ಭಾನುವಾರ, ಅಕ್ಟೋಬರ್ 2, 2022
19 °C
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

ಮೂಲ ದಾಖಲೆ ವಾಪಸ್‌ ನೀಡದ ಐಡಿಬಿಐ ಬ್ಯಾಂಕ್‌ಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಸಾಲ ನೀಡುವ ಸಂದರ್ಭದಲ್ಲಿ ಗ್ರಾಹಕರಿಂದ ಪಡೆದಿದ್ದ ಮೂಲ ದಾಖಲೆಗಳನ್ನು ಸಾಲ ಮರುಪಾವತಿಯ ನಂತರ ನೀಡದ ಇಲ್ಲಿನ ಐಡಿಬಿಐ ಬ್ಯಾಂಕ್‌ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹41 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೇ 30 ದಿನಗಳ ಒಳಗಾಗಿ ಸಂಬಂಧಿಸಿದ ಇಲಾಖೆಗಳಿಂದ ದಾಖಲೆಗಳನ್ನು ಪಡೆದು ನೀಡಬೇಕು ಎಂದು ತಾಕೀತು ಮಾಡಿದೆ. 

ಕೊಳ್ಳೇಗಾಲದ ಡಾ.ಗಿರೀಶ್ ಎಂಬುವವರು 2016ರಲ್ಲಿ ನಗರದ ಐಡಿಬಿಐ ಬ್ಯಾಂಕ್‌ನಿಂದ ₹20 ಲಕ್ಷ ಸಾಲವನ್ನು ಪಡೆದಿದ್ದರು. ಇದಕ್ಕಾಗಿ ತಮ್ಮ ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿದ್ದರು. 2021ರಲ್ಲಿ ಎಲ್ಲ ಸಾಲ ಹಾಗೂ ಬಡ್ಡಿಯನ್ನು ಬ್ಯಾಂಕ್‍ಗೆ ಮರುಪಾವತಿ ಮಾಡಿದ್ದರು.

ಸಾಲ ಪಡೆಯಲು ಬ್ಯಾಂಕ್‌ಗೆ ನೀಡಿದ್ದ ಮನೆಯ ಮೂಲ ಖರೀದಿ ಪತ್ರ, ಮನೆಯ ಪರವಾನಗಿ, ಮನೆಯ ಪ್ಲಾನ್ ಹಾಗೂ ಇತರೆ ದಾಖಲೆಗಳನ್ನು ವಾಪಸ್‌ ನೀಡಲು ಬ್ಯಾಂಕ್‌ ಅಧಿಕಾರಿಗಳು  ಸತಾಯಿಸುತ್ತಿದ್ದರು. ಇದರಿಂದ ಬೇಸತ್ತ ಗಿರೀಶ್ ಅವರು ಈ ವರ್ಷದ ಫೆಬ್ರುವರಿ 14ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. 

ಶಾರ್ಟ್‌ ಸರ್ಕಿಟ್‌ನಿಂದಾಗಿ ಮೂಲ ದಾಖಲೆಗಳು ಸುಟ್ಟು ಹೋಗಿವೆ ಎಂದು ಬ್ಯಾಂಕ್‌ ವಿಚಾರಣೆ ಸಂದರ್ಭದಲ್ಲಿ ತಿಳಿಸಿತ್ತು. 

ಎರಡು ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರಾದ ಎ.ಕೆ.ನವೀನ್‌ಕುಮಾರಿ, ಸದಸ್ಯರಾದ ಶ್ರೀನಿಧಿ ಎಚ್‌.ಎನ್‌  ಹಾಗೂ ಭಾರತಿ ಎಂ.ವಿ. ಅವರಿದ್ದ ಪೀಠವು ಅರ್ಜಿದಾರರ ವಾದವನ್ನು ಭಾಗಶಃ ಪುರಸ್ಕರಿಸಿದ್ದು, ದೂರುದಾರರು ಸಾಲ ಪಡೆಯುವ ವೇಳೆ ಸಲ್ಲಿಸಿದ್ದ ಎಲ್ಲ ಮೂಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದು, 30 ದಿನಗಳ ಒಳಗಾಗಿ ನೀಡಬೇಕು ಎಂದು ಹೇಳಿದೆ. 

ಅಲ್ಲದೆ, ಸೇವಾ ನ್ಯೂನತೆ ಹಾಗೂ ಪರಿಹಾರವಾಗಿ ₹25 ಸಾವಿರ, ಆಯೋಗದಿಂದ ವಿಧಿಸಲಾದ ಖರ್ಚು ₹1,000, ದೂರುದಾರರಿಗೆ ನೀಡಿರುವ ಮಾನಸಿಕ ವೇದನೆಗೆ ₹10 ಸಾವಿರ ಪರಿಹಾರ ಹಾಗೂ ಪ್ರಕರಣದ ಖರ್ಚು ₹5,000 ಮೊತ್ತವನ್ನು ತಿಂಗಳ ಒಳಗಾಗಿ ಪಾವತಿಸಬೇಕು ಎಂದು ಜುಲೈ 20ರಂದು ಹೊರಡಿಸಿರುವ ಆದೇಶದಲ್ಲಿ ಆಯೋಗ ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು