ಭಾನುವಾರ, ಆಗಸ್ಟ್ 14, 2022
21 °C
ಚಾಮರಾಜನಗರ ನಗರಸಭೆ: ವಿಶೇಷ ಸಭೆ, ವಿರೋಧದ ನಡುವೆ ವಿವಿಧ ಕಾಮಗಾರಿಗೆ ಅನುಮೋದನೆ

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರಸಭೆಯ ಕೆಲವು ವಾರ್ಡ್‌ಗಳಿಗೆ ಮಾತ್ರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡುವ ಮೂಲಕ ನಗರಸಭೆ ಆಡಳಿತ ತಾರತಮ್ಯ ಎಸಗಿದೆ ಎಂಬ ಗಂಭೀರ ಆರೋಪವನ್ನು ಎಸ್‌ಡಿಪಿಐ ಸದಸ್ಯರು ಮಾಡಿದರು. 

ಬುಧವಾರ ನಡೆದ ನಗರಸಭೆಯ ವಿಶೇಷ ಸಭೆಯಲ್ಲಿ ವಿವಿಧ ವಾರ್ಡ್‌ಗಳಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ₹1.83 ಕೋಟಿ ವೆಚ್ಚದ ಐದು ಕಾಮಗಾರಿಗಳಿಗೆ ಎಸ್‌ಡಿಪಿಐ ಸದಸ್ಯರ ವಿರೋಧದ ನಡುವೆಯೇ ಸಭೆ ಅನುಮೋದನೆ ನೀಡಲಾಯಿತು. 

ಚುನಾವಣೆಯಲ್ಲಿ ಸದಸ್ಯರ ಆಯ್ಕೆ ನಡೆದು ಎರಡೂವರೆ ವರ್ಷಗಳ ಬಳಿಕ ಬುಧವಾರ ಮೊದಲ ಬಾರಿಗೆ ಕೌನ್ಸಿಲ್‌ ಸಭೆ ನಡೆಯಿತು. ಎಲ್ಲ ಹೊಸ ಸದಸ್ಯರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ನಗರಸಭೆ ವತಿಯಿಂದ ಸನ್ಮಾನಿಸಿದ ಬಳಿಕ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. 

ಎಸ್‌ಡಿಪಿಐ ಸದಸ್ಯ ಅಬ್ರಾರ್‌ ಅಹಮದ್‌ ಅವರು ಮಾತನಾಡಿ, ‘ಕೌನ್ಸಿಲ್‌ ಇಲ್ಲದೇ ಇದ್ದ ಸಂದರ್ಭದಲ್ಲಿ ವಾರ್ಡ್‌ಗಳಿಗೆ ಅನುದಾನ ಹಂಚಿಕೆ ಮಾಡುವಾಗ ತಾರತಮ್ಯ ಮಾಡಲಾಗಿದೆ. ಇತರ ವಾರ್ಡ್‌ಗಳನ್ನು ಕೈಬಿಟ್ಟು ನಿರ್ದಿಷ್ಟ ವಾರ್ಡ್‌ಗಳಿಗೆ ಮಾತ್ರ ಹಣ ಹಂಚಿಕೆ ಮಾಡಲಾಗಿದೆ. ಪ್ರಶ್ನೆ ಮಾಡುವ ಸದಸ್ಯರ ವಾರ್ಡ್‌ಗಳಿಗೆ ಆಯುಕ್ತರು ಅನುದಾನ ನೀಡಿದ್ದಾರೆ’ ಎಂದು ಆರೋಪಿಸಿದರು. ಎಸ್‌ಡಿಪಿಐನ ಇತರ ಸದಸ್ಯರಾದ ಎಂ.ಮಹೇಶ್‌, ಸಮೀಉಲ್ಲಾ ಖಾನ್ ಮತ್ತಿತರರು ಧ್ವನಿ ಸೇರಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎಂ.ರಾಜಣ್ಣ ಅವರು, ‘ನನ್ನ ವಿರುದ್ಧದ ಆರೋಪ ಸುಳ್ಳು. ₹10 ಲಕ್ಷದವರೆಗಿನ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡುವ ಅಧಿಕಾರ ನನಗಿದೆ. ಹಿಂದಿನ ಜಿಲ್ಲಾಧಿಕಾರಿ ಅವರು ಅನುದಾನ ಹಂಚಿಕೆ ಮಾಡಿದ್ದರು. ಸಣ್ಣ ಮೊತ್ತವನ್ನು ಹಂಚಿಕೆ ಮಾಡುವುದರಿಂದ ಒಂದು ಕೆಲಸವೂ ಪೂರ್ಣವಾಗುವುದಿಲ್ಲ ಎಂಬ ಕಾರಣಕ್ಕೆ ಒಂದು ಕಡೆಗೆ ಅನುದಾನ ನೀಡಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ’ ಎಂದರು. 

ಮಧ್ಯಪ್ರವೇಶಿಸಿದ ಅಧ್ಯಕ್ಷೆ ಸಿ.ಎಂ.ಆಶಾ ಅವರು, ‘ಅಧಿಕಾರಿಗಳ ಆಡಳಿತದಲ್ಲಿ ಈ ರೀತಿ ಆಗಿದೆ. ಹೊಸ ಕೌನ್ಸಿಲ್‌ ಈಗ ರಚನೆಯಾಗಿದೆ. ಮುಂದಿನ ದಿನಗಳಲ್ಲಿ ಅನುದಾನವನ್ನು ಎಲ್ಲ ವಾರ್ಡ್‌ಗಳಿಗೂ ಸಮನಾಗಿ ಹಂಚಲಾಗುವುದು’ ಎಂದು ಭರವಸೆ ನೀಡಿದರು. 

17ನೇ ವಾರ್ಡ್‌ನ ಪಕ್ಷೇತರ ಸದಸ್ಯ ಸಿ.ಎಂ.ಬಸವಣ್ಣ ಅವರು ಮಾತನಾಡಿ, ‘ಸುಧಾಮ ನಗರದಲ್ಲಿ ರಸ್ತೆ ಸೌಲಭ್ಯ ಇಲ್ಲ. ಚರಂಡಿ ವ್ಯವಸ್ಥೆ ಸರಿ ಇಲ್ಲ. ಕಾಡು ಹಂದಿ ಹಾವಳಿಯೂ ಇದೆ. ಚರಂಡಿ ನಿರ್ಮಿಸಿದರೆ ರಸ್ತೆ ಕೆಲಸ ಮಾಡಲಾಗುತ್ತಿದೆ. ಮುಂದೆ ಚರಂಡಿ ಮಾಡುವಾಗ ರಸ್ತೆಯನ್ನು ಅಗೆಯಬೇಕಾಗುತ್ತದೆ. ಇಂತಹ ಕೆಲಸವನ್ನು ಮಾಡಬಾರದು’ ಎಂದರು. 

ಬಿಜೆಪಿಯ ಸುದರ್ಶನ್‌ ಗೌಡ ಅವರು ಮಾತನಾಡಿ, ‘ನಗರದ ಕೇಂದ್ರ ಭಾಗ ಮಾತ್ರ ಅಭಿವೃದ್ಧಿಯಾಗಿದೆ. ಸುತ್ತಮುತ್ತಲಿನ ಪ್ರದೇಶವೂ ಅಭಿವೃದ್ಧಿಯಾಗಬೇಕಿದೆ. ಹಾಗಾಗಿ, ಎಲ್ಲ ವಾರ್ಡ್‌ಗಳಿಗೂ ಅನುದಾನ ಬೇಕು. ನಗರದ ಅಭಿವೃದ್ಧಿ ದೃಷ್ಟಿಯಿಂದ ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ಪುಟ್ಟ ವ್ಯತ್ಯಾಸ ಆಗಿರಬಹುದು. ಮುಂದೆ ಅದನ್ನು ಸರಿಪಡಿಸೋಣ. ಈಗ ಈ ಕಾಮಗಾರಿಗಳಿಗೆ ಅನುಮೋದನೆ ನೀಡೋಣ’ ಎಂದರು. 

ಎಸ್‌ಡಿಪಿಐ ಪ್ರತಿಭಟನೆ: ‘ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಕೆಲವೇ ಕೆಲವು ನಿರ್ದಿಷ್ಟ ವಾರ್ಡ್‌ಗಳಿಗೆ ಎಲ್ಲ ಅನುದಾನ ನೀಡುವುದಕ್ಕೆ ವಿರೋಧ ಇದೆ. ಅಂತಹ ಯೋಜನೆಗಳನ್ನು ಕೈಬಿಟ್ಟು, ಉಳಿದ ಕಾಮಗಾರಿಗಳನ್ನು ನಡೆಸಲು ಸಭೆ ಅನುಮತಿ ನೀಡಬೇಕು’ ಎಂದು ಅಬ್ರಾರ್‌ ಅಹಮದ್, ಎಂ.ಮಹೇಶ್‌ ಒತ್ತಾಯಿಸಿದರು

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಶಿವರಾಜ್‌ ಅವರು, ನಿರ್ದಿಷ್ಟ ವಾರ್ಡ್‌ಗಳನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಸದಸ್ಯರ ನಡುವೆ ಮಾತಿನಚಕಮಕಿ ನಡೆಯಿತು. ಗದ್ದಲದ ನಡುವೆಯೇ  ಅಧ್ಯಕ್ಷೆ ಆಶಾ ಅವರು ಐದು ಕಾಮಗಾರಿಗಳಿಗೆ ಸಭೆ ಅನುಮೋದನೆ ನೀಡಿದೆ ಎಂದು ಘೋಷಿಸಿದರು. ಇದರಿಂದ ಕೆರಳಿದ ಎಸ್‌ಡಿಪಿಐ ಸದಸ್ಯರು ಅಧ್ಯಕ್ಷರ ಪೀಠದ ಮುಂದೆ ಪ್ರತಿಭಟನೆ ನಡೆಸಿದರು. 

ಎಂ.ರಾಜಣ್ಣ ಅವರು ಮಾತನಾಡಿ, ‘ಎಲ್ಲ ವಾರ್ಡ್‌ಗಳಲ್ಲೂ ಸಮಸ್ಯೆ ಇದೆ. ಇವುಗಳ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸೋಣ. ನಂತರ ಆದ್ಯತೆಯ ಮೇರೆಗೆ ಎಲ್ಲ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳೋಣ’ ಎಂದು ಸಲಹೆ ನೀಡಿದರು. 

ಎಲ್ಲ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಉಪಾಧ್ಯಕ್ಷೆ ಸುಧಾ ಇದ್ದರು.

ಮಾಂಸ ಅಂಗಡಿಗಳನ್ನು ಸ್ಥಳಾಂತರಿಸಿ

11ನೇ ವಾರ್ಡ್‌ ಸದಸ್ಯ ಬಿಜೆಪಿಯ ಸಿ.ಎಂ.ಮಂಜುನಾಥ್‌ ಅವರು ಮಾತನಾಡಿ, ‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಹಾಗೂ ಆ ರಸ್ತೆಯಲ್ಲಿ ವ್ಯಾಪಾರಿಗಳು ಅಂಗಡಿಗಳಲ್ಲಿ ಮಾಂಸ ನೇತು ಹಾಕಿ ಮಾರಾಟ ಮಾಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ರಸ್ತೆ ಬದಿವರೆಗೂ ಬರುತ್ತಿದ್ದಾರೆ. ಪ್ರತ್ಯೇಕವಾದ ಮಾಂಸದ ಮಾರುಕಟ್ಟೆ ಇರುವುದರಿಂದ, ಎಲ್ಲ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಕೊಡ ಹಿಡಿದು ಪ್ರತಿಭಟನೆ: 8ನೇ ವಾರ್ಡ್‌ನ ಸದಸ್ಯ ಕೆ.ರಾಘವೇಂದ್ರ ಅವರು ಸಭೆಗೆ ಕೊಡ ಹಿಡಿದುಕೊಂಡು ಬಂದರಲ್ಲದೇ, ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕೊಡವನ್ನು ಭುಜದಲ್ಲಿ ಹಿಡಿದು ಪ್ರತಿಭಟಿಸಿದರು. 

ಸಭೆಯಲ್ಲಿ ಮಾತನಾಡುವಾಗಲೆಲ್ಲ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು.

‘₹2.27 ಕೋಟಿ ವೆಚ್ಚದ ಯೋಜನೆಯೊಂದು ಸಿದ್ಧಪಡಿಸಲಾಗಿದ್ದು, ಟೆಂಡರ್‌ ಆಗಬೇಕಿದೆ. ಅದಕ್ಕೆ ಸಭೆ ಅನುಮತಿ ನೀಡಬೇಕು. ಜೊತೆಗೆ ಮಾಲಂಗಿಯಿಂದ ನೇರವಾಗಿ ನಗರಕ್ಕೆ ನೀರು ತರುವ, ₹273 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಯ ಸಮಗ್ರ ಯೋಜನಾ ವರದಿಯನ್ನು ಜಲಮಂಡಳಿ ಸಿದ್ಧಪಡಿಸಿದೆ’ ಎಂದು ಆ‌ಯುಕ್ತ ರಾಜಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು