ಚಾಮರಾಜನಗರ: ಜಿಲ್ಲಾ ಕೇಂದ್ರದ ಹೃದಯಭಾಗದಲ್ಲಿರುವ 21ನೇ ವಾರ್ಡ್ ವಿಸ್ತೀರ್ಣದಲ್ಲಿ ಚಿಕ್ಕದು. ಹೆಚ್ಚು ಅಭಿವೃದ್ಧಿಯಾಗಿಲ್ಲ. ರಸ್ತೆ, ನೀರು, ಬೀದಿ ದೀಪದ ಸೌಲಭ್ಯಗಳಿವೆ. ಅನೈರ್ಮಲ್ಯ ಇಲ್ಲಿನ ಬಹುದೊಡ್ಡ ಸಮಸ್ಯೆ.
900ರಷ್ಟು ಕುಟುಂಬಗಳು ವಾಸವಿರುವ ವಾರ್ಡ್‌ನಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚು. ಡೀವಿಯೇಷನ್ ರಸ್ತೆ, ಚಿಕ್ಕಂಗಡಿ ಬೀದಿಯ ಸ್ವಲ್ಪ ಭಾಗ ವಾರ್ಡ್ ವ್ಯಾಪ್ತಿಗೆ ಬರುತ್ತವೆ.
ಈ ವಾರ್ಡ್‌ನಲ್ಲಿ 1400ದಷ್ಟು ಮತದಾರರಿದ್ದಾರೆ. ಜನಸಂಖ್ಯೆ 2,500ರಷ್ಟು ಇದೆ. ಬಣಜಿಗರು, ಕುಂಬಾರರು, ಸವಿತಾ ಸಮಾಜ, ಬೆಸ್ತರು ಸೇರಿದಂತೆ ವಿವಿಧ ಜನಾಂಗದವರು ಇಲ್ಲಿ ವಾಸವಿದ್ದಾರೆ.
ತುಂಬಾ ಇಕ್ಕಟ್ಟಾಗಿರುವ ಈ ವಾರ್ಡ್‌ನಲ್ಲಿ ದೊಡ್ಡ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣಿಸುತ್ತಿಲ್ಲ. ರಸ್ತೆಗಳು ತುಂಬಾ ಕಿರಿದಾಗಿವೆ. ಪುಟ್ಟ ಪುಟ್ಟ ಮನೆಗಳೇ ಹೆಚ್ಚಾಗಿವೆ. ಚಿಕ್ಕ ಮನೆಯಲ್ಲೇ ಹೆಚ್ಚು ಜನರು ವಾಸವಿದ್ದಾರೆ.
ಕಿರಿದಾಗಿರುವ ರಸ್ತೆಗಳು ಕಾಂಕ್ರೀಟ್, ಡಾಂಬರು ಕಂಡಿವೆ. ಕೆಲವು ಕಡೆ ಗಲ್ಲಿಗಳಲ್ಲಿ ರಸ್ತೆ ಕಾಲುದಾರಿಯಷ್ಟೇ ಅಗಲವಿದೆ. ಕಾವೇರಿ ನೀರು ನಿಯಮಿತವಾಗಿ ಬಾರದಿದ್ದರೂ, ಕೊಳವೆ ಬಾವಿ ಇರುವುದರಿಂದ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿಲ್ಲ. ವಾರ್ಡ್ ನಗರದ ಹೃದಯಭಾಗದಲ್ಲಿರುವುದರಿಂದ ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿದೆ.
ಅನೈರ್ಮಲ್ಯವೇ ಸಮಸ್ಯೆ: ಆದರೆ, ಇಲ್ಲಿ ಸ್ವಚ್ಛತೆ ಇಲ್ಲ. ಒಳಚರಂಡಿ ವ್ಯವಸ್ಥೆ ಇದ್ದರೂ, ಎಲ್ಲ ಮನೆಗಳ ಶೌಚಾಲಯ, ಸ್ನಾನ ಗೃಹಗಳ ಸಂಪರ್ಕವನ್ನು ಒಳಚರಂಡಿಗೆ ಕೊಟ್ಟಿಲ್ಲ. ಹಾಗಾಗಿ, ಮನೆಗಳಲ್ಲಿ ಉತ್ಪತ್ತಿಯಾಗುವ ಎಲ್ಲ ತ್ಯಾಜ್ಯಗಳು ತೆರೆದ ಚರಂಡಿಯನ್ನು ಸೇರುತ್ತವೆ.
‘ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಿಯಮಿತವಾಗಿ ಆಗುವುದಿಲ್ಲ. ನಗರಸಭೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಿಬ್ಬಂದಿಯನ್ನು ಕರೆಸಿದರೆ, ಅವರು ಬಂದು ಚರಂಡಿಯನ್ನು ಸ್ವಚ್ಛಗೊಳಿಸಿ, ಕಲ್ಮಶ ಹೂಳನ್ನು ರಸ್ತೆಯ ಮೇಲೆ ಹಾಕಿ ಹೋಗುತ್ತಾರೆ. ಮತ್ತೆ ಅದನ್ನು ತೆರವುಗೊಳಿಸುವುದಿಲ್ಲ. ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಮಕ್ಕಳು ಸೇರಿದಂತೆ ಜನರಿಗೆ ಓಡಾಡುವುದಕ್ಕೆ ಕಿರಿಕಿರಿಯಾಗುತ್ತದೆ’ ಎಂಬುದು ನಿವಾಸಿಗಳ ದೂರು.
‘ಸವಿತಾ ಸಮಾಜದವರು ವಾಸವಿರುವ ಬೀದಿ ತುಂಬಾ ಕಿರಿದಾಗಿದ್ದು, ಕಸದ ಗಾಡಿ ಬರುವುದಿಲ್ಲ. ಅಲ್ಲಿನ ಮನೆಗಳಿಂದ ಕಸ ಸಂಗ್ರಹ ಸಮರ್ಪಕವಾಗಿ ಆಗುವುದಿಲ್ಲ’ ಎಂಬುದು ಅವರ ಅಳಲು.
‘ನಮ್ಮ ಬಡಾವಣೆಯಲ್ಲಿ ರಸ್ತೆ, ನೀರಿನ ವ್ಯವಸ್ಥೆ ತಕ್ಕ ಮಟ್ಟಿಗೆ ಇದೆ. ಆದರೆ, ಕಸದ ಸಮಸ್ಯೆಯೇ ಹೆಚ್ಚು. ಕಸ ಸಂಗ್ರಹ ಸರಿಯಾಗಿ ಆಗುತ್ತಿಲ್ಲ. ಚರಂಡಿಯ ಹೂಳೆತ್ತಿದ್ದರೆ, ಅದನ್ನು ನಗರಸಭೆಯವರು ತಕ್ಷಣ ತೆಗೆದುಕೊಂಡು ಹೋಗುತ್ತಿಲ್ಲ. ಹೀಗಾಗಿ ವಾತಾವರಣ ಅನೈರ್ಮಲ್ಯವಾಗುತ್ತಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಯಾರೂ ಈ ಬಗ್ಗೆ ಗಮನ ಹರಿಸುವುದಿಲ್ಲ’ ಎಂದು ವಾರ್ಡ್ ನಿವಾಸಿ ಮಂಗಳಮ್ಮ ‘ಪ್ರಜಾವಾಣಿ’ಗೆ ದೂರಿದರು.
ಬಹುತೇಕ ನಿವಾಸಿಗಳು ಶೌಚಾಲಯಗಳ ಸಂಪರ್ಕವನ್ನು ಒಳಚರಂಡಿಗೆ ಕಲ್ಪಿಸಿದ್ದಾರೆ. ಇನ್ನೂ ಕೆಲವರು ಕಲ್ಪಿಸಬೇಕಿದೆ. ಸ್ವಚ್ಛತೆ ಕಾಪಾಡಲು ಜನರ ಸಹಕಾರವೂ ಮುಖ್ಯಸುದರ್ಶನ ಗೌಡ ವಾರ್ಡ್ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.