ಶುಕ್ರವಾರ, ಡಿಸೆಂಬರ್ 4, 2020
23 °C

ಕೋವಿಡ್: ವಿಶೇಷ ಜಾಗೃತಿ ಪ್ರಚಾರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್-19 ತಡೆ ಕುರಿತು ಬೃಹತ್ ಎಲ್ಇಡಿ ಪರದೆಯ ವಾಹನಗಳಲ್ಲಿ ’ದೃಶ್ಯ-ಶ್ರವ್ಯ’ದ ಮೂಲಕ ಜನಜಾಗೃತಿ ಮೂಡಿಸುವ ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ಕೆ ಶನಿವಾರ ನಗರದಲ್ಲಿ ಚಾಲನೆ ನೀಡಲಾಯಿತು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಜಾಗೃತಿ ಪ್ರಚಾರ ವಾಹನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ‌ ಸಾರಾ ಥಾಮಸ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರು ಹಸಿರು ನಿಶಾನೆ ತೋರಿದರು. 

ಕೋವಿಡ್-19 ಹರಡದಂತೆ ಜನರು ವಹಿಸಬೇಕಿರುವ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಜಿಲ್ಲೆಯ 180 ಗ್ರಾಮಗಳಲ್ಲಿ ಪ್ರತೀ ದಿನ 10 ಗ್ರಾಮಗಳಂತೆ ತಲಾ ಎರಡು ವಾಹನಗಳು ಎಲ್ಇಡಿ ಪರದೆಯ ಮೂಲಕ ಜಾಗೃತಿ ಮೂಡಿಸಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಅವರು, ‘ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸುವ ನಿಟ್ಟಿನಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಎಲ್ಇಡಿ ವಾಹನಗಳ ಮೂಲಕ ಹಮ್ಮಿಕೊಳ್ಳಲಾಗಿದ್ದು, ಈ ಪ್ರಚಾರ ವಾಹನಗಳು 18 ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸಲಿವೆ’ ಎಂದರು.

‘ಯಾವುದೇ ಬಗೆಯ ಜ್ವರವಿದ್ದರೂ ಜನರು ಅತಂಕಕ್ಕೆ ಒಳಗಾಗದೇ ಆಸ್ಪತ್ರೆ ಹಾಗೂ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆ ಅಥವಾ ಮನೆಯ ಹೊರಗಡೆ ಇದ್ದರೂ ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್ ವಿರುದ್ಧ ಹೋರಾಟಕ್ಕೆ ಮುಂದಾಬೇಕು’ ಎಂದು ಹೇಳಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಅವರು ಮಾತನಾಡಿ, ‘ಚಳಿಗಾಲದಲ್ಲಿ ಹಬ್ಬ, ಜಾತ್ರೆಗಳು ಹೆಚ್ಚಾಗಿ ನಡೆಯುವ ಸಂದರ್ಭದಲ್ಲಿ ಜನರಿಗೆ ಕೋವಿಡ್ ವಿರುದ್ಧ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಎಲ್ಇಡಿ ವಾಹನಗಳ ಮೂಲಕ ಪ್ರಚಾರ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.

‘ಮಾಸ್ಕ್, ಸ್ಯಾನಿಟೈಸರ್ ಬಳಸಿ ಸುರಕ್ಷಿತ ಅಂತರ ಕಾಪಾಡಿಕೊಳ್ಳದಿದ್ದರೆ ಕೋವಿಡ್‌ನಿಂದ ಮುಕ್ತವಾಗಲು ಸಾಧ್ಯವಿಲ್ಲ. ಮಾಸ್ಕ್ ನಮಗೆ ಲಸಿಕೆಯಾಗಿದೆ. ಸುರಕ್ಷಿತ ಅಂತರವೇ ಚಿಕಿತ್ಸೆಯಾಗಿದೆ. ಕೋವಿಡ್ ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಮಾರ್ಗಸೂಚಿಯನ್ನು ಅನುಸರಿಸಿದರೆ ಕೋವಿಡ್‌ ಅನ್ನು ದೂರ ಇಡಬಹುದು’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ.ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಬಿ.ಬಸವರಾಜು, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು