ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಪೇ ಚರ್ಚೆ: ಕೆವಿಯ ಶ್ರೇಯಾ ಆಯ್ಕೆ

ಜಿಲ್ಲೆಯಿಂದ ಮೊದಲ ಬಾರಿ ಪಾಲ್ಗೊಳ್ಳುವ ಸಂಭ್ರಮ
Last Updated 29 ಮಾರ್ಚ್ 2022, 16:29 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ವಿದ್ಯಾರ್ಥಿಗಳೊಂದಿಗೆ ಏ.1ರಂದು ನಡೆಸಲಿರುವ ಪರೀಕ್ಷಾ ಪೇ ಚರ್ಚೆಯಲ್ಲಿ ನಗರದ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಭಾಗವಹಿಸಲಿದ್ದಾಳೆ.

ಏ.1ರ ಬೆಳಿಗ್ಗೆ 11ಕ್ಕೆ ಸಂವಾದ ನಡೆಯಲಿದ್ದು, ವರ್ಚುವಲ್‌ ಆಗಿ ಶ್ರೇಯಾ ಶಾಲೆಯಿಂದಲೇ ಭಾಗವಹಿಸಲಿದ್ದು, 'ತರಗತಿಯಲ್ಲಿ ಡಿಜಿಟಲ್‌ ಸಂವಾದ’ ಎಂಬ ವಿಷಯದ ಬಗ್ಗೆ ಮೋದಿ ಅವರೊಂದಿಗೆ ಮಾತನಾಡಲಿದ್ದಾಳೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಜಿಲ್ಲಾ ನೋಡೆಲ್‌ ಅಧಿಕಾರಿ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ನಿರ್ಮಲಾ ಕುಮಾರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

‘ಪ್ರಧಾನಿ ಅವರೊಂದಿಗೆ ನಡೆಯಲಿರುವ ಸಂವಾದದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಈ ಬಾರಿ ಪರೀಕ್ಷಾ ಪೇ ಚರ್ಚೆಯ ಐದನೇ ಆವೃತ್ತಿ ನಡೆಯುತ್ತಿದೆ. ನವದೆಹಲಿಯ ತಾಳ್ಕಟೋರಾ ಕ್ರೀಡಾಂಗಣದಲ್ಲಿ ಸಂವಾದ ನಡೆಯಲಿದೆ’ ಎಂದು ಕಾತ್ಯಾಯಿನಿದೇವಿ ಹೇಳಿದರು.

ನಿರ್ಮಲಾ ಕುಮಾರಿ ಮಾತನಾಡಿ ‘ಸಂವಾದಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದಕ್ಕೂ ಮೊದಲು ಸೃಜನಶೀಲ ಬರವಣಿಗೆ ಸ್ಪರ್ಧೆ ನಡೆಸಲಾಗುತ್ತದೆ. ಆ ಬಳಿಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಆಯ್ಕೆಯಾಗಿದ್ದಾಳೆ’ ಎಂದರು.

‘ದೇಶದಾದ್ಯಂತ 15.7 ಲಕ್ಷ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಪರೀಕ್ಷೆ ಬಗ್ಗೆ ಮಕ್ಕಳಲ್ಲಿರುವ ಭಯ, ಒತ್ತಡ ಹೋಗಲಾಡಿಸುವ ಉದ್ದೇಶದಿಂದ ಹಾಗೂ ಅವರಲ್ಲಿ ಧೈರ್ಯ ತುಂಬುವುದಕ್ಕಾಗಿ ಪ್ರಧಾನಿ ಐದು ವರ್ಷದಿಂದ ಈ ಸಂವಾದ ನಡೆಸುತ್ತಿದ್ದಾರೆ. ದೂರದರ್ಶನ ಸೇರಿದಂತೆಆಕಾಶವಾಣಿ, ಯೂಟ್ಯೂಬ್, ಪಿಎಂಒ ಇಂಡಿಯಾ, ರಾಜ್ಯಸಭಾ ಟಿವಿ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಇದು ನೇರ ಪ್ರಸಾರವಾಗಲಿದೆ. ಜಿಲ್ಲೆಯ ಜನರು, ಮಕ್ಕಳು ಕೂಡ ಈ ಕಾರ್ಯಕ್ರಮವನ್ನು ವೀಕ್ಷಿಸಬೇಕು’ ಎಂದು ಹೇಳಿದರು.

ಹೊಂಡರಬಾಳು ನವೋದಯ ಶಾಲೆಯ ಪ್ರಭಾರ ಪ್ರಾಂಶುಪಾಲ ಕುರಿಯನ್ ಥಾಮಸ್, ವೈ.ಕೆ.ಬೈಯುಪ್ಪುರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT