ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆರೋಗ್ಯ ಸೇವೆ ಸಿಗುತ್ತಿಲ್ಲ: ಸದಸ್ಯರ ಆರೋಪ

ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷೆ ಎಂ.ಅಶ್ವಿನಿ ನೇತೃತ್ವದಲ್ಲಿ ಮೊದಲ ವಿಶೇಷ ಸಾಮಾನ್ಯ ಸಭೆ
Last Updated 10 ಜೂನ್ 2020, 16:19 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ವೈದ್ಯರು, ಇತರೆ ಸಿಬ್ಬಂದಿಯ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿಯ ಸದಸ್ಯರು ಆರೋಪಿಸಿದರು.

ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷೆ ಎಂ.ಅಶ್ವಿನಿ ನೇತೃತ್ವದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಎರಡೂ ಪಕ್ಷಗಳ ಸದಸ್ಯರು ಆರೋಗ್ಯ ಸೇವೆ ಲಭ್ಯವಾಗದಿರುವ ಬಗ್ಗೆ ಗಮನ ಸೆಳೆದರು. ಕೋವಿಡ್‌–19 ಕಾರಣಕ್ಕೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸರಿಯಾಗಿ ಲಭಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಜೆ.ಯೋಗೇಶ್‌ ಅವರು ಮಾತನಾಡಿ, ‘ಈಗ ಜನರು ಖಾಸಗಿ ಆಸ್ಪತ್ರೆಗಳಿಗೆ ಹೋದರೆ ವೈದ್ಯರು ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದಾರೆ. ಜ್ವರ, ಕೆಮ್ಮು ಎಂದರೆ ಚಿಕಿತ್ಸೆ ನೀಡದಿರುವ ಸ್ಥಿತಿ ಇದೆ. ಸರ್ಲಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಕಾಡುತ್ತಿದೆ’ ಎಂದರು.

‘ಯಳಂದೂರಿನಲ್ಲಿ ತಾಲ್ಲೂಕು ಆಸ್ಪತ್ರೆ ಕಟ್ಟಡ ಬಹುತೇಕ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಚಾವಣಿಯಲ್ಲಿ ನೀರು ಸೋರುತ್ತದೆ. ಇದರ ದುರಸ್ತಿಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಶಿಥಿಲ ಕಟ್ಟಡಗಳ ದುರಸ್ತಿ ಹಾಗೂ ಸಿಬ್ಬಂದಿ ನೇಮಕಾತಿ ವಿಚಾರದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು. ಬಿಜೆಪಿಯ ಕಮಲ್‌ ನಾಗರಾಜ್‌ ಹಾಗೂ ಸಿ.ಎನ್‌.ಬಾಲರಾಜು ಅವರು ಕೂಡ ಇದಕ್ಕೆ ಧ್ವನಿಗೂಡಿಸಿದರು.

ಸದಸ್ಯೆ ಲೇಖಾ ಅವರು ಬಂಡಳ್ಳಿಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲ ಎಂಬ ಸಂಗತಿಯನ್ನು ಪ್ರಸ್ತಾಪಿಸಿದರು. ಪ್ರಭಾರ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌ ಅವರು ಮಾತನಾಡಿ, ‘ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಆರೋಗ್ಯ ಇಲಾಖೆ ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ಸದಸ್ಯರ ಮಾತುಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ನಮ್ಮಲ್ಲಿ ಶೇ 60ರಷ್ಟು ಹುದ್ದೆಗಳು ಖಾಲಿ ಇದ್ದು, ಇದರಿಂದ ಚಿಕಿತ್ಸೆ ನೀಡುವುದಕ್ಕೆ ತೊಂದರೆಯಾಗಿದೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ನೇಮಕಾತಿಯನ್ನು ಸರ್ಕಾರವೇ ಮಾಡಬೇಕು. ಹೊರಗುತ್ತಿಗೆಯಲ್ಲಿ ನೇಮಕ ಮಾಡಲು ಅವಕಾಶ ಇಲ್ಲ’ ಎಂದು ಹೇಳಿದರು.

‘ಬಂಡಳ್ಳಿಗೆ ಈಗಾಗಲೇ ವೈದ್ಯರ ನೇಮಕಾತಿ ಆಗಿದ್ದು, ಕೋವಿಡ್‌–19 ಕರ್ತವ್ಯದಲ್ಲಿ ಅವರು ಹನೂರಿನಲ್ಲಿದ್ದಾರೆ’ ಎಂದು ಅವರು ಸ್ಪಷ್ಟನೆ ನೀಡಿದರು.

404 ರೈತರಿಂದ ಅರ್ಜಿ: ತೋಟಗಾರಿಕಾ ಇಲಾಖೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಕೊಟ್ಟ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್‌ ಅವರು, ‘ಕೋವಿಡ್‌–19 ಸಂದರ್ಭದಲ್ಲಿ ನಷ್ಟ ಅನುಭವಿಸಿದವರಿಗೆ ಸರ್ಕಾರ ಘೋಷಿಸಿರುವ ನಷ್ಟ ಪರಿಹಾರಕ್ಕಾಗಿ ಜಿಲ್ಲೆಯಲ್ಲಿ ಇದುವರೆಗೆ 404 ರೈತರು ಅರ್ಜಿ ಸಲ್ಲಿಸಿದ್ದಾರೆ. ಹೂ ಬೆಳೆಗಾರರಾಗಿ ಹೆಕ್ಟೇರ್‌ಗೆ ₹25 ಸಾವಿರ,ತರಕಾರಿ ಬೆಳೆಗಳಿಗೆ ಹೆಕ್ಟೇರ್‌ಗೆ ₹15 ಸಾವಿರ, ಮೆಣಸಿನಕಾಯಿ, ಸಿಹಿಗುಂಬಳ, ಕೋಸು ಸೇರಿದಂತೆ 10 ಬೆಳೆಗಳಿಗೆ ಹೆಕ್ಟೇರ್‌ಗೆ ₹15 ಸಾವಿರ ಪರಿಹಾರ ನೀಡಲಾಗುತ್ತದೆ’ ಎಂದರು.

ಕೆರೆಹಳ್ಳಿ ನವೀನ್‌ ಮಾತನಾಡಿ, ‘ಇಲಾಖೆಯ ಸಂಪರ್ಕ ಇರುವ ಕೆಲವೇ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉಳಿದವರಿಗೆ ಮಾಹಿತಿಯೇ ಇಲ್ಲ. ಅರ್ಜಿ ಸಲ್ಲಿಸಲು ಮೇ 21 ಕಡೆಯ ದಿನ ಎಂದು ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ. ಇದು ಎಷ್ಟು ಮಂದಿ ರೈತರಿಗೆ ತಿಳಿದಿದೆ? ತಕ್ಷಣವೇ ಬೆಳೆ ಸಮೀಕ್ಷೆಯಲ್ಲಿ ನಡೆದಿರುವ ಲೋಪಗಳನ್ನು ಸರಿಪಡಿಸಬೇಕು. ಜತೆಗೆ ಹೆಚ್ಚಿನ ಸಂಖ್ಯೆಯ ರೈತರು ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಅನುಮೋದನೆ:ಸಭೆಯ ಆರಂಭದಲ್ಲಿ ಜಿಲ್ಲಾಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಅವರು 2020–21ನೇ ಸಾಲಿನ ಲಿಂಕ್‌ಡಾಕ್ಯುಮೆಂಟ್ ಅಡಿ ಜಿಲ್ಲೆಗೆ ಜಿಲ್ಲಾ ವಲಯ ಕಾರ್ಯಕ್ರಮದಡಿ ಜಿಲ್ಲಾಪಂಚಾಯಿತಿ ಕಾರ್ಯಕ್ರಮಗಳಿಗೆ ನಿಗದಿಮಾಡಲಾದ ₹554.59 ಕೋಟಿ ಅನುದಾನದ ವಿವರಗಳನ್ನು ಮಂಡಿಸಿದರು. ನಂತರ ಸಭೆಯು ಇದಕ್ಕೆ ಅನುಮೋದನೆ ನೀಡಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಹರ್ಷಲ್ ಭೋಯರ್‌ ನಾರಾಯಣರಾವ್‌ ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.

58 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚಂದ್ರಕಲಾ ಅವರು ಮಾತನಾಡಿ, ‘ಜಿಲ್ಲೆಯ ಶೇ 99ರಷ್ಟು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಗುಂಡ್ಲುಪೇಟೆಯ ಬೇಗೂರು, ತೆರಕಣಾಂಬಿ ಭಾಗಗಳಲ್ಲಿ ಕಡಿಮೆ ಮಳೆಯಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಈವರೆಗೆ ಸುಮಾರು 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಸಗೊಬ್ಬರ, ಬಿತ್ತನೆ ಬೀಜಗಳಾದ ಮುಸುಕಿನ ಜೋಳ, ರಾಗಿ, ಭತ್ತದ ದಾಸ್ತಾನು ಮಾಡಲಾಗಿದ್ದು, ಯಾವುದರ ಕೊರತೆ ಸದ್ಯಕ್ಕಿಲ್ಲ’ ಎಂದು ತಿಳಿಸಿದರು.

ಅನೇಕ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಹಣ ಬಂದಿಲ್ಲ ಎಂದು ಸದಸ್ಯರು ಪ್ರಶ್ನಿಸಿದಾಗ, 2,588 ರೈತರಿಗೆ ಸಮಸ್ಯೆ ಉಂಟಾಗಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತನಿಖೆ ನಡೆಸಿ: ಜಿಲ್ಲೆಯಲ್ಲಿ ಕೃಷಿ ಹೊಂಡ ಮಾಡಿದವರಿಗೆ ಕೃಷಿ ಇಲಾಖೆಯಿಂದ ಈವರೆಗೂ ಬಿಲ್ ಪಾವತಿಯಾಗಿಲ್ಲ. 22 ಕೃಷಿಹೊಂಡ ಕಾಮಗಾರಿಗಳಿಗೆ ಸಹಾಯಧನ ಪಾವತಿಯಾಗಿಲ್ಲ. ಮಾಡದವರಿಗೆ ಸಹಾಯಧನ ಸಿಕ್ಕಿದೆ. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಾದರೆ ತನಿಖೆಗಾಗಿ ಸಮಿತಿ ರಚನೆ ಮಾಡಬೇಕು ಎಂದು ಕಾಂಗ್ರೆಸ್‌ನ ಕೆ.ಪಿ.ಸದಾಶಿವಮೂರ್ತಿ ಅವರು ಆಗ್ರಹಿಸಿದರು.

ಕೋವಿಡ್‌–19: ಕಡೆಗಣನೆಗೆ ಅಸಮಾಧಾನ

ಜಿಲ್ಲೆಯಲ್ಲಿ ಕೋವಿಡ್‌–19 ನಿಯಂತ್ರಣಕ್ಕಾಗಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ, ಸಭೆ ನಡೆಸುವಾಗ ಜಿಲ್ಲಾಡಳಿತದ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಹಂಗಾಮಿ ಉಪಾಧ್ಯಕ್ಷ ಎಸ್‌.ಕೆ.ಮಹೇಶ್‌ ಸೇರಿದಂತೆ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಇತರ ಅಧಿಕಾರಿಗಳೇ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ವಿವಿಧ ಸ್ಥಳಗಳಿಗೆ ಅಧಿಕಾರಿಗಳು ಪರಿಶೀಲನೆಗೆ ತೆರಳುವಾಗಲೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರುತ್ತಿರಲಿಲ್ಲ’ ಎಂದು ಹೇಳಿದರು.

ಕೋವಿಡ್‌–19 ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ಈ ಬಗ್ಗೆ ನಾವು ಮಾತನಾಡಲಿಲ್ಲ ಎಂದೂ ಸದಸ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT