ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸಾವಿರ ತಲುಪಿದ ಪರೀಕ್ಷೆ, ಮತ್ತೆ ಕುಸಿದ ಪ್ರಕರಣ

ಶೇ 82 ಮಂದಿಗೆ 2ನೇ ಡೋಸ್‌; 2,436 ಮಂದಿಗೆ ಮೂರನೇ ಡೋಸ್‌
Last Updated 15 ಜನವರಿ 2022, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಶನಿವಾರ 3,010 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 93 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

26 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಪ್ರಕರಣ ವರದಿಯಾಗಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ 612ಕ್ಕೆ ಏರಿದೆ. ಐಸಿಯುನಲ್ಲಿ ಯಾರೂ ಇಲ್ಲ. 231 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಶನಿವಾರ ಸೋಂಕು ದೃಢಪಟ್ಟ 93 ಮಂದಿಯಲ್ಲಿ 77 ಜನರನ್ನು ಹೋಂ ಐಸೊಲೇಷನ್‌ಗೆ ಕಳುಹಿಸಿದ್ದಾರೆ.

ಸೋಂಕಿತರ 270 ಪ್ರಾಥಮಿಕ ಸಂಪರ್ಕಿತರು ಹಾಗೂ 360 ದ್ವಿತೀಯ ಸಂಪರ್ಕಿತರನ್ನು ಜಿಲ್ಲಾಡಳಿತ ಗುರುತಿಸಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ.

ಪರೀಕ್ಷೆ ಹೆಚ್ಚಳ: ಎರಡು ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಹೆಚ್ಚಿದೆ. ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಪ್ರತಿ ದಿನ 5,000 ಪರೀಕ್ಷೆಗಳನ್ನು ನಡೆಸುವ ಗುರಿ ನೀಡಿದ್ದು, ಸದ್ಯ ಪರೀಕ್ಷೆಗಳ ಸಂಖ್ಯೆ 3,000 ತಲುಪಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಯ ಜೊತೆಗೆ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೂ ಜಿಲ್ಲಾಡಳಿತ ಒತ್ತು ನೀಡಿದೆ.

ಶನಿವಾರ ವರದಿ ಬಂದ 3,010 ಕೋವಿಡ್ ಪರೀಕ್ಷೆಗಳಲ್ಲಿ 2,100 ಪರೀಕ್ಷೆಗಳು ಆರ್‌ಟಿಪಿಸಿಆರ್‌ ವಿಧಾನದಲ್ಲಿ ಆಗಿದ್ದರೆ, 910 ಪರೀಕ್ಷೆಗಳು ರ‍್ಯಾಪಿಡ್‌ ಆ್ಯಂಟಿಜೆನ್‌ ವಿಧಾನದಲ್ಲಿ ಮಾಡಲಾಗಿದೆ.

ಹೆಚ್ಚಬೇಕು ಪರೀಕ್ಷೆ: ಮೂರ್ನಾಲ್ಕು ದಿನಗಳ ಹಿಂದೆ ಓಂ ಶಕ್ತಿ ಯಾತ್ರೆಯಿಂದ ಬಂದವರ ಪರೀಕ್ಷೆ ಮಾಡುವಾಗ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಹನೂರಿನ ಒಡೆಯರಪಾಳ್ಯದ ಟಿಬೆಟನ್‌ ನಿರಾಶ್ರಿತರ ಶಿಬಿರದಲ್ಲೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈ ಕಾರಣದಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರಬಹುದು ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು.

‘ಮೂರನೇ ಅಲೆಯಲ್ಲಿ ಹಿಂದಿನ ಎರಡು ಅಲೆಗಳ ರೀತಿಯಲ್ಲಿ ಗಂಭೀರ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ಗಂಟಲು ನೋವು, ನೆಗಡಿ ಕೆಮ್ಮು ಮಾತ್ರ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಪರೀಕ್ಷೆಗೆ ಮುಂದಾಗುತ್ತಿಲ್ಲ. ಹೊರಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲವೇ ಔಷಧ ಅಂಗಡಿಗಳಿಂದ ಮಾತ್ರೆ ತೆಗೆದುಕೊಂಡು ಸೇವಿಸಿ ಮನೆಯಲ್ಲೇ ಇದ್ದಾರೆ. ಹೀಗಾಗಿ ಹೆಚ್ಚು ಪ್ರಕರಣಗಳು ದೃಢಪಡುತ್ತಿಲ್ಲ. ರೋಗ ಲಕ್ಷಣ ಹೊಂದಿರುವವರ ಪರೀಕ್ಷೆ ನಡೆಸಿದರೆ, ಹೆಚ್ಚು ಪ್ರಕರಣಗಳು ವರದಿಯಾಗುತ್ತವೆ’ ಎಂದು ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಹೆಚ್ಚು: ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಕೋವಿಡ್‌ ಪ್ರಕರಣಗಳಲ್ಲಿ ಗ್ರಾಮೀಣ ಭಾಗದ ಪ್ರಕರಣಗಳೇ ಹೆಚ್ಚಿವೆ.

ಶನಿವಾರ ದೃಢಪಟ್ಟ 93 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 30, ಗುಂಡ್ಲುಪೇಟೆಯ 20, ಕೊಳ್ಳೇಗಾಲದ 21, ಹನೂರಿನ 19 ಹಾಗೂ ಯಳಂದೂರು ತಾಲ್ಲೂಕಿನ ಮೂರು ಪ್ರಕರಣಗಳು ಸೇರಿವೆ. ಸೋಂಕಿತ 93 ಜನರಲ್ಲಿ 11 ಮಕ್ಕಳಿದ್ದಾರೆ.

ನಗರ ಪ್ರದೇಶಗಳಲ್ಲಿ 20 ಪ್ರಕರಣಗಳು ದೃಢಪಟ್ಟರೆ, 73 ಪ್ರಕರಣಗಳು ಗ್ರಾಮೀಣ ಭಾಗಕ್ಕೆ ಸೇರಿದವು. ಚಾಮರಾಜನಗರ ತಾಲ್ಲೂಕಿನಲ್ಲಿ 22 ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆ ಹಾಗೂ ಯಳಂದೂರು ತಾಲ್ಲೂಕಿನ ಹಳ್ಳಿಗಳಲ್ಲಿ ತಲಾ 19 ಪ್ರಕರಣಗಳು ದೃಢಪಟ್ಟಿವೆ.

ಲಸಿಕಾಕರಣ ಇನ್ನಷ್ಟು ತ್ವರಿತ

ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವ ನಡುವೆಯೇ ಜಿಲ್ಲೆಯಲ್ಲಿ ಕೋವಿಡ್‌ ಲಸಿಕಾಕರಣಕ್ಕೂ ಮತ್ತಷ್ಟು ವೇಗ ಸಿಕ್ಕಿದೆ.

ಮೊದಲ ಡೋಸ್‌ ನೀಡಿಕೆ ಶೇ 99ರಷ್ಟು ಪೂರ್ಣಗೊಂಡಿದೆ. ಶೇ 82ರಷ್ಟು ಮಂದಿ ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ 2,436 ಮಂದಿ ಬೂಸ್ಟರ್‌ (ಮೂರನೇ) ಡೋಸ್‌ ಲಸಿಕೆ ಪಡೆದಿದ್ದಾರೆ.

‘ಕೋವಿಡ್‌ ಎದುರಿಸಲು ಸದ್ಯಕ್ಕೆ ನಮ್ಮಲ್ಲಿರುವ ಅಸ್ತ್ರ ಎಂದರೆ ಲಸಿಕೆ. ಹಾಗಾಗಿ, ಲಸಿಕೆ ಪಡೆಯಲು ಅರ್ಹರಿರುವ ಎಲ್ಲರಿಗೂ ಲಸಿಕೆ ನೀಡಲು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಮೊದಲ ಡೋಸ್‌ ಲಸಿಕೆಯನ್ನು ಬಹುತೇಕ ಎಲ್ಲರಿಗೂ ನೀಡಿದ್ದೇವೆ. ಎರಡನೇ ಡೋಸ್‌ ಲಸಿಕಾಕರಣವೂ ವೇಗ ಪಡೆದಿದೆ. 15ರಿಂದ 18 ವರ್ಷದೊಳಗಿನ 35,529 ಮಕ್ಕಳಿಗೆ ಲಸಿಕೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ತಿಳಿಸಿದರು.

--

ಕೋವಿಡ್‌ ಪರೀಕ್ಷೆಗಳಿಗೆ ಒತ್ತು ನೀಡುವುದರ ಜೊತೆಗೆ, ಲಸಿಕೆ ನೀಡುವುದಕ್ಕೂ ಗಮನ ಹರಿಸಿದ್ದೇವೆ. ಜನರು ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆಯಬೇಕು
- ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT