ಗುರುವಾರ , ಫೆಬ್ರವರಿ 25, 2021
19 °C
ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದ ವಾರಿಯರ್‌ಗಳು, ಆರು ಕೇಂದ್ರಗಳಲ್ಲಿ, 378 ಮಂದಿಗೆ ಲಸಿಕೆ

ಕೋವಿಡ್‌ ಲಸಿಕೆ ಅಭಿಯಾನ; ಚಾಮರಾಜನಗರದಲ್ಲಿ ಶೇ 64 ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಲಸಿಕಾ ಅಭಿಯಾನಕ್ಕೆ ಜಿಲ್ಲೆಯಲ್ಲೂ ಶನಿವಾರ ಚಾಲನೆ ಸಿಕ್ಕಿದ್ದು, ಮೊದಲ ದಿನ ಬಹುತೇಕ ಯಶಸ್ವಿಯಾಗಿದೆ. 

ಜಿಲ್ಲೆಯ ಆರು ಕೇಂದ್ರಗಳಲ್ಲಿ 589 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. 378 ಮಂದಿ ಲಸಿಕೆ ಹಾಕಿಸಿಕೊಂಡಿದ್ದು, ಶೇ 64ರಷ್ಟು ಸಾಧನೆಯಾಗಿದೆ.

ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್ ಎರಡೂ‌ ಲಸಿಕೆಗಳನ್ನು ಜಿಲ್ಲೆಯಲ್ಲಿ ಕೊರೊನಾ ವಾರಿಯರ್‌ಗಳಿಗೆ ಹಾಕಲಾಗಿದೆ. ಲಸಿಕೆ ಪಡೆದುಕೊಂಡವರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ. 

ಶನಿವಾರ ನೀಡಿದ್ದು ಮೊದಲ ಡೋಸ್‌ ಆಗಿದ್ದು, ಇನ್ನು 22 ದಿನಗಳ ನಂತರ ಇವತ್ತು ಲಸಿಕೆ ಹಾಕಿಸಿಕೊಂಡವರು ಇನ್ನೊಂದು ಡೋಸ್‌ ಹಾಕಿಸಿಕೊಳ್ಳಬೇಕಾಗುತ್ತದೆ. 

ಚಾಮರಾಜನಗರದ ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜು, ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆ, ಯಳಂದೂರು ತಾಲ್ಲೂಕು ಆಸ್ಪತ್ರೆ, ಕೊಳ್ಳೇಗಾಲ ಉಪವಿಭಾಗೀಯ ಆಸ್ಪತ್ರೆ ಹಾಗೂ ನಗರದ ಆರೋಗ್ಯ ಕೇಂದ್ರ ಹಾಗೂ ಹನೂರು ತಾಲ್ಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿತ್ತು. 

ಜಿಲ್ಲೆಯಲ್ಲಿ ಗುರುತಿಸಿರುವ 6,363 ಮಂದಿಯ ಪೈಕಿ ಮೊದಲ ಹಂತದಲ್ಲಿ 814 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಅಭಿಯಾನದ ಮೊದಲ ದಿನ ಯಳಂದೂರಿನ ಕೇಂದ್ರ (89) ಬಿಟ್ಟರೆ ಉಳಿದ ಎಲ್ಲ ಕಡೆಗಳಲ್ಲಿ ತಲಾ 100 ಮಂದಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಷ್ಟೂ ಜನರು ಮೊದಲ ದಿನ ಲಸಿಕೆ ಪಡೆಯಲು ಮನಸ್ಸು ಮಾಡಲಿಲ್ಲ. 

ಚಾಮರಾಜನಗರದಲ್ಲಿ 60 ಮಂದಿ, ಗುಂಡ್ಲುಪೇಟೆಯಲ್ಲಿ 66, ಕೊಳ್ಳೇಗಾಲ ಉಪವಿಭಾಗೀಯ ಆಸ್ಪತ್ರೆಯಲ್ಲಿ 54, ಕೊಳ್ಳೇಗಾಲ ನಗರ ಕೇಂದ್ರದಲ್ಲಿ 70, ಯಳಂದೂರಿನಲ್ಲಿ 59 ಹಾಗೂ ರಾಮಾಪುರದಲ್ಲಿ 69 ಕೊರೊನಾ ವಾರಿಯರ್‌ಗಳು ಲಸಿಕೆ ಹಾಕಿಸಿಕೊಂಡರು. ವಾರಿಯರ್‌ಗಳ ಭುಜಕ್ಕೆ ಚುಚ್ಚುಮದ್ದು ಕೊಡುವುದರ ಮೂಲಕ ತಲಾ 0.5 ಮಿ.ಲೀನಷ್ಟು‌ ಲಸಿಕೆ ಹಾಕಲಾಯಿತು.  

ಎರಡು ಲಸಿಕೆಗಳು: ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆಯಾಗಿದ್ದರೆ, ಉಳಿದ ಕಡೆಗಳಿಗೆ ಕೋವಿಶೀಲ್ಡ್‌ ಪೂರೈಸಲಾಗಿತ್ತು. 

ಚಾಮರಾಜನಗರ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಿಗೆ ಕೋವ್ಯಾಕ್ಸಿನ್‌ ಲಸಿಕೆ ಪೂರೈಸಬೇಕು ಎಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿತ್ತು. ಅದರಿಂದಾಗಿ ಶುಕ್ರವಾರ ರಾತ್ರಿ 300 ಡೋಸ್‌ಗಳಷ್ಟು ಚಾಮರಾಜನಗರಕ್ಕೆ ಬಂದಿತ್ತು. 

ಕೋವಿಶೀಲ್ಡ್‌ ಲಸಿಕೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಿಸಲಾಗಿದ್ದರೆ, ಕೋವ್ಯಾಕ್ಸಿನ್‌ ಅನ್ನು ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಈ ಲಸಿಕೆ ಎರಡು ಕ್ಲಿನಿಕಲ್‌ ಟ್ರಯಲ್‌ಗಳಷ್ಟೇ ಮುಗಿಸಿದೆ. ಮೂರನೇ ಟ್ರಯಲ್‌ ಬಾಕಿ ಇದ್ದು, ಅದಕ್ಕೂ ಮೊದಲೇ, ತುರ್ತು ಸಂದರ್ಭಗಳಲ್ಲಿ ಇದನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.   

ಆರಂಭದಲ್ಲಿ ಹಿಂಜರಿಕೆ: ಶನಿವಾರ ಬೆಳಿಗ್ಗೆ 11 ಗಂಟೆಗೆ ಲಸಿಕೆ ವಿತರಣೆಗೆ ಚಾಲನೆ ನೀಡಬೇಕಿತ್ತು. ಉಳಿದ ಕಡೆಗಳಲ್ಲಿ ಆರಂಭವಾಗಿದ್ದರೂ, ಚಾಮರಾಜನಗರ ವೈದ್ಯಕೀಯ ಕಾಲೇಜಿನಲ್ಲಿ ಕೊಂಚ ವಿಳಂಬವಾಯಿತು. ಕೋವ್ಯಾಕ್ಸಿನ್‌ ಲಸಿಕೆಯ ಒಂದು ವಯಲ್‌ನಲ್ಲಿ 20 ಡೋಸ್‌ ಇರುವುದರಿಂದ, 20 ಮಂದಿ ವಾರಿಯರ್‌ಗಳು ಇರಬೇಕಿತ್ತು. ಆರಂಭದಲ್ಲಿ ವೈದ್ಯರು ಸೇರಿದಂತೆ ಹಲವರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದರು. ಮೊದಲು ಲಸಿಕೆ ಪಡೆದ 20 ಜನರಲ್ಲಿ ಕಾಲೇಜಿನ ಡಿ–ಗ್ರೂಪಿನ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. 

ಡಿ–ಗ್ರೂಪ್‌ ನೌಕರ 22 ವರ್ಷದ ಮಂಜುನಾಥ್‌ ಅವರು ಮೊದಲಿಗರಾಗಿ ಲಸಿಕೆ ಪಡೆದರು. ಕಾಲೇಜಿನ ನಿರ್ದೇಶಕ ಹಾಗೂ ಡೀನ್‌ ಡಾ.ಸಂಜೀವ್‌ ಅವರು ಎರಡನೆಯವರಾಗಿ ಲಸಿಕೆ ಹಾಕಿಸಿಕೊಂಡು ಇತರರಲ್ಲಿ ಧೈರ್ಯ ತುಂಬುವ ಯತ್ನ ಮಾಡಿದರು. ಮೈಕ್ರೊಬಯಾಲಜಿ ವಿಭಾಗದ ವೈದ್ಯೆ ಡಾ.ಶರ್ಲಿ ಆರ್‌. ಅವರು ಚಾಮರಾಜನಗರದಲ್ಲಿ ಲಸಿಕೆ ಹಾಕಿಸಿಕೊಂಡ ಮೊದಲ ಮಹಿಳೆ. ಮೈಕ್ರೊಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ಸತೀಶ್‌, ಕಾಲೇಜಿನ ಡಾ.ಗಿರೀಶ್‌ ಸೇರಿದಂತೆ ಹಲವರು ಲಸಿಕೆ ಹಾಕಿಸಿಕೊಂಡು ಇತರರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಮಧ್ಯಾಹ್ನದ ಮೇಲೆ ಮತ್ತೆ 40 ಮಂದಿ ಲಸಿಕೆ ಹಾಕಿಸಿಕೊಂಡರು. 

ಆರೋಗ್ಯದ ಮೇಲೆ ನಿಗಾ: ಲಸಿಕೆ ಹಾಕುವುದಕ್ಕೂ ಮುನ್ನ ನೋಂದಾಯಿತರ ವಿವರ ದಾಖಲಿಸಿಕೊಂಡು, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಯಿತು. ನಂತರ ಅವರ ರಕ್ತದ ಒತ್ತಡ, ಆಮ್ಲಜನಕದ ಮಟ್ಟವನ್ನು ಪರಿಶೀಲಿಸಲಾಯಿತು. ಲಸಿಕೆ ನೀಡಿದ ನಂತರ ಅರ್ಧ ಗಂಟೆ ಅವರ ಆರೋಗ್ಯದ ಮೇಲೆ ನಿಗಾ ಇಟ್ಟು, ನಂತರ ಕಳುಹಿಸಿಕೊಡಲಾಯಿತು. 

ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಶಿಕಲಾ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ ಇತರರು ಇದ್ದರು. 

ಯಾರಿಗೂ ಸಮಸ್ಯೆಯಾಗಿಲ್ಲ: ಡಿಎಚ್‌ಒ

ಮೊದಲ ದಿನದ ಅಭಿಯಾನ ಮುಕ್ತಾಯದ ನಂತರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಲಸಿಕೆ ವಿತರಣೆ ಕಾರ್ಯ ಯಶಸ್ವಿಯಾಗಿ ನಡೆದಿದೆ. ಶೇ 64ರಷ್ಟು ಪ್ರಗತಿಯಾಗಿದೆ. ಲಸಿಕೆ ಹಾಕಿಸಿಕೊಂಡವರು ಆರೋಗ್ಯದಿಂದ ಇದ್ದಾರೆ. 22 ದಿನಗಳ ನಂತರ ಇವರಿಗೆ ಇನ್ನೊಂದು ಡೋಸ್‌ ಲಸಿಕೆ ಹಾಕಲಾಗುತ್ತದೆ. ಆರಂಭದಲ್ಲಿ ಲಸಿಕೆ ಬಗ್ಗೆ ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ಕ್ರಮೇಣ ಅದು ಕಡಿಮೆಯಾಗುತ್ತದೆ. ಸೋಮವಾರ ಇನ್ನಷ್ಟು ಜನರು ಲಸಿಕೆ ಹಾಕಿಸಿಕೊಳ್ಳುವ ವಿಶ್ವಾಸವಿದೆ’ ಎಂದರು. 

ಎರಡೂ ಸುರಕ್ಷಿತ: ಜಿಲ್ಲಾಧಿಕಾರಿ 

ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಲಸಿಕೆ ಅಭಿಯಾನವನ್ನು ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಇದು ಭಾರತೀಯರಿಗೆ ಸಂಭ್ರಮದ ದಿನ. ದೇಶದಲ್ಲಿ ಕೋವಿಡ್‌ ಹಾವಳಿ ಆರಂಭಗೊಂಡು ಒಂದು ವರ್ಷದ ಒಳಗೆ ಲಸಿಕೆ ಅಭಿವೃದ್ಧಿ ಪಡಿಸಿ, ವಿತರಣೆ ಮಾಡಲಾಗುತ್ತಿದೆ. ಈ ಪೈಕಿ ಕೋವ್ಯಾಕ್ಸಿನ್‌ ನಮ್ಮ ದೇಶದಲ್ಲೇ ಅಭಿವೃದ್ಧಿಯಾದ ಲಸಿಕೆ. ಕೋವ್ಯಾಕ್ಸಿನ್‌ ಎರಡು ಕ್ಲಿನಿಕಲ್‌ ಟ್ರಯಲ್‌ಗೆ ಒಳಪಟ್ಟಿದೆ. ಇನ್ನೊಂದು ಬಾಕಿ ಇದೆ. ಹಾಗಾಗಿ, ಕೆಲವರು ಹಾಕಿಸಿಕೊಳ್ಳಲು ಯೋಚಿಸುವುದು ಸಹಜ. ಆದರೆ, ಈಗಾಗಲೇ ಅದು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಎಲ್ಲ ಪರೀಕ್ಷೆಗಳ ನಂತರವೇ ಕೇಂದ್ರ ಸರ್ಕಾರ ಅದರ ಬಳಕೆಗೆ ಅನುಮತಿ ನೀಡಿದೆ’ ಎಂದರು. 

‘ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಎರಡೂ ಲಸಿಕೆಗಳು ಸುರಕ್ಷಿತ. ಯಾರೂ ಈ ಬಗ್ಗೆ ಆತಂಕ ಪಡಬೇಕಾಗಿಲ್ಲ. ಡೀನ್‌, ಮೈಕ್ರೊಬಯಾಲಜಿ ಮುಖ್ಯಸ್ಥರು ಸೇರಿದಂತೆ ಕಾಲೇಜಿನ ಹಲವರು ಈಗಾಗಲೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಉಳಿದವರೂ ಮುಂದೆ ಹಾಕಿಸಿಕೊಳ್ಳಲಿದ್ದಾರೆ’ ಎಂದರು. 

ಲಸಿಕೆ ಹಾಕಿಸಿಕೊಂಡವರ ಮಾತು

‘ಲಸಿಕೆ ಪಡೆಯಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದೇನೆ. ಮೊದಲಿಗನಾಗಿ ಲಸಿಕೆ ಹಾಕಿಸಿಕೊಂಡಿರುವುದಕ್ಕೆ ಖುಷಿ ಇದೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಲಸಿಕೆ ಪಡೆದ ನಂತರ ನಾನು ಆರಾಮವಾಗಿದ್ದೇನೆ. ಎಲ್ಲರೂ ಧೈರ್ಯವಾಗಿ  ಹಾಕಿಸಿಕೊಳ್ಳಬಹುದು’ ಎಂದು ಚಾಮರಾಜನಗರದಲ್ಲಿ ಲಸಿಕೆ ಪಡೆದ ಮೊದಲಿಗ, ವೈದ್ಯಕೀಯ ಕಾಲೇಜಿನ ಡಿ–ಗ್ರೂಪ್‌ ನೌಕರ ಮಂಜುನಾಥ್‌ ಅವರು ಹೇಳಿದರು. 

‘ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇದನ್ನು ಹಾಕಿಸಿಕೊಂಡರೆ ಕೋವಿಡ್‌–19 ಬರುವುದನ್ನು ತಡೆಯಬಹುದು. ಲಸಿಕೆ ಹಾಕಿಸಿಕೊಂಡ ನಂತರ ನನಗೆ ಏನೂ ಆಗಿಲ್ಲ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಮೈಕ್ರೊಬಯಾಲಜಿ ವಿಭಾಗದ ಡಾ.ಶರ್ಲಿ ಆರ್‌ ಅವರು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು