ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | 26 ವರ್ಷಗಳ ಬಳಿಕ ಚುಡಾ ಸ್ವಂತ ಬಡಾವಣೆ

ನಗರಾಭಿವೃದ್ಧಿ ಇಲಾಖೆಯಿಂದ ಒಪ್ಪಿಗೆ: ಮರಳ್ಳಿ ರಸ್ತೆ ಸಮೀಪ 14 ಎಕರೆ 24 ಗುಂಟೆಯಲ್ಲಿ ಬಡಾವಣೆ ನಿರ್ಮಾಣ
Published 30 ಜೂನ್ 2024, 7:19 IST
Last Updated 30 ಜೂನ್ 2024, 7:19 IST
ಅಕ್ಷರ ಗಾತ್ರ

ಚಾಮರಾಜನಗರ: 1998ರಲ್ಲಿ ಕಾರ್ಯಾರಂಭ ಮಾಡಿದ ಚಾಮರಾಜನಗರ–ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರವು (ಚುಡಾ) 26 ವರ್ಷಗಳ ಬಳಿಕ ಮೊದಲ ಸ್ವಂತ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿದೆ. ಈ ಮೂಲಕ ನಗರದಲ್ಲೊಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂಬ ಮಧ್ಯಮವರ್ಗದವರ ಕನಸು ನನಸಾಗುವ ನಿರೀಕ್ಷೆಗಳು ಗರಿಗೆದರಿವೆ.

ಎಲ್ಲಿ ಬಡಾವಣೆ ನಿರ್ಮಾಣ:

ಚಾಮರಾಜನಗರ ಹಾಗೂ ಮಸಗಾಪುರಕ್ಕೆ ಹೊಂದಿಕೊಂಡಂತಿರುವ ಮರಳ್ಳಿ ರಸ್ತೆಯ ಸಮೀಪದಲ್ಲಿ 14 ಎಕರೆ 24 ಗುಂಟೆ ಜಮೀನಿನಲ್ಲಿ ಹೊಸ ಬಡಾವಣೆ ನಿರ್ಮಾಣವಾಗಲಿದೆ. ಖಾಸಗಿ ಹಾಗೂ ಚುಡಾ ಸಹಭಾಗಿತ್ವದಲ್ಲಿ ₹ 12 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹಾಗೂ ಮಾದರಿ ಬಡಾವಣೆ ನಿರ್ಮಾಣ ಮಾಡಲು ಚುಡಾ ಕಾರ್ಯಯೋಜನೆ ರೂಪಿಸಿದೆ.

ಹೊಸ ಬಡಾವಣೆ ನಿರ್ಮಾಣ ಮಾಡುವ ಸಂಬಂಧ ಖಾಸಗಿ ಭೂಮಾಲೀಕರ ಜತೆ ಮಾತುಕತೆ ನಡೆಸಿದ ಚುಡಾ ರೈತರಿಂದ ಒಪ್ಪಿಗೆ ಪಡೆದಿತ್ತು. ಬಳಿಕ 2022ರಲ್ಲಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಶೀಘ್ರವೇ ಇ–ಟೆಂಡರ್ ಕರೆದು ಬಡಾವಣೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎನ್ನುತ್ತಾರೆ ಚುಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ ಮುನ್ನ.

ಬಡಾವಣೆಯಲ್ಲಿ ಏನೇನು ಇರಲಿದೆ:

ಹೊಸ ಬಡಾವಣೆಯಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ನಗರಕ್ಕೆ ಮಾದರಿಯಾದ ಬಡಾವಣೆ ನಿರ್ಮಾಣ ಮಾಡಲಾಗುವುದು. ಡಾಂಬಾರ್ ರಸ್ತೆ, ಉದ್ಯಾನವನ, ಒಳಚರಂಡಿ ವ್ಯವಸ್ಥೆ, ಪ್ರತಿ ನಿವೇಶನಗಳಿಂದ ಯುಜಿಡಿ ವ್ಯವಸ್ಥೆ, ವಿದ್ಯುತ್ ದೀಪ ಸೇರಿದಂತೆ ಸುಸಜ್ಜಿತ ಬಡಾವಣೆಯಲ್ಲಿ ಇರಬೇಕಾದ ಎಲ್ಲ ಸೌಲಭ್ಯಗಳು ಇರಲಿವೆ ಎನ್ನುತ್ತಾರೆ ಚುಡಾ ಅಧ್ಯಕ್ಷರು.

ಎಷ್ಟು ನಿವೇಶನಗಳ ರಚನೆ:

ಶೇ 50x50ರ ಅನುಪಾತದಲ್ಲಿ ಚುಡಾ ಹಾಗೂ ರೈತರ ನಡುವೆ ನಿವೇಶನಗಳು ಹಂಚಿಕೆಯಾಗಲಿದ್ದು 238 ನಿವೇಶನಗಳ ನಿರ್ಮಾಣ ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಅರ್ಧದಷ್ಟು ಭೂಮಾಲೀಕರಿಗೆ ದೊರೆಯಲಿದ್ದು ಉಳಿದರ್ಧ ನಿವೇಶನಗಳು ಚುಡಾ ಪಾಲಿಗೆ ಸಿಗಲಿವೆ.

ಪ್ರಾಧಿಕಾರಕ್ಕೆ ಲಭ್ಯವಾಗುವ ನಿವೇಶನಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪ್ರಕಾರ ನಿವೇಶನಗಳ ಹಂಚಿಕೆ ನಡೆಯಲಿದ್ದು ವೀರಪ್ಪನ್ ಕಾರ್ಯಾಚರಣೆಯಲ್ಲಿ ಮರಣಹೊಂದಿದವರ ಕುಟುಂಬ ಸದಸ್ಯರಿಗೆ, ಅಂಗವಿಕಲರಿಗೆ ಹಾಗೂ ಮಾಜಿ ಸೈನಿಕರಿಗೂ ಹಂಚಿಕೆಯಲ್ಲಿ ಮೀಸಲಾತಿ ದೊರೆಯಲಿದೆ ಎನ್ನುತ್ತಾರೆ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ.

ಯಾವ ಅಳತೆಯ ನಿವೇಶನಗಳು ಲಭ್ಯ:

ಬಡ ಹಾಗೂ ಮಧ್ಯಮ ವರ್ಗದವರ ನಿವೇಶನ ಸೂರು ನನಸಾಗಬೇಕು ಎಂಬ ಉದ್ದೇಶದಿಂದ 20x30, 30x40, 30x50 ಸೇರಿದಂತೆ ಹಲವು ಅಳತೆಗಳಲ್ಲಿ ನಿವೇಶನ ರಚನೆ ಮಾಡಲಾಗುತ್ತಿದೆ. ಖಾಸಗಿ ಬಡಾವಣೆಗಳಿಗೆ ಹೋಲಿಕೆ ಮಾಡಿದರೆ ದರ ಕಡಿಮೆ ಇರಲಿದ್ದು ಸೌಲಭ್ಯಗಳು ಹೆಚ್ಚಾಗಿರುತ್ತವೆ ಎನ್ನುತ್ತಾರೆ ಪ್ರಾಧಿಕಾರದ ಅಧ್ಯಕ್ಷರು.

ಅನಧಿಕೃತವಾಗಿ ನಿರ್ಮಾಣ ಮಾಡಿರುವ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಭೂ ಪರಿವರ್ತನೆಯಾಗದಿದ್ದರೂ ನಿವೇಶನ ರಚಿಸಿ ಮಾರಾಟ ಮಾಡಲಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು. ಅಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಮಾತ್ರ ನಿವೇಶನ ಖರೀದಿಸಬೇಕು ಎನ್ನುತ್ತಾರೆ ಚುಡಾ ಅಧಿಕಾರಿಗಳು.

ಮೊಹಮ್ಮದ್ ಅಸ್ಗರ್ ಮುನ್ನ ಚುಡಾ ಅಧ್ಯಕ್ಷ
ಮೊಹಮ್ಮದ್ ಅಸ್ಗರ್ ಮುನ್ನ ಚುಡಾ ಅಧ್ಯಕ್ಷ

‘ದರ ನಿರ್ಧಾರವಾಗಿಲ್ಲ’ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಹೊಸ ಬಡಾವಣೆಯ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎರಡು ವರ್ಷಗಳಲ್ಲಿ ಬಡಾವಣೆ ನಿರ್ಮಾಣಗೊಂಡು ಸಾರ್ವಜನಿಕರಿಗೆ ನಿವೇಶನಗಳು ಹಂಚಿಕೆಯಾಗಲಿವೆ. ಶೀಘ್ರ ಚುಡಾ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಪಡೆದು ನಿವೇಶನಗಳ ದರ ನಿರ್ಧಾರ ಮಾಡಲಾಗುವುದು. ಖಾಸಗಿ ಬಡಾವಣೆಗಳಿಗಿಂತ ದರ ಕಡಿಮೆ ಇರಲಿದೆ. –ಮೊಹಮ್ಮದ್ ಅಸ್ಗರ್ ಮುನ್ನ ಚುಡಾ ಅಧ್ಯಕ್ಷ

‘66 ಖಾಸಗಿ ಬಡಾವಣೆಗಳಿಗೆ ಅನುಮತಿ’ 1998ರಲ್ಲಿ ಆರಂಭವಾದ ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರವು ಇದುವರೆಗೂ 66 ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ಮೊದಲ ಬಾರಿಗೆ ಪಿಪಿಪಿ ಮಾದರಿಯಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಮುಂದೆಯೂ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಲು ಚುಡಾ ಬದ್ಧವಾಗಿದೆ. –ರಿತೇಶ್‌ ಚುಡಾ ಆಯುಕ್ತ (ಪ್ರಭಾರ)

ಗ್ರಾಫಿಕ್ಸ್‌ ಚುಡಾ ಆರಂಭ;1998 ಖಾಸಗಿ ಬಡಾವಣೆಗಳ ರಚನೆ;66 ಉದ್ದೇಶಿತ ಪಿಪಿಪಿ ಮಾದರಿ ಬಡಾವಣೆ;1 ಬಡಾವಣೆಯ ವಿಸ್ತೀರ್ಣ; 14 ಎಕರೆ 24 ಗುಂಟೆ ಅಂದಾಜು ನಿವೇಶನಗಳ ಲಭ್ಯತೆ: 238

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT