ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಈರುಳ್ಳಿ ಬೆಲೆ ಏರುಮುಖ, ತೊಗರಿಕಾಯಿ ಸುಗ್ಗಿ

Published 30 ಅಕ್ಟೋಬರ್ 2023, 16:17 IST
Last Updated 30 ಅಕ್ಟೋಬರ್ 2023, 16:17 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ತರಕಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್‌ ಏರಿಕೆ ಕಂಡಿದೆ. ತೊಗರಿಕಾಯಿ ಸೀಸನ್‌ ಆರಂಭವಾಗಿದ್ದು, ತರಕಾರಿ ಮಳಿಗೆಗಳಲ್ಲಿ, ತಳ್ಳುಗಾಡಿಗಳಲ್ಲಿ ಲಭ್ಯವಿದೆ.

ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಆಯುಧಪೂಜೆ ಬಳಿಕ ಹೂವುಗಳ ಧಾರಣೆ ಇಳಿದಿದೆ. ಮಾಂಸ ಧಾರಣೆ ಸ್ಥಿರವಾಗಿದೆ. 

ಟೊಮೆಟೊ ಬೆಲೆ ₹100ಕ್ಕೆ ಏರಿ ಇಳಿದಾಗ ಈರುಳ್ಳಿ ಬೆಲೆ ನಿಧಾನವಾಗಿ ಜಾಸ್ತಿಯಾಗಲು ಆರಂಭಗೊಂಡಿತ್ತು. ಆದರೆ, ಮೂರು ತಿಂಗಳುಗಳಿಂದ ಬೆಲೆ (₹25–₹30) ಸ್ಥಿರವಾಗಿತ್ತು. ಈ ವಾರದಿಂದ ದಿಢೀರ್‌ ಆಗಿ ಏರಿಕೆಯಾಗಿದ್ದು, ಗುಣಮಟ್ಟದ ಈರುಳ್ಳಿಗೆ ₹60ರಿಂದ ₹70ರವರೆಗೆ ಬೆಲೆ ಇದೆ. ಸಣ್ಣ ಗಾತ್ರದ ಹಾಗೂ ಗುಣಮಟ್ಟ ಕಡಿಮೆ ಇರುವ ಈರುಳ್ಳಿಗೆ ಸ್ವಲ್ಪ ಕಡಿಮೆ ಬೆಲೆ ಇದೆ.

ಹಾಪ್‌ಕಾಮ್ಸ್‌ನಲ್ಲಿ ಸೋಮವಾರ ಕೆಜಿಗೆ ₹60 ಇತ್ತು. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.  

ಹಿಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ತರಕಾರಿ ಮಾರುಕಟ್ಟೆಗೆ ತೊಗರಿಕಾಯಿ ಲಗ್ಗೆ ಇಟ್ಟಿದೆ. ಜಿಲ್ಲೆಯ ರೈತರು ತೊಗರಿಕಾಯಿ ಬೆಳೆಯುತ್ತಿದ್ದು, ಸ್ಥಳೀಯ ಮಾರುಕಟ್ಟೆ ಹಾಗೂ ಹೊರಗಡೆಗೂ ಪೂರೈಕೆಯಾಗುತ್ತಿದೆ.

‘ನಗರದಲ್ಲಿ ಕೆಜಿ ತೊಗರಿಕಾಯಿಗೆ ₹60 ಇದೆ. ಎರಡು ವಾರಗಳಿಂದ ಹಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಗ್ರಾಹಕರಿಂದ ಬೇಡಿಕೆಯೂ ಇದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು. 

ಟೊಮೆಟೊ ತುಟ್ಟಿ: ಇತರೆ ತರಕಾರಿಗಳ ಪೈಕಿ ಟೊಮೆಟೊ ಬೆಲೆ ಸ್ವಲ್ಪ ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹20 ಇದೆ. ಕಳೆದವಾರ ₹15 ಇತ್ತು. ಉಳಿದಂತೆ ಇತರೆ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿಲ್ಲ.

ಬೀನ್ಸ್‌ ಕೆಜಿಗೆ ₹60 ಇದೆ. ಕ್ಯಾರೆಟ್‌ ₹30ಕ್ಕೆ ಸಿಗುತ್ತಿದೆ. ಹಸಿಮೆಣಸಿನಕಾಯಿಗೆ ₹30 ಇದೆ. ದಪ್ಪಮೆಣಸಿಕಾಯಿಗೆ ಕೆಜಿಗೆ ₹80 ಹೇಳುತ್ತಿದ್ದಾರೆ.  ಹಾಗಲಕಾಯಿಗೆ ₹60 ಇದೆ. 

ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಸೇಬು, ದಾಳಿಂಬೆಯ ದುಬಾರಿ ದರ (₹160) ಮುಂದುವರಿದಿದೆ. ಕಪ್ಪು ದ್ರಾಕ್ಷಿ ಮತ್ತು ಹಸಿರು ದ್ರಾಕ್ಷಿಯ ಬೆಲೆ ಕ್ರಮವಾಗಿ ₹120 ಮತ್ತು 160 ಇದೆ. ಕೆಜಿ ಮೂಸಂಬಿ, ಕಿತ್ತಳೆ ₹60ಕ್ಕೆ ಸಿಗುತ್ತಿದೆ. ಏಲಕ್ಕಿ ಬಾಳೆಹಣ್ಣಿನ ಬೆಲೆಯಲ್ಲಿ ಮತ್ತೆ ₹10 ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹60 ಇದೆ. ಪಚ್ಚೆ ಬಾಳೆ ಹಣ್ಣಿನ ಧಾರಣೆ (₹40) ಸ್ಥಿರವಾಗಿದೆ.  

ಹೂವಿಗೆ ಬೇಡಿಕೆ ಕುಸಿತ
ಆಯುಧಪೂಜೆ ವಿಜಯದಶಮಿ ಸಂದರ್ಭದಲ್ಲಿ ಏರಿಕೆ ಕಂಡಿದ್ದ ಹೂವುಗಳ ಧಾರಣೆ ಹಬ್ಬದ ನಂತರ ಗಣನೀಯವಾಗಿ ಇಳಿಕೆಯಾಗಿದೆ.  ಚೆಂಡುಹೂ ಸೇವಂತಿಗೆ ಸುಗಂಧರಾಜ ಹೂವುಗಳನ್ನು ಕೇಳುವವರೇ ಇಲ್ಲದಂತಾಗಿದೆ.  ನಗರದ ಚೆನ್ನಿಪುರದಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕೆಜಿ ಕನಾಂಬರಕ್ಕೆ ₹400ರಿಂ ₹500ರವರೆಗೆ ಬೆಲೆ ಇತ್ತು. ಮಲ್ಲಿಗೆಗೆ ₹200ವರೆಗೆ ಇತ್ತು. ಸೇವಂತಿಗೆಗೆ ಕೆಜಿಗೆ ₹10ರಿಂದ ₹20 ಇತ್ತು. ಚೆಂಡು ಹೂವಿನ ಗರಿಷ್ಠ ಬೆಲೆ ₹10. ಸುಗಂಧರಾಜ ಹೂವಿಗೆ ಕೆಜಿಗೆ ₹30 ಧಾರಣೆ ಇತ್ತು. ಬಟನ್‌ ಗುಲಾಬಿಯೂ ₹80ಕ್ಕೆ ಸಿಗು‌ತ್ತಿತ್ತು.  ‘ಹಬ್ಬದ ಬಳಿಕ ಬೇಡಿಕೆ ದಿಢೀರ್‌ ಕುಸಿದಿದೆ. ಹಾಗಾಗಿ ಬೆಲೆ ಕಡಿಮೆಯಾಗಿದೆ. ದೀಪಾವಳಿವರೆಗೆ ಇದೇ ಪರಿಸ್ಥಿತಿ ಇರಲಿದೆ. ದೀಪಾವಳಿ ಆ ಬಳಿಕ ಕಾರ್ತಿಕ ಮಾಸ ಇರುವುದರಿಂದ ಬೇಡಿಕೆ ಹೆಚ್ಚಾಗಲಿದ್ದು ಬೆಲೆಯೂ ಜಾಸ್ತಿಯಾಗಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT