ಯಳಂದೂರು: ಪಟ್ಟಣದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕಸದ ಸಮಸ್ಯೆ ತೀವ್ರವಾಗಿದೆ. ರಾಜ ಕಾಲುವೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ಹೋಗಿದ್ದು, ಕಲುಷಿತ ಕೊಳಚೆ ನಾರುತ್ತಿದೆ. ಸರ್ವಿಸ್ ರಸ್ತೆ, ಮನೆ, ಹೋಟೆಲ್ ಸುತ್ತಮುತ್ತ ಅನುಪಯುಕ್ತ ಕಸದ ಕೊಂಪೆ ತಲೆ ಎತ್ತಿದ್ದು, ಸುತ್ತಮುತ್ತಲ ನಿವಾಸಿಗಳ ನಿದ್ದೆಗೆಡಿಸಿದೆ.
ಪಟ್ಟಣದಲ್ಲಿ 11 ಕೊಳಚೆ ಪ್ರದೇಶ ಗುರುತಿಸಲಾಗಿದೆ. ಬಹುತೇಕ ಭಾಗಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸುವರ್ಣಾವತಿ ನದಿಯ ಭಾಗ, ಕಾರಾಪುರ ಮಠಕ್ಕೆ ತೆರಳುವ ರಸ್ತೆ, ರಾಜ ಕಾಲುವೆಗಳ ಬದಿ ಹಾಗೂ ಬಡಾವಣೆಗಳಲ್ಲಿ ಕಸ ತುಂಬಿದೆ. ಜೋರಾಗಿ ಬೀಸುವ ಗಾಳಿಗೆ ಕಸ ತೂರಾಡಿ, ನಾಯಿಗಳು ಅನುಪಯುಕ್ತ ತ್ಯಾಜ್ಯವನ್ನು ಎಳೆದು, ರೋಗ-ರುಜಿನ ಹರಡಲು ಕಾರಣವಾಗಿದೆ.
‘ಹೋಟೆಲ್, ಅಂಗಡಿ, ಮಳಿಗೆ, ಬಾರ್ ಹಾಗೂ ತಳ್ಳು ಗಾಡಿಗಳ ತ್ಯಾಜ್ಯವೂ ಇಲ್ಲಿ ಸೇರುತ್ತದೆ. ಮಳೆ ಜೋರಾಗಿ ಸುರಿದರೆ ನೀರಿನ ರಭಸಕ್ಕೆ ಕಾಲುವೆಗಳಲ್ಲಿ ತುಂಬಿರುವ ಕಸ ಕೊಚ್ಚಿಕೊಂಡು ಹೋಗುತ್ತದೆ. ಅಲ್ಪಸ್ವಲ್ಪ ಮಳೆ ಸುರಿದರೆ, ಕಸ ಕೊಳೆತು, ಸೊಳ್ಳೆ, ಕ್ರಿಮಿ ಕೀಟಗಳ ತಾಣವಾಗುತ್ತದೆ. ಇದರಿಂದ ಸಮೀಪದ ಮನೆಗಳ ನಿವಾಸಿಗಳು ಪ್ರತಿದಿನ ಸಾಂಕ್ರಾಮಿಕ ರೋಗ ಭೀತಿ ಆತಂಕ ಎದುರಿಸಬೇಕಿದೆ’ ಎಂದು ಪಟ್ಟಣದ ನಿವಾಸಿ ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಂಚಾಯಿತಿ ಅಧಿಕಾರಿಗಳು ಮಳೆಗಾಗಿ ಕಾದಿದ್ದಾರೆ. ಹೆಚ್ಚು ಮಳೆ ಸುರಿದರೆ ಕಾಲುವೆ ಸ್ವಯಂಆಗಿ ಸ್ವಚ್ಛಗೊಳ್ಳುತ್ತದೆ. ಹೆಚ್ಚಿನ ಶ್ರಮ ಇಲ್ಲದೆ ನೈರ್ಮಲ್ಯ ಕಾಪಾಡಬಹುದು ಎಂದು ನಂಬಿದ್ದಾರೆ. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ’ ಎಂದು ದೂರಿದರು.
‘ಪಂಚಾಯಿತಿ ಪ್ರತಿದಿನ ಕಸ ವಿಲೇವಾರಿ ಮಾಡುತ್ತಿಲ್ಲ. ಬಡಾವಣೆ ಕಸವನ್ನು ಒಂದೆಡೆ ರಾಶಿ ಹಾಕಿ, ನಂತರ ಸಾಗಿಸುತ್ತಾರೆ. ಕಸದ ಜೊತೆ ಅಕ್ಕಪಕ್ಕದ ಮನೆಗಳ ಕಸವೂ ಗುಡ್ಡೆ ಬೀಳುತ್ತದೆ. ಮಳೆಗಾಲದಲ್ಲಿ ತುಂತುರು ಮಳೆಯೂ ಸೇರಿ ದುರ್ನಾತ ಬೀರುತ್ತದೆ. ರಸ್ತೆ ಹಾಗೂ ನದಿಗೆ ಸೇರುತ್ತದೆ’ ಎಂದು ಮಹೇಶ್ ದೂರಿದರು.
‘ಕಸ ಸಾಗಣೆ ಮಾಡಲು ದುರಸ್ತಿ ಮಾಡದ ವಾಹನಗಳನ್ನು ಓಡಿಸಲಾಗುತ್ತದೆ. ವಾಹನದ ಕೆಲವು ಭಾಗಗಳು ಕಿತ್ತುಹೋಗಿದ್ದು, ಕಸ ಸಾಗಿಸುವಾಗ ದಾರಿಯುದ್ದಕ್ಕೂ ಮತ್ತಷ್ಟು ತ್ಯಾಜ್ಯ ಉದುರಿಸುತ್ತದೆ. ಈ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂಬುದು ಸಾರ್ವಜನಿಕರ ದೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.