ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚುನಾವಣೆ ತಯಾರಿ ಆರಂಭಿಸಿದ ಕಾಂಗ್ರೆಸ್‌

ಜಿಲ್ಲಾ ಕಾಂಗ್ರೆಸ್‌ನಿಂದ ನವ ಸಂಕಲ್ಪ ಚಿಂತನಾ ಶಿಬಿರ; ಏಳು ಸಮಿತಿ ರಚಿಸಿ ಚರ್ಚೆ
Last Updated 1 ಜುಲೈ 2022, 17:24 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಬರುವ ವಿಧಾನಸಭೆಗೆ ಜಿಲ್ಲಾ ಕಾಂಗ್ರೆಸ್‌ ಸಿದ್ಧತೆ ಆರಂಭಿಸಿದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನಡೆದ ಚಿಂತನಾ ಶಿಬಿರದ ಮಾದರಿಯಲ್ಲೇ ಜಿಲ್ಲೆಯಲ್ಲೂ ಶುಕ್ರವಾರ ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಿದ್ದು, ಪಕ್ಷ ಸಂಘಟನೆ ಹಾಗೂ ಚುನಾವಣೆ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತು.

ಪಕ್ಷ ಸಂಘಟನೆ, ಬೂತ್‌ ಕಮಿಟಿ ರಚನೆ, ಕೃಷಿ, ಕೈಗಾರಿಕೆ ಮತ್ತು ಆರೋಗ್ಯ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಸೇರಿದಂತೆ ಏಳು ಉಪ ಸಮಿತಿಗಳನ್ನು ರಚಿಸಿದ್ದು, ಆಯಾ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಮುಖಂಡರು ಚರ್ಚಿಸಿದರು.

ಚಿಂತನಾ ಶಿಬಿರದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ‘ಎಐಸಿಸಿ, ಕೆಪಿಸಿಸಿ ನಿರ್ದೇಶನದ ಮೇರೆಗೆ ಎಲ್ಲ ಜಿಲ್ಲೆಗಳಲ್ಲಿ ಪಕ್ಷದಿಂದ ಚಿಂತನಾ ಶಿಬಿರ ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ರಾಜಸ್ಥಾನದಲ್ಲಿ ಮೂರು ದಿನಗಳ ಕಾಲ ಶಿಬಿರ ನಡೆದಿತ್ತು. ರಾಜ್ಯದಲ್ಲಿ ಜೂನ್‌ 2 ಮತ್ತು 3ರಂದು ಚಿಂತನಾ ಶಿಬಿರ ನಡೆದಿತ್ತು. ಜಿಲ್ಲಾ ಮಟ್ಟದಲ್ಲೂ ನಡೆಸಬೇಕು ಎಂಬ ಉದ್ದೇಶದಿಂದ ಒಂದು ದಿನದ ಶಿಬಿರವನ್ನು ಎಲ್ಲ ಜಿಲ್ಲೆಗಳಲ್ಲೂ ಆಯೋಜಿಸಲಾಗಿದೆ’ ಎಂದರು.

‘ಪಕ್ಷ ಸಂಘಟನೆ, ಮುಂದಿನ ಚುನಾವಣೆಗೆ ಸಜ್ಜಾಗುವುದು, ಅದಕ್ಕೆ ಬೇಕಾದಂತಹ ತಯಾರಿ ಬಗ್ಗೆ ಚರ್ಚಿಸುವುದು ಈ ಶಿಬಿರದ ಉದ್ದೇಶ. ಅಲ್ಲದೇ ಜಿಲ್ಲೆಯ ಅಭಿವೃದ್ಧಿಗಾಗಿ ಪಕ್ಷವು ಪ್ರತ್ಯೇಕ ಪ್ರಣಾಳಿಕೆ ಹೊರಡಿಸಲಿದ್ದು, ಅದರ ಬಗ್ಗೆಯೂ ಶಿಬಿರದಲ್ಲಿ ಚರ್ಚೆ ನಡೆಯಲಿದೆ’ ಎಂದು ಹೇಳಿದರು.

ಮುಂದಿನ ಬಾರಿ ಕಾಂಗ್ರೆಸ್‌ ಸರ್ಕಾರ: ‘ಮುಂದಿನ ಬಾರಿ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್‌ ಸರ್ಕಾರ ಬರಲಿದೆ. ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 2018ರಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡಿದ್ದೆವು. ಲೋಕಸಭಾ ಚುನಾವಣೆಯಲ್ಲೂ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಮತ್ತೆ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಶಿಬಿರ ಸಮಗ್ರವಾಗಿ ಚಿಂತನೆ ಮಾಡಲಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಸ್ತುವಾರಿ ಚೆಲುವರಾಯಸ್ವಾಮಿ ಮಾತನಾಡಿ, ‘ಪಕ್ಷವು ವಿಭಿನ್ನವಾದ ರೀತಿಯಲ್ಲಿ ಜನರ ಹತ್ತಿರ ಹೋಗಬೇಕು ಎಂಬ ಉದ್ದೇಶದಿಂದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರು ಚಿಂತನಾ ಶಿಬಿರದ ಆಯೋಜನೆ ಮಾಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಏನೆಲ್ಲ ಸಮಸ್ಯೆಗಳನ್ನು ಗುರುತಿಸಿ, ಸಂಘಟನೆಗೆ ಸಂಬಂಧಿಸಿದಂತೆ ಮುಖಂಡರಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಅದನ್ನು ಸರಿಪಡಿಸಲು ಇದು ವೇದಿಕೆಯಾಗಲಿದೆ’ ಎಂದು ತಿಳಿಸಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಾಯಕತ್ವದಲ್ಲಿ ಧ್ರುವನಾರಾಯಣ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ’ ಎಂದು ಹೇಳಿದರು.

ಪಕ್ಷದ ಜಿಲ್ಲಾ ಉಸ್ತುವಾರಿಗಳಾದ ಬಸವರಾಜು, ಮಂಜುಳಾ ಮಾನಸ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ಮುಖಂಡರಾದ ಎ.ಆರ್‌.ಕೃಷ್ಣಮೂರ್ತಿ, ಎಸ್‌.ಜಯಣ್ಣ, ಬಾಲರಾಜು, ಎಂ.ಸಿ.ಮೋಹನಕುಮಾರಿ, ಕಾಗಲವಾಡಿ ಶಿವಣ್ಣ, ಗಣೇಶ್‌ ಪ್ರಸಾದ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಇದ್ದರು.

ಬಿಜೆಪಿಯಿಂದ ಮಲತಾಯಿ ಧೋರಣೆ

‘ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಏನೂ ಮಾಡಿಲ್ಲ. ಚಾಮರಾಜನಗರದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೆ ಬಂದಿಲ್ಲ. ಈಗಿನ ಬಸವರಾಜ ಬೊಮ್ಮಾಯಿ ಕೂಡ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿಲ್ಲ. ಇಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲೆಯ ಅಗತ್ಯಗಳಿಗೆ ಸ್ಪಂದಿಸುವ ಕೆಲಸವನ್ನು ಬಿಜೆಪಿ ಮಾಡಿಲ್ಲ’ ಎಂದು ಆರ್‌.ಧ್ರುವನಾರಾಯಣ ದೂರಿದರು.

‘ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಿದೆ’ ಎಂದು ಹೇಳಿದರು.

ಕಾನೂನಾತ್ಮಕ ಹೋರಾಟ: ಜಾರಿ ನಿರ್ದೇಶನಾಲಯವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ವಿಚಾರಣೆ ನಡೆಸುತ್ತಿರುವ ಬಗ್ಗೆ ಕೇಳಿದ್ದಕ್ಕೆ, ‘ಕಾನೂನಾತ್ಮಕವಾಗಿ ವಿಚಾರಣೆಗೆ ಶಿವಕುಮಾರ್‌ ಅವರು ಹಾಜರಾಗಿದ್ದಾರೆ. ಇದನ್ನು ಪಕ್ಷವು ಕಾನೂನಿನ ಅಡಿಯಲ್ಲೇ ಎದುರಿಸಲಿದೆ. ಇ.ಡಿ.ಯು ಬಿಜೆಪಿಯ ಅಂಗ ಸಂಸ್ಥೆಯಂತೆ ಕಾರ್ಯ ನಿರ್ವಹಿಸುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ವಕ್ತಾರ ಬಿಜೆಪಿ ವಿರುದ್ಧ ಟ್ವೀಟ್‌ ಮಾಡಿದ್ದಕ್ಕೆ ಅವರನ್ನೂ ಇ.ಡಿ ವಿಚಾರಣೆಗೆ ಕರೆದಿದೆ. ಎಲ್ಲ ರಾಜ್ಯಗಳಲ್ಲೂ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT