ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಲು ಏರಿದಷ್ಟೂ ಮಾರಮ್ಮನಿಗೆ ತಂಪು!

ಗ್ರಾಮ ದೇವತೆ ಹಬ್ಬ, ಕೊಂಡೋತ್ಸವಕ್ಕೆ ಮುನ್ನುಡಿ ಬರೆದ ‘ಶಿವರಾತ್ರಿ’
ನಾ.ಮಂಜುನಾಥಸ್ವಾಮಿ
Published 10 ಮಾರ್ಚ್ 2024, 6:18 IST
Last Updated 10 ಮಾರ್ಚ್ 2024, 6:18 IST
ಅಕ್ಷರ ಗಾತ್ರ

ಯಳಂದೂರು: ದ್ರಾವಿಡ ಸಂಸ್ಕೃತಿಯ ಅನನ್ಯ ರೂಪಕಗಳಾದ ಊರ ದೇವತೆ ಹಬ್ಬಗಳಿಗೆ ಪುರಾಣ ಮತ್ತು ಚರಿತ್ರೆಯ ಹೊಳಪಿದೆ. ಜನಪದ ಮತ್ತು ಸಾಂಸ್ಕೃತಿಕ ಬೇರನ್ನು ಹಿಡಿದಿಟ್ಟಿರುವ ಊರೊಟ್ಟಿನ ಉತ್ಸವಗಳು ನಂಬಿಕೆ, ಸಂಪ್ರದಾಯ ಮತ್ತು ಮಾನವೀಯ ಮುಖಗಳನ್ನು ಒಳಗೊಂಡಿದೆ. ಪೂರ್ವಜರು ಮತ್ತು ಹಿರಿಯರ ಮುನ್ನೋಟದಲ್ಲಿ ಪ್ರಶ್ನಾತೀತ ‘ದೇವಿ’ ಈಗಲೂ ನಮ್ಮನ್ನು ಪೊರೆಯುತ್ತಾಳೆ ಎಂಬ ಭಕ್ತಿ ಭಾವಗಳ ಸಂಗಮದಲ್ಲಿ ಈ ನೆಲದ ಅಸ್ಮಿತೆಯ ‘ಮಾರಿ ಹಬ್ಬ’ದ ಸಡಗರವನ್ನು ವಿಜೃಂಭಿಸಿದೆ.

ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಶ್ರಾವಣ ಮಸದ ಆಸುಪಾಸಿನ ದಿನಗಳಲ್ಲಿ ಹಬ್ಬ ಜೋರಾಗಿ ಕಳೆಗಟ್ಟುತ್ತದೆ. ಈ ಹಬ್ಬಗಳಿಗೆ ನಾಂದಿ ಹಾಡುವುದು ಶಿವರಾತ್ರಿ. ಕೊಂಡೋತ್ಸವಗಳು, ಮಾರಮ್ಮನ ಜಾತ್ರೆ, ಊರ ಹಬ್ಬಗಳು ಶಿವರಾತ್ರಿಯ ನಂತರ ಬಿರುಸು ಪಡೆಯುತ್ತವೆ. 

ಈ ಪೈಕಿ ಮಾರಿ ಹಬ್ಬಗಳ ವೈಶಿಷ್ಟ್ಯವೇ ಬೇರೆ. ಒಂದೊಂದು ಹಳ್ಳಿಯಲ್ಲೂ ಭಕ್ತಿ ಮತ್ತು ಶಕ್ತಿಗೆ ಹೆಸರಾದ ಮಾರಿಗಳಿವೆ. ಕುಂಟುಮಾರಿ, ಬಿಸಿಲುಮಾರಿ, ಊರಮಾರಿ, ಮಕ್ಕಳ ಮಾರಿ ನಾಮಾಂಕಿತದಲ್ಲಿ ನೆಲೆಗೊಂಡ ದೇವತೆಗಳು ಇದ್ದಾರೆ. ವರ್ಷಕ್ಕೆ ಒಮ್ಮೆ ಕೆಲವೊಮ್ಮೆ ಐದು ವಸಂತಗಳಿಗೆ ಗ್ರಾಮ ದೇವತೆ ಎಚ್ಚರಗೊಳ್ಳುವುದಿದೆ!

‘ಮಾರಿಹಬ್ಬಕ್ಕೆ ಗ್ರಾಮವೇ ಸಿಂಗಾರಗೊಳ್ಳುತ್ತದೆ. ಇದಕ್ಕಾಗಿ ಊರೊಟ್ಟಿನ ಜನರು ಹಲವು ತಿಂಗಳಿಂದ ಹಣ, ಆಹಾರ, ಕುರಿ, ಆಡು, ಹೊಸಬಟ್ಟೆ, ಒಡವೆ ಹೊಂದಿಸಿಕೊಳ್ಳುತ್ತಾರೆ. ಅಕ್ಕ-ತಂಗಿಯರ ಬಳಗ, ನೆಂಟರಿಷ್ಟರನ್ನು ಒಟ್ಟಾಗಿಸಿ, ಪ್ರಾಣಿ ಬಲಿಯೊಂದಿಗೆ ಮಾಂಸದ ಊಟದ ಭರ್ಜರಿ ರಸದೌತಣ ನೀಡುತ್ತಾರೆ. ಈಚೆಗೆ ಬಂದು ಬಾಂಧವರಿಗೆ ಮದ್ಯವನ್ನು ಪೂರೈಸಬೇಕಾದ ಹೊರೆಯೂ ಮನೆಯೊಡೆಯನ ಮೇಲೆ ಬೀಳುತ್ತದೆ. ಇದರಿಂದ ಹಬ್ಬದ ಸಡಗರ, ಒಮ್ಮೊಮ್ಮೆ ಕುಡುಕರ ಕುಣಿತವಾಗುವ ಅಪಾಯವೂ ಬರುತ್ತದೆ’ ಎಂದು ಯಳಂದೂರಿನ ಸುರೇಶ್ ಕುಮಾರ್ ಹೇಳಿದರು. 

ಸಾಂಸ್ಕೃತಿಕ ಮೆರಗು: ಹಬ್ಬಕ್ಕೆ ಬುಹುಮುಖ ಆಯಾಮವೂ ಇದೆ. ಜಾತ್ರೆ, ಕೊಂಡದ ಸಂದರ್ಭದಲ್ಲಿ ಮಾರಿ ಕುಣಿತ, ದೊಣ್ಣೆವರಸೆ, ಕತ್ತಿವರಸೆ, ನಂದಿಕಂಬ ಕುಣಿತ, ಸತ್ತಿಗೆ, ಸೂರಿಪಾನಿ, ಕೊಂಬು ಕಹಳೆ ಧ್ವನಿ  ದೇವಿಯನ್ನು ಶಾಂತಗೊಳಿಸುತ್ತದೆ ಎಂಬ ನಂಬಿಕೆ ಇದೆ. ನೂರಾರು ಜಾನಪದ ನೃತ್ಯ, ಹಾಡುಗಳು ಮಾರಮ್ಮನನ್ನು ನೋಡಿಯೇ ಕಟ್ಟಲಾಗಿದೆ. ಆದರೆ, ಆಧುನಿಕ ಸೌಂಡ್ ಸಿಸ್ಟಮ್‌ ಮತ್ತು ಬೋರ್ಡ್ ಬ್ಯಾನರ್‌ಗಳ ಭರಾಟೆ ನಡುವೆ ಹಬ್ಬದ ಹಳೆ ವೈಭವದ ಕಳೆ ಕಳೆದುಕೊಳ್ಳುತ್ತಿರುವ ಆತಂಕವೂ ಕಾಡುತ್ತಿದೆ. 

ಊಟೋಪಚಾರದ ವೈವಿಧ್ಯ: ಮಾರಿ ಹಬ್ಬಗಳ ಸಂಭ್ರಮ, ಸಡಗರಗಳನ್ನು ಉಳಿಸುವಲ್ಲಿ ತಳ ಸಮುದಾಯದ ಜನ ಸಂಸ್ಕೃತಿಯ ದಟ್ಟ ಪ್ರಭಾವ ಇದೆ. ದ್ರಾವಿಡ ಮತ್ತು ಆರ್ಯ ಜನಾಂಗಗಳು ಶಕ್ತಿ ದೇವತೆಗಳನ್ನು ಪೂಜಿಸುವುದರಲ್ಲೂ ಭಿನ್ನತೆ ಇದೆ. ‌ಬಹುತೇಕರು ಮಾಂಸದ ಊಟವನ್ನು ಸಿದ್ಧಪಡಿಸಿದರೆ, ಕೆಲವರು ಸಾತ್ವಿಕ ಅಡುಗೆಯನ್ನು ಎಡೆಗೆ ಇಡುತ್ತಾರೆ. ಹಬ್ಬದ ಸಿದ್ಧತೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ, ನೂರಾರು ಜನರಿಗೆ ಅನ್ನ ದಾನ ಮಾಡುವ ಮೂಲಕ ದೇವರನ್ನು ಸಂಪ್ರೀತಗೊಳಿಸುತ್ತಾರೆ.

ಗೂಳಿಪುರದ ಬಿಸಿಲು ಮಾರಮ್ಮ
ಗೂಳಿಪುರದ ಬಿಸಿಲು ಮಾರಮ್ಮ

ಗ್ರಾಮ ಗ್ರಾಮಗಳಲ್ಲಿ ಇನ್ನು ಉತ್ಸವ ಕೊಂಡೋತ್ಸವ, ಮಾರಿ ಹಬ್ಬ ಹೆಚ್ಚು ಗ್ರಾಮಸ್ಥರನ್ನು ಒಗ್ಗೂಡಿಸುವ ಜಾತ್ರೆಗಳು

ಹಬ್ಬಕ್ಕೆ ವೈಜ್ಞಾನಿಕ ದೃಷ್ಟಿ ಗ್ರಾಮೀಣ ಜನರು ಹಬ್ಬ ಕೊಂಡ ಜಾತ್ರೆ ತೇರು ಉತ್ಸವಗಳನ್ನು ಫೆಬ್ರುವರಿ-ಏಪ್ರಿಲ್ ನಡುವೆ  ಹಬ್ಬದ ಸಂಭ್ರಮ ಮುಗಿಯುವಂತೆ ಸಂಯೋಜಿಸುತ್ತಾರೆ. ಈ ಸಮಯ ಬಿಸಿಲು ಹೆಚ್ಚು. ವಿರಾಮದ ಸಮಯ ಈ ಸಂದರ್ಭ ಹಬ್ಬದ ಹೆಸರಿನಲ್ಲಿ ಮನೆಯ ಅಲಂಕಾರ ಕುಟುಂಬಕ್ಕೆ ಬೇಕಾದ ವಸ್ತ್ರ ಹಬ್ಬಕ್ಕೆ ಬೇಕಾದ ದಿನಸಿಯನ್ನು ಸಂಗ್ರಹಿಸಿಕೊಳ್ಳುವ ವೈಚಾರಿಕ ಪ್ರಜ್ಞೆಯೂ ಹಿರಿಯರಿಗೆ ತಿಳಿದಿತ್ತು.  ‘ಹಿಂದಿನ ಕಾಲದಲ್ಲಿ ಬೇಸಿಗೆ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿತ್ತು. ಈ ವೇಳೆ ಗ್ರಾಮೀಣರು ಮನೆಯನ್ನು ಶುದ್ಧಗೊಳಿಸಿ ಮಿಂದು ಮಡಿಯುಟ್ಟು ದೇವತೆಗಳಿಗೆ ತಂಪಿನ ಆರತಿ ಇಡುತ್ತಿದ್ದರು. ಇದರಿಂದ ಕಾಯಿಲೆ-ಕಸಾಲೆ ವಾಸಿಯಾಗುತ್ತಿತ್ತು. ಕೆಲವರು ತಮ್ಮೂರಿನ ಮಾರಮ್ಮನಿಗೆ ಹರಕೆ ಕಟ್ಟಿಕೊಂಡು ಕುರಿ ಕೋಳಿ ತಂಬಿಟ್ಟು ಅರ್ಪಿಸುತ್ತಿದ್ದರು. ಇಂತಹ ಅಲೌಖಿಕ ಸಂಗತಿಗಳೇ ಮುಂದೆ ದೇವಿಯ ಆರಾಧನೆಗೆ ಮುನ್ನುಡಿ ಬರೆದವು’ ಎಂದು ಚಿಂತಕ ಅಂಬಳೆ ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT