ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ಚಿಕ್ಕಲ್ಲೂರು ಜಾತ್ರೆ ರದ್ದು

ಸರಳವಾಗಿ ಆಚರಿಸಲಷ್ಟೇ ಅವಕಾಶ; ಧಾರ್ಮಿಕ ವಿಧಿವಿಧಾನಗಳಿಗಷ್ಟೇ ಸೀಮಿತ
Last Updated 7 ಜನವರಿ 2022, 3:34 IST
ಅಕ್ಷರ ಗಾತ್ರ

ಕೊಳ್ಳೇಗಾಲ:ತಾಲ್ಲೂಕಿನ ಚಿಕ್ಕಲ್ಲೂರಿನ ಶ್ರೀ ಘನ ನೀಲಿ ಸಿದ್ದಪ್ಪಾಜಿ ಜಾತ್ರೆ ಈ ವರ್ಷವೂ ಕೋವಿಡ್‌ನಿಂದ ರದ್ದಾಗಿದೆ.

ಕಳೆದ ವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಮಾತ್ರ ಜಾತ್ರೆ ನಡೆಯಲಿದೆ. ಇದೇ 17ರಿಂದ 21ರವರೆಗೆ ಐದು ದಿನ ಜಾತ್ರೆ ನಿಗದಿಯಾಗಿತ್ತು.

ಜಾತ್ರೆಗೆ ಅನುಮತಿ ಕೋರಿ ಮಳವಳ್ಳಿಯ ಬಿ.ಜಿ.ಪುರದಮಂಟೇಸ್ವಾಮಿ ಮಠ ಹಾಗೂ ಚಿಕ್ಕಲ್ಲೂರು ಮಠದ ಆಡಳಿತಾಧಿಕಾರಿ ಬಿ.ಪಿ.ಭರತ್‍ ಅರಸ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಡ ಳಿತ, ಕೋವಿಡ್‌ ಕಾರಣಕ್ಕೆ ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಕೋವಿಡ್‌ 19 ನಿಯಮ ಕಟ್ಟು‌ನಿಟ್ಟಾಗಿ ಪಾಲಿಸಿಕೊಂಡು ಪ್ರತಿ ನಿತ್ಯದ ಸೇವಾ/ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿ ಇದೆ. ಜಾತ್ರೆ, ದೇವಾಲಯಗಳಲ್ಲಿ ನಡೆಯುವ ಹಬ್ಬ, ಮೆರವಣಿಗೆ ಮತ್ತು ಧಾರ್ಮಿಕ ಸಭೆಗಳನ್ನು ಸರ್ಕಾರ ನಿಷೇಧಿಸಿದೆ. ಹಾಗಾಗಿ ಚಿಕ್ಕಲ್ಲೂರಿನ ಜಾತ್ರಾ ಸಮಯ ದಲ್ಲಿ ಪ್ರತಿ ನಿತ್ಯದ ಸೇವೆ/ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ಇದೆ ಎಂದು ಹೇಳಿದೆ.

ಐದು ದಿನ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಸ್ಥಳೀಯರು, ಜಿಲ್ಲೆಯವರಲ್ಲದೇ ಮಂಡ್ಯ, ರಾಮನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಐದು ದಿನವೂ ಇಲ್ಲೇ ವಾಸ್ತವ್ಯ ಮಾಡಿ ಹರಕೆ ತೀರಿಸುತ್ತಾರೆ.

ಕಳೆದ ವರ್ಷವೂ ಕೋವಿಡ್‌ ಕಾರಣಕ್ಕೆ ಅದ್ಧೂರಿ ಜಾತ್ರೆ ನಡೆದಿರಲಿಲ್ಲ. ಗರಿಷ್ಠ 100 ಜನರ ಮಿತಿಯಲ್ಲಿ ಎಲ್ಲ ಸಾಂಪ್ರದಾಯಿಕವಾಗಿ ಎಲ್ಲ ವಿಧಿ–ವಿಧಾನಗಳನ್ನು ನಡೆಸಲು ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿತ್ತು.

ಕಸ್ತೂರು ಬಂಡಿಜಾತ್ರೆಯೂ ಸರಳ?

ಸಂತೇಮರಹಳ್ಳಿ: ಕೋವಿಡ್‌ ನಿರ್ಬಂಧಗಳಿರುವುದರಿಂದ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಹೋಬಳಿಯ ಕಸ್ತೂರು ಬಂಡಿ ಜಾತ್ರೆ ಕೂಡ ರದ್ದಾಗುವ ಸಾಧ್ಯತೆ ನಿಚ್ಚಳವಾಗಿದೆ.

ಪುಷ್ಯ ಮಾಸದ ಎರಡನೇ ಭಾನುವಾರ ದೊಡ್ಡಮ್ಮತಾಯಿ ಬಂಡಿ ಜಾತ್ರೆ ನಡೆಯುತ್ತದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ 16 ಗ್ರಾಮಗಳ ಜಾತ್ರೆ ಇದಾಗಿದ್ದು, 23ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ.

ಇದೇ 16ರಂದು ಜಾತ್ರೆಯ ದಿನ ನಿಗದಿಯಾಗಿದೆ.ಜಾತ್ರೆಗೆ ಬಂಡಿ ಕಟ್ಟುವ ಗ್ರಾಮಸ್ಥರು ಹಾಗೂ ಹಬ್ಬ ಆಚರಿಸುವ ಗ್ರಾಮಸ್ಥರು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ಆದರೆ, ಕೋವಿಡ್‌ 3ನೇ ಅಲೆ ಕಾರಣಕ್ಕೆ ಸರ್ಕಾರ ನಿರ್ಬಂಧ ಹೇರಿರುವುದರಿಂದ ಜಿಲ್ಲಾಡಳಿತವು ಜಾತ್ರೆಯ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರಡಿಸಿಲ್ಲ.

‘ಪ್ರತಿ ವರ್ಷದಂತೆ ಹಬ್ಬ ಆಚರಿಸಲು ಎಲ್ಲ ಗ್ರಾಮಸ್ಥರು ಸೇರಿ ಸಭೆ ನಡೆಸಲಾಗುತಿತ್ತು. ಈ ಬಾರಿ ಇನ್ನು ಸಭೆ ಸೇರಿಲ್ಲ. ಜಿಲ್ಲಾಡಳಿತದ ಆದೇಶ ಕಾಯುತ್ತಿದ್ದೇವೆ’ ಎಂದು ಹೆಗ್ಗವಾಡಿ ಗ್ರಾಮದ ಮುಖಂಡ ಪರಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ, ‘ಕೋವಿಡ್ ಕಾರಣದಿಂದ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಬಂಡಿ ಜಾತ್ರೆ ಸೇರಿದಂತೆ ಯಾವುದೇ ಜಾತ್ರೆಗಳಿಗೆ ಅವಕಾಶವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT