ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಕೋವಿಡ್‌ 2ನೇ ಅಲೆ: ಪ್ರವಾಸೋದ್ಯಮಕ್ಕೆ ಹೊಡೆತ

ಬಂಡೀಪುರ: ಕುಸಿದ ಪ್ರವಾಸಿಗರ ಸಂಖ್ಯೆ, ಹೋಟೆಲ್‌, ರೆಸಾರ್ಟ್‌, ವ್ಯಾಪಾರಿಗಳಿಗೂ ನಷ್ಟ
Last Updated 19 ಏಪ್ರಿಲ್ 2021, 15:47 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಾಲ್ಲೂಕಿನ ಪ್ರವಾಸೋದ್ಯಮ ನೆಲ ಕಚ್ಚಿದೆ. ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬರುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಕೇರಳ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯದ ವಿವಿಧ ಭಾಗಗಳಿಂದ ಬಂಡೀಪುರ ಸಫಾರಿಗೆ ಜನರು ಬರುತ್ತಿದ್ದರು. ಕಳೆದ ವರ್ಷ ಲಾಕ್‌ಡೌನ್‌ ಪೂರ್ಣವಾಗಿ ತೆರವುಗೊಳಿಸಿದ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಈ ವರ್ಷದ ಆರಂಭದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ತಲುಪಿತ್ತು. ಮತ್ತೆ ಪ್ರಕರಣಗಳು ಏರುಮುಖವಾಗುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

ತಾಲ್ಲೂಕಿನಲ್ಲಿ ಪ್ರವಾಸ್ಯೋದ್ಯಮವನ್ನು ಹಲವರು ಅವಲಂಬಿಸಿದ್ದಾರೆ.ಎರಡು ವಾರಗಳಿಂದ ಕೇರಳ ಮತ್ತು ತಮಿಳುನಾಡಿನ ಭಾಗದಿಂದ ಬರುವವರು ತೀವ್ರ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ ತಾಲ್ಲೂಕಿನ ಹೊಟೇಲ್, ರೆಸಾರ್ಟ್ ಮತ್ತು ಮದ್ಯದಂಗಡಿ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಿದೆ.

‘ಬೇಸಿಗೆ ಆಗಿರುವುದರಿಂದ ವಾಹನಗಳು ಹೆಚ್ಚಿದ್ದರೆ ಪ್ರತಿದಿನ ನೂರಕ್ಕೂ ಹೆಚ್ಚಿನ ಎಳನೀರು ಮಾರಾಟ ಆಗುತ್ತಿತ್ತು. ಒಂದು ವಾರದಿಂದ ಐದು ಎಳನೀರು ಕೂಡ ವ್ಯಾಪಾರ ಆಗುತ್ತಿಲ್ಲ’ ಎಂದು ಎಳನೀರು ವ್ಯಾಪಾರಿ ಕಲ್ಲಿಗೌಡನಹಳ್ಳಿ ಲಿಂಗರಾಜ ತಿಳಿಸಿದರು.

‘ಕಳೆದ ವರ್ಷದಂತೆ ಈ ವರ್ಷವೂ ಸಹ ವಸತಿ ಗೃಹ ಖಾಲಿ ಇದೆ. ಜನವರಿ ನಂತರ ಪ್ರವಾಸೋದ್ಯಮ ಚೇತರಿಕೆ ಆಗುತ್ತದೆ ಎಂಬ ನಂಬಿಕೆಯಲ್ಲಿ ಇದ್ದೆವು. ಆದರೆ ಎಲ್ಲವೂ ಹುಸಿಯಾಯಿತು. ಸಿಬ್ಬಂದಿಗೆ ಸಂಬಳ ನೀಡಲೂ ತೊಂದರೆಯಾಗುತ್ತಿದೆ’ ಎಂದು ಖಾಸಗಿ ರೆಸಾರ್ಟ್ ವ್ಯವಸ್ಥಾಪಕರೊಬ್ಬರು ತಿಳಿಸಿದರು.

ಕೋವಿಡ್ ಕಾರಣದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀದಿಬದಿ ವ್ಯಾಪಾರಿಗಳು, ಬೇಕರಿ ಉದ್ಯಮ ಮತ್ತು ಹೋಂ ಸ್ಟೇಗಳು ನಷ್ಟ ಅನುಭವಿಸುವಂತಾಗಿದೆ.

‘ಕಳೆದ ತಿಂಗಳಿನವರೆಗೂ ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಿತ್ತು. ಆದರೆ ಕೇರಳ ಮತ್ತು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಕಾರಣ ಈಗ ಪ್ರವಾಸಿಗರು ಬರುತ್ತಿಲ್ಲ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರ ಕೇವಲ 12 ಮಂದಿ ಸಫಾರಿಗೆ ಬಂದಿದ್ದಾರೆ. ಶನಿವಾರ ಮತ್ತು ಭಾನುವಾರವೂ ಪ್ರವಾಸಿಗರ ಸಂಖ್ಯೆ ಭಾರಿ ಕಡಿಮೆ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT