ಗುರುವಾರ , ಆಗಸ್ಟ್ 11, 2022
24 °C
ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಚ್ಚರಿಕೆ

ಎಸ್‌ಸಿ, ಎಸ್‌ಟಿ ಕಲ್ಯಾಣ ಯೋಜನೆ: ನಿರ್ಲಕ್ಷಿಸಿದರೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಪ್ರತಿ ಇಲಾಖೆಯಲ್ಲಿ ಇರುವ ಕಾರ್ಯಕ್ರಮಗಳ ಸೌಲಭ್ಯ ಹೆಚ್ಚು ಫಲಾನುಭವಿಗಳಿಗೆ ತಲುಪಿಸಲು ಯೋಜನಾ ಬದ್ಧವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ಶನಿವಾರ ತಾಕೀತು ಮಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗಾಗಿ ಇಲಾಖೆಗಳು ನೀಡುವ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಫಲಾನುಭವಿಗಳಿಗೆ ತಲುಪಿಸಬೇಕು. ವಿಳಂಬ ಮಾಡದೇ ಪ್ರಗತಿ ಸಾಧಿಸಬೇಕು. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಗಂಭೀರ ಕ್ರಮಗಳಿಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

‘ಪ್ರತಿ ಇಲಾಖೆಯಲ್ಲಿ ಲಭಿಸುವ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಇದರಿಂದ ಫಲಾನುಭವಿಗಳು ಯೋಜನೆಗಳ ಪ್ರಯೋಜನ ಪಡೆಯಲು ಅನುಕೂಲವಾಗಲಿದೆ. ಇಲಾಖೆಗಳು ತಮ್ಮಲ್ಲಿರುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಮಾಹಿತಿ ನೀಡಿ ಜನರನ್ನು ಜಾಗೃತರನ್ನಾಗಿಸಬೇಕು’ ಎಂದರು.

ನೋಟಿಸ್‌ಗೆ ಸೂಚನೆ: ಕೆಲವು ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಡಾ.ಎಂ.ಆರ್‌.ರವಿ ಅವರು, ಗೈರಾದವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

‘ಸಭೆಗೆ ಪೂರ್ವಾನುಮತಿ ಇಲ್ಲದೇ ಗೈರು ಹಾಜರಾಗುವುದನ್ನು ಸಹಿಸಲಾಗುವುದಿಲ್ಲ. ಮುಂದಿನ ಸಭೆಗಳಿಗೆ ಗೈರು ಹಾಜರಾಗುವ ಧೋರಣೆ ಕಂಡು ಬಂದಲ್ಲಿ ಶಿಸ್ತು ಕ್ರಮಗಳಿಗೆ ಶಿಫಾರಸು ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾಗಿರಥಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಜಿಲ್ಲಾ ಪಂಚಾಯಿಯಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಕೃಷಿ ಜಂಟಿ ನಿರ್ದೇಶಕಿ ಚಂದ್ರಕಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಸಿ. ವೀರಭದ್ರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್ ಮತ್ತಿತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು