ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ |BSP ಅಭ್ಯರ್ಥಿ ಮಹದೇವಯ್ಯ ನಾಮಪತ್ರ 4ಕ್ಕೆ

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ವಿರುದ್ಧ ನಾಗಯ್ಯ ವಾಗ್ದಾಳಿ
Published 1 ಏಪ್ರಿಲ್ 2024, 4:26 IST
Last Updated 1 ಏಪ್ರಿಲ್ 2024, 4:26 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿ ಸಿ.ಮಹದೇವಯ್ಯ ಅವರು ಇದೇ 4ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಎನ್‌.ನಾಗಯ್ಯ, ‘ಮಹದೇವಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಆಯ್ಕೆ ಮಾಡಿದ್ದಾರೆ. ಯಳಂದೂರು ತಾಲ್ಲೂಕಿನ ಚಂಗಚಹಳ್ಳಿ ಗ್ರಾಮದವರಾದ ಮಹದೇವಯ್ಯ ಅವರು ತಹಶೀಲ್ದಾರ್‌ ಆಗಿ ಕೊಳ್ಳೇಗಾಲ, ಅನೇಕಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ.  ರಾಜಕೀಯವಾಗಿ ಜನಸೇವೆ ಮಾಡಲು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ’ ಎಂದರು. 

‘4ರಂದು ನಗರದ ಸಾರನಾಥ ಭೌದ್ದವಿಹಾರದಲ್ಲಿ ಬುದ್ದ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಅಲ್ಲಿಂದ ಮೆರವಣಿಗೆ ಹೊರಟು ಸತ್ಯಮಂಗಲ ರಸ್ತೆ, ಡೀವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು. 

ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ನಾಗಯ್ಯ, ‘ಪ್ರತಿ ಚುನಾವಣೆಯಲ್ಲೂ ಈ ಪಕ್ಷಗಳು ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡುತ್ತಿವೆ. ಭ್ರಷ್ಟಾಚಾರ ನಡೆಸುತ್ತಿವೆ. ಅಧಿಕಾರಕ್ಕೆ ಬಂದ ನಂತರ ಜನರ ಸಂಕಷ್ಠಗಳಿಗೆ ಸ್ಪಂದಿಸದೆ ಅನ್ಯಾಯ ಮಾಡುತ್ತಿವೆ. ಹೀಗಾಗಿ ಸಂವಿಧಾನದ ತತ್ವ, ಸಿದ್ದಾಂತ, ಆಶಯಗಳ ಅಡಿಯಲ್ಲಿ ಕೆಲಸ ಮಾಡುತ್ತಿರುವ ಬಿಎಸ್‌ಪಿಯ ಆನೆ ಗುರುತಿಗೆ ಮತ ಹಾಕುವ ಮೂಲಕ ಪಕ್ಷದ ಅಭ್ಯರ್ಥಿ ಮಹದೇವಯ್ಯ ಅವರನ್ನು ಗೆಲ್ಲಿಸಬೇಕು’ ಎಂದು ಕೋರಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಉಸ್ತುವಾರಿ ಪ್ರಕಾಶ್ ಅಮಚವಾಡಿ, ಜಿಲ್ಲಾ ಸಂಯೋಜಕ ರಾಜಶೇಖರ್, ನಗರ ಘಟಕ ಅಧ್ಯಕ್ಷ ರಂಗಸ್ವಾಮಿ ಭಾಗವಹಿಸಿದ್ದರು.

‘ಒಂದು ಅವಕಾಶ ಕೊಡಿ’

ಅಭ್ಯರ್ಥಿ ಸಿ.ಮಹದೇವಯ್ಯ ಮಾತನಾಡಿ ‘ಕಾಂಗ್ರೆಸ್ ಬಿಜೆಪಿ ಜೆಡಿಎಸ್‌ಗಳು ಸಂವಿಧಾನ ಉಳಿಸುವ ಕೆಲಸ ಮಾಡುತ್ತಿಲ್ಲ. ಸಂವಿಧಾನ ನಾಶ ಮಾಡುತ್ತಿವೆ.  ಸಂವಿಧಾನದ ಆಶಯಗಳ ಬಗ್ಗೆ ಬದ್ಧತೆ ಹೊಂದಿರುವ ಬಿಎಸ್‌ಪಿಯನ್ನು ಕ್ಷೇತ್ರದ ಮತದಾರರು ಬೆಂಬಲಿಸುವ ನನಗೊಂದು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು. ‘ಕಾಂಗ್ರೆಸ್ ದೇಶದಲ್ಲಿ 65 ವರ್ಷಗಳ ಕಾಲ ಆಡಳಿಸಿ ಸಂವಿಧಾನದಲ್ಲಿ ಹತ್ತಾರು ಕಾಯ್ದೆಗಳಿಗೆ ತಿದ್ದುಪಡಿ ಮಾಡಿದರೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ ಎಸ್‌ಟಿಗಳಿಗೆ ಮೀಸಲಿಟ್ಟ ಅನುದಾನದಲ್ಲಿ ₹11500 ಕೋಟಿ ಬಳಕೆ ಮಾಡಿ ಅನ್ಯಾಯ ಮಾಡಿದೆ.  ಪ್ರಧಾನಿ ಮೋದಿ ನೇತೃತ್ವ ಕೇಂದ್ರ ಸರ್ಕಾರ ಯಾರಿಗೂ ಉದ್ಯೋಗ ನೀಡಿಲ್ಲ.  ಹೊರದೇಶದಿಂದ ಕಪ್ಪುಹಣದ ತಂದು ಯಾರ ಖಾತೆಗೂ ಒಂದು ನಯಾಪೈಸೆ ಜಮಾ ಮಾಡಿಲ್ಲ’ ಎಂದು ದೂರಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT