ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆ : ಪಡಿತರ ಚೀಟಿ ತಿದ್ದುಪಡಿಗೆ ಜನಸಂದಣಿ

Published 25 ಜುಲೈ 2023, 5:46 IST
Last Updated 25 ಜುಲೈ 2023, 5:46 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಗ್ಯಾರಂಟಿ ಯೋಜನೆ ಪಡೆಯಲು ಪಡಿತರ ಚೀಟಿ ತಿದ್ದುಪಡಿಗಾಗಿ ಪಟ್ಟಣದ ತಾಲ್ಲೂಕು ಕಚೇರಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ  ಮುಂದೆ ಸೋಮವಾರ ಜನ ಜಂಗುಳಿ ಕಂಡುಬಂತು.

ಗ್ರಾಮೀಣ ಪ್ರದೇಶದ ನೂರಾರು ಮಂದಿ ಕಚೇರಿ ಬಳಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತಿದ್ದರು.

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ತಾಯಿ ಅಥವಾ ಪತ್ನಿ ಕುಟುಂಬದ ಮುಖ್ಯಸ್ಥೆ ಆಗಿರಬೇಕು ಎಂಬ ನಿಯಮದ ಕಾರಣ ‌ತಿದ್ದುಪಡಿಗೆ ಸೋಮವಾರ ಬೆಳಿಗ್ಗೆಯಿಂದಲೇ ಜನರು ಸಾಲಿನಲ್ಲಿ ನಿಂತಿದ್ದರು. ಜನಜಂಗುಳಿ ಹೆಚ್ಚಿದ್ದ ಕಾರಣದಿಂದ ಅಧಿಕಾರಿಗಳು ಕಚೇರಿ ಬಾಗಿಲು ಬಂದ್ ಮಾಡಿ ಕಿಟಕಿ ಮೂಲಕ ಅರ್ಜಿ ಸ್ವೀಕರಿಸಿದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹೈರಾಣಾದರು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬೇಕು ಎನ್ನುವ ಉದ್ದೇಶದಿಂದ ಹಲವು ಮಂದಿ ಬೆಳಿಗ್ಗೆ 8 ಗಂಟೆಗೆ ಕಚೇರಿ ಮುಂದೆ ತಿಂಡಿ, ಊಟ ಮಾಡದೆ ಸಾಲಿನಲ್ಲಿ ಕಾದು ನಿಂತಿದ್ದರು. ಈ ಮಧ್ಯೆ ಜನರ ನಡುವೆ ನೂಕಾಟ, ತಳ್ಳಾಟ ನಡೆಯಿತು. ಈ ಸಂದರ್ಭ ಗೊಂದಲ ಸೃಷ್ಟಿಯಾಯಿತು. ನಂತರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯೆ ಪ್ರವೇಶಿಸಿ ಜನರನ್ನು ಸಮಾಧಾನ ಪಡಿಸಿದರು. ಕೆಲವರು ಮಕ್ಕಳ ಸಮೇತ ಆಗಮಿಸಿದ್ದ ಕಾರಣ ಮಹಿಳೆಯರು ಪರದಾಡುವಂತಾಯಿತು.

ತೆರಕಣಾಂಬಿ ನಾಡ ಕಚೇರಿಯಲ್ಲೂ ಸರತಿ ಸಾಲು: ಗೃಹಲಕ್ಷ್ಮಿ ಸೇರಿದಂತೆ ಇನ್ನಿತರ ಹಲವು ಯೋಜನೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವ ಕಾರಣ ತಿದ್ದುಪಡಿಗಾಗಿ ತೆರಕಣಾಂಬಿ ನಾಡ ಕಚೇರಿ ಮುಂದೆ ಮಹಿಳೆಯರು ಮತ್ತು ಮಕ್ಕಳು ಸಾಲುಗಟ್ಟಿ ನಿಂತಿದ್ದರು.

ನಾಡ ಕಚೇರಿಗೆ ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆ ಜೋಡಣೆ, ವಿಳಾಸ ತಿದ್ದುಪಡಿ, ಆಧಾರ್ ಅಪ್ಡೇಟ್ ಮತ್ತು ಹೆಬ್ಬೆಟ್ಟಿನ ಗುರುತು ನೀಡಲು ಅಧಿಕ ಜನರು ಬಂದ ಕಾರಣ ಕೆಲಕಾಲ ನೂಕು ನುಗ್ಗಲು ಉಂಟಾಯಿತು.

ಮತ್ತೊಂದು ಕೌಂಟರ್ ತೆರೆಯಲು ಒತ್ತಾಯ: ಆಧಾರ್ ತಿದ್ದುಪಡಿಗಾಗಿ ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರು ನಾಡ ಕಚೇರಿಗೆ ಆಗಮಿಸುತ್ತಿರುವುದರಿಂದ ಗಂಟೆಗಟ್ಟಲೇ ಕಾಯುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತೊಂದು ಕೌಂಟರ್ ತೆರೆಯುವ ಮೂಲಕ ಜನದಟ್ಟಣೆ ಕಡಿಮೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಹಿಳೆಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT