುವವರಿಗೆ ಅಧಿಕಾರಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಅರಣ್ಯ ರಕ್ಷಣೆಗೆ ಸಹಕಾರ ಬೇಕು’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (‌ಡಿಸಿಎಫ್‌) ನಂದೀಶ್, ‘ನಮ್ಮದು ರಕ್ಷಿತಾರಣ್ಯ. ಅರಣ್ಯದ ಜೊತೆಗೆ ಪ್ರಾಣಿ ಸಂಪತ್ತನ್ನೂ ರಕ್ಷಣೆ ಮಾಡಬೇಕಾಗಿದೆ. ಇದು ಹೊಸದಾಗಿ ಮಾಡಿರುವ ಸಾರ್ವಜನಿಕ ಪ್ರಕಟಣೆ ಅಲ್ಲ. ಪ್ರತಿಯೊಬ್ಬರೂ ಅರಣ್ಯ ರಕ್ಷಣೆಯ ನಿಯಮ ಪಾಲನೆ ಮಾಡಬೇಕು. ಇಲಾಖೆಯು ಗಡಿಭಾಗದಲ್ಲಿ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಸ್ಥಳೀಯರಿಗೆ ಅನುಕೂಲ ಕಲ್ಪಿಸುವ ಚಿಂತನೆಯೂ ನಮಗಿದೆ. ಗ್ರಾಮಸ್ಥರು ಸಹಕಾರ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT