ಬುಧವಾರ, ಜೂನ್ 16, 2021
23 °C

ಚಾಮರಾಜನಗರ: ಸ್ವಯಂ ಬೆಳೆ ಸಮೀಕ್ಷೆ; ಜಾಗೃತಿ ಮೂಡಿಸಿದ ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಅವರು ಸೋಮವಾರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಕೃಷಿ ಜಮೀನುಗಳಿಗೆ ಭೇಟಿ ನೀಡಿ, ರೈತರು ಸ್ವಯಂ ಆಗಿ ಮೊಬೈಲ್‌ ಆ್ಯಪ್‌ ಮೂಲಕ ಮಾಡಬೇಕಾದ ಬೆಳೆ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಿದರು. ಸಮೀಕ್ಷೆಯ ಬಗ್ಗೆ ರೈತರಿಗೆ ಖುದ್ದಾಗಿ ಪ್ರತ್ಯಾಕ್ಷಿಕೆ ತೋರಿಸಿದರು. 

ತಾಲ್ಲೂಕಿನ ಹರದನಹಳ್ಳಿ ಹೋಬಳಿಯ ಬಂಡಿಗೆರೆ ಗ್ರಾಮದ ರೈತ ರಾಮಚಂದ್ರ ಅವರ ಜಮೀನಿಗೆ ಭೇಟಿ ನೀಡಿದ ಡಾ.ಎಂ.ಆರ್. ರವಿ ಅವರು, ಅಲ್ಲಿ ಬೆಳೆಯಲಾಗಿದ್ದ ಬಾಳೆ ಹಾಗೂ ಅರಿಸಿನ ಬೆಳೆಯ ಸಮೀಕ್ಷೆ ಮಾಡುವ ಪ್ರಾತ್ಯಕ್ಷಿಕೆ ನೀಡಿದರು. ರೈತರು ತಮ್ಮ ಬೆಳೆಯನ್ನು ತಾವೇ ಬೆಳೆಯನ್ನು ಸಮೀಕ್ಷೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿಕೊಟ್ಟರು.

‘ಜಮೀನಿನಲ್ಲಿ ಯಾವ ಬೆಳೆಯನ್ನು ಎಷ್ಟು ಎಕರೆಯಲ್ಲಿ ಬೆಳೆದಿದ್ದೀರಿ ಎಂಬುದನ್ನು ನೀವೇ ಸಮೀಕ್ಷೆ ನಡೆಸಿ, ಅದರ ಮಾಹಿತಿಯನ್ನು ಇಟ್ಟುಕೊಂಡಿರಬೇಕು. ಇದು ಬೆಳೆ ವಿಮೆ ಪಡೆಯಲು ರೈತರಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.  

‘ಈ ಮೊದಲು ಸ್ಥಳೀಯ (ಪಿ.ಆರ್) ನಿವಾಸಿಗಳು ಬೆಳೆ ಸಮೀಕ್ಷೆ ಮಾಡುತಿದ್ದರು. ಈಗ ಸರ್ಕಾರದ ನಿರ್ದೇಶನದ ಅನ್ವಯ ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಬೇಕು. ನೀವೇ ಈ ಕೆಲಸ ಮಾಡುವುದರಿಂದ ಯಾವ ಬೆಳೆಯ ವಿವರವೂ ಸಮೀಕ್ಷೆಯಿಂದ ಬಿಟ್ಟು ಹೋಗಲು ಸಾಧ್ಯವಿಲ್ಲ. ಬೆಳೆ ಸಮೀಕ್ಷೆ ಬಗ್ಗೆ ರೈತರು ದೂರು ನೀಡುವುದು ತಪ್ಪಿದಂತಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. 

ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ರೈತರೊಬ್ಬರು, ತಾವು ಬೆಳೆದಿದ್ದ ಈರುಳ್ಳಿ ಬೆಳೆ ಮಳೆ ಹೆಚ್ಚಾದ ಕಾರಣದಿಂದ ಕೊಳೆತಿದೆ. ಪರಿಹಾರ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಾ. ಎಂ.ಆರ್. ರವಿ ಅವರು, ಇದು ಬೆಳೆ ಸಮೀಕ್ಷೆ ಯೋಜನೆಯಡಿ ಬರುವುದರಿಂದ ಇದನ್ನು ಪರಿಹಾರಕ್ಕೆ ಪರಿಗಣಿಸುವಂತೆ ಸ್ಥಳದಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಸಮೀಕ್ಷೆ ನಡೆಸುವ ವಿಧಾನವನ್ನು ಹೆಚ್ಚೆಚ್ಚು ರೈತರಿಗೆ ತಿಳಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕೋವಿಡ್ ಕಾರಣದಿಂದ ಯುವಕರು ತಮ್ಮ ಊರುಗಳಲ್ಲಿಯೇ ಇದ್ದಾರೆ. ಅವರನ್ನೂ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು. 

ಕೃಷಿ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.