ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡಹಳ್ಳಿ: ಜನರಲ್ಲಿ ಆತಂಕ ತಂದ ಹುಲಿ, ಸಿಗದ ವ್ಯಾಘ್ರನ ಸುಳಿವು

ಎರಡು ದಿನಗಳಿಂದ ಕಾರ್ಯಾಚರಣೆ
Last Updated 6 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿಬೆಟ್ಟ ವಲಯದ ಅಂಚಿನಲ್ಲಿರುವ ಚೌಡಹಳ್ಳಿ ಗ್ರಾಮದ ಹೊರ ವಲಯದಲ್ಲಿ ಹುಲಿ ರೈತನ ಮೇಲೆ ದಾಳಿ ಮಾಡಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಹುಲಿ ಪತ್ತೆಯಾಗಿ ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಹುಲಿ ಕಂಡು ಬಂದಿಲ್ಲ. ಜಾನುವಾರನ್ನು ಬೇಟೆಯಾಡಲು ಹುಲಿ ಬಂದಿರಬಹುದು. ಕಾಡಿಗೆ ಮರಳಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಹಾಗಿದ್ದರೂ ಪತ್ತೆ ಕಾರ್ಯಾಚರಣೆ ಮುಂದುವರಿಸುವುದಾಗಿ ಹೇಳಿದ್ದಾರೆ.

ಬಂಡೀಪುರ ಕಾಡಿನ ಅಂಚಿನಲ್ಲಿರುವ ಚೌಡಹಳ್ಳಿ ಗ್ರಾಮದಲ್ಲಿ ರೈತರು ಜಾನುವಾರುಗಳನ್ನು ಮೇಯಿಸಲು ಬೀಳು ಭೂಮಿಗಳನ್ನು ಆಶ್ರಯಿಸಿದ್ದಾರೆ. ಇಂತಹ ಭೂಮಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಜಾನುವಾರುಗಳನ್ನು ಹೊರಗೆ ಬಿಡಲು ಮತ್ತು ರೈತರು ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ.

ಎರಡು ದಿನಗಳ ಹಿಂದೆ ರೈತರೊಬ್ಬರು ಕಾಡಂಚಿನ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಹುಲಿ ದಾಳಿಗೆ ಮುಂದಾಗಿದೆ. ರೈತ ದೊಣ್ಣೆ ಬೀಸಿದ ಪರಿಣಾಮ ಉಗುರಿನಿಂದ ಪರಚಿ ಓಡಿದೆ. ಅದೃಷ್ಟವಶಾತ್ ರೈತನಿಗೆ ಅಪಾಯವಾಗಿಲ್ಲ.

2019ರ ಅಕ್ಟೋಬರ್‌ನಲ್ಲಿ ಇದೇ ಗ್ರಾಮದ ಇಬ್ಬರು ರೈತರು ಹುಲಿ ದಾಳಿಗೆ ಬಲಿಯಾಗಿದ್ದರು. ನಂತರ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದಿತ್ತು. ಮೂರು ವರ್ಷಗಳ ಬಳಿಕ ಗ್ರಾಮಸ್ಥರು ಹುಲಿಯ ಭಯಕ್ಕೆ ತುತ್ತಾಗಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.

ಸೆರೆಗೆ ಆಗ್ರಹ: ಸೋಮವಾರ ಮತ್ತು ಮಂಗಳವಾರ ಸಂಜೆಯವರೆಗೂ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ರೈತರ ಜಮೀನಿನಲ್ಲಿ ಹುಲಿ ಪತ್ತೆಗೆ ಶೋಧ ನಡೆದಿದೆ. ಹುಲಿಯ ಚಲನವಲನಗಳು ಕಂಡುಬಂದಿಲ್ಲ.

‘ಹುಲಿಯಿಂದಾಗಿ ಗ್ರಾಮದಲ್ಲಿ ಈ ಹಿಂದೆ ಎರಡು ಜೀವಗಳು ಹೋಗಿವೆ. ಈಗ ಮತ್ತೆ ಹುಲಿ ಕಾಣಿಸಿಕೊಂಡಿರುವುದರಿಂದ ಭಯ ಶುರುವಾಗಿದೆ. ಸಂಜೆಯಾಗುತ್ತಿದ್ದಂತೆ ಮನೆ ಸೇರುತ್ತಿದ್ದಾರೆ. ದನಕರುಗಳನ್ನು ಜಮೀನಿಗೆ ಬೀಡಲು ಹೆದರುತ್ತಿದ್ದಾರೆ. ಶೀಘ್ರವಾಗಿ ಹುಲಿ ಪತ್ತೆ ಹಚ್ಚಿ ಸೆರೆ ಹಿಡಿಯಬೇಕು’ ಎಂದು ಗ್ರಾಮದ ಪ್ರವೀಣ್ ಕುಮಾರ್ ಒತ್ತಾಯಿಸಿದರು.

‘ಶೋಧ ಮುಂದುವರಿಕೆ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್‌, ‘ಹುಲಿಯ ಚಲನವಲನಗಳು ಕಂಡು ಬಂದಿಲ್ಲ. ಆದರೂ ಪತ್ತೆ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಜನರ ಸುರಕ್ಷತಾ ದೃಷ್ಟಿಯಿಂದ ಬುಧವಾರವೂ ಶೋಧ ನಡೆಸಲಾಗುವುದು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT