ಗುರುವಾರ , ಜೂಲೈ 9, 2020
23 °C
ಮೂರು ವರ್ಷದ ಕಂದಮ್ಮನಿಗೆ ಅಜ್ಜ, ಅಜ್ಜಿಯೇ ದಿಕ್ಕು

ನಾಲೆಗೆ ಹಾರಿದ ದಂಪತಿ: ಮಗ ಈಗ ಅನಾಥ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಬಾಗಳಿ–ದೇಮಹಳ್ಳಿಯ ಗ್ರಾಮಗಳ ನಡುವೆ ಹರಿಯುವ ಕಬಿನಿ ಬಲದಂಡೆ ನಾಲೆಗೆ ಹಾರಿ, ನೀರು ಪಾಲಾಗಿರುವ ಕೆಂಪಣ್ಣ (37) ಹಾಗೂ ಅವರ ಪತ್ನಿ ಪೂರ್ಣಿಮಾ (27) ಮಂಗಳವಾರ ರಾತ್ರಿವರೆಗೂ ಪತ್ತೆಯಾಗಿಲ್ಲ. ಇಬ್ಬರೂ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆಯಾಗಿದ್ದು, ಬುಧವಾರ ಬೆಳಿಗ್ಗೆ ಪತ್ತೆ ಕಾರ್ಯಾಚರಣೆ ಮುಂದುರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಇತ್ತ, ಈ ಘಟನೆಗೆ ಮೂಕ ಪ್ರೇಕ್ಷಕನಾಗಿದ್ದ ‌ಅವರ ಮೂರು ವರ್ಷದ ಮಗ ಹೃತ್ವಿಕ್‌ಗೆ ಏನಾಗಿದೆ ಎಂಬುದರ ಅರಿವೇ ಇಲ್ಲದೆ ತನ್ನ ತಂದೆ–ತಾಯಿ ವಾಪಸ್‌ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾನೆ.

ಇನ್ಮುಂದೆ ಅಜ್ಜ–ಅಜ್ಜಿಯೇ (ತಂದೆಯ ಅಪ್ಪ ಅಮ್ಮ) ಅವನನ್ನು ನೋಡಬೇಕಿದೆ. ಮಗುವಿನ ಸ್ಥಿತಿಗೆ ಕುಟುಂಬದರು, ಗ್ರಾಮಸ್ಥರು ಮರುಗುತ್ತಿದ್ದಾರೆ. ನಾಲೆಯಲ್ಲಿ ಕೆಂಪಣ್ಣ–ಪೂರ್ಣಿಮಾ ಅವರಿಗಾಗಿ ಹುಡುಕಾಟ ನಡೆಯುತ್ತಿದ್ದರೆ, ಹೃತ್ವಿಕ್‌ ಮನೆಯ ಜಗುಲಿಯಲ್ಲಿ ಸುಮ್ಮನೆ ಕುಳಿತಿದ್ದ. 

ನಾಲೆಗೆ ಹಾರಿದ ಪೂರ್ಣಿಮಾ ಅವರನ್ನು ರಕ್ಷಿಸುವುದಕ್ಕಾಗಿ ಕೆಂಪಣ್ಣ ಮಗನನ್ನು ದ್ವಿಚಕ್ರ ವಾಹನದಲ್ಲೇ ಬಿಟ್ಟು ನಾಲೆಗೆ ಇಳಿದರು. ಈ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ನೀರಿಗೆ ಹಾರಿದ್ದನ್ನು ಲಿಂಗಣಾಪುರದ ವ್ಯಕ್ತಿಯೊಬ್ಬರು ನೋಡಿದ್ದಾರೆ.  

ಅವರು ನಾಲೆಯ ಇನ್ನೊಂದು ಬದಿಯಲ್ಲಿದ್ದರು. ಇಬ್ಬರೂ ನಾಲೆಗೆ ಹಾರಿದ್ದನ್ನು ನೋಡಿ ಕೂಗಿದ್ದಾರೆ. ಮತ್ತೊಂದು ಬದಿಗೆ ಬಂದು ತಮ್ಮ ಪಂಚೆಯನ್ನು ಇಳಿ ಬಿಟ್ಟು ರಕ್ಷಿಸಲು ನೋಡಿದ್ದಾರೆ. ನೀರು ರಭಸವಾಗಿ ಹರಿಯುತ್ತಿದ್ದುದರಿಂದ ಇಬ್ಬರೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ದ್ವಿಚಕ್ರ ವಾಹನದಲ್ಲಿದ್ದ ಮಗುವನ್ನು ಅವರೇ ಸಂತೈಸುತ್ತಾ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. 

ವಿಷಯ ತಿಳಿಯುತ್ತಿದ್ದಂತೆ ದೇಮಹಳ್ಳಿ, ಬಾಗಳಿ, ಲಿಂಗಣಾಪುರ, ಕಮರವಾಡಿ, ಬಾಣಹಳ್ಳಿ, ಆಲ್ದೂರು ಗ್ರಾಮಗಳಿಂದ ಜನರು ತಂಡೋಪ ತಂಡವಾಗಿ ಬಂದು ಘಟನೆಗೆ ಮರುಕ ವ್ಯಕ್ತಪಡಿಸಿದ್ದರು. ದಂಪತಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗುವನ್ನಾದರೂ ನೋಡಿ ಬದುಕಬಾರದೇ ಎಂದು ರೋದಿಸುತ್ತಿದ್ದ ಅವರನ್ನು ಕಂಡು ನೆರೆದಿದ್ದವರ ಕಣ್ಣಾಲಿಗಳೂ ಒದ್ದೆಯಾದವು. 

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಬಂದು ಇಬ್ಬರಿಗಾಗಿ ಹುಡುಕಾಟ ನಡೆಸಿದರು. 

‘ರಾತ್ರಿವರೆಗೂ ಹುಡುಕಾಟ ನಡೆಸಿದರೂ ಇಬ್ಬರೂ ಪತ್ತೆಯಾಗಿಲ್ಲ. ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಕುದೇರು ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸಿದ್ದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕು ವರ್ಷದ ದಾಂಪತ್ಯ

ಕೆಂಪಣ್ಣ ಆಲ್ದೂರು ಗ್ರಾಮದವ ರಾದ ಪೂರ್ಣಿಮಾ ಅವರನ್ನು ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದರು. ಸೋಮವಾರ ಸಂಜೆ ದಂಪತಿ ಮಗನೊಂದಿಗೆ ಪೂರ್ಣಿಮಾ ತವರು ಮನೆ ಆಲ್ದೂರಿಗೆ ಹೋಗಿದ್ದರು. ಮಂಗಳವಾರ ದೇಮಹಳ್ಳಿ ಗ್ರಾಮಕ್ಕೆ ವಾಪಸ್‌ ಆಗುವ ಸಂದರ್ಭದಲ್ಲಿ ಕಬಿನಿ ನೀರು ಪಾಲಾಗಿದ್ದಾರೆ. 

ಇಬ್ಬರ ನಡುವೆ ಮನಸ್ತಾಪ ಇತ್ತು. ದ್ವಿಚಕ್ರವಾಹನದಲ್ಲಿ ಬರುವಾಗ ಜಗಳ ಆಗಿರಬೇಕು. ಗಾಡಿ ನಿಲ್ಲಿಸಲು ಹೇಳಿದ ಪೂರ್ಣಿಮಾ ನೇರವಾಗಿ ನಾಲೆಗೆ ಹಾರಿರಬೇಕು. ಆಕೆಯನ್ನು ರಕ್ಷಿಸುವ ಉದ್ದೇಶ ದಿಂದ ಕೆಂಪಣ್ಣ ಅವರೂ ಹಾರಿರಬೇಕು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು